
ಬೆಂಗಳೂರು, ಮೇ 30: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯಗೆ (Siddaramaiah) ಹೈಕಮಾಂಡ್ ಮಟ್ಟದಲ್ಲಿ ಮೊದಲ ಹಿನ್ನಡೆಯಾಗಿದೆಯೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರವಾಗಿ ಗರಿಗೆದರಿವೆ. ಹೊಸ ಸರ್ಕಾರ ರಚನೆಗೂ ಮುನ್ನ ಪಕ್ಷ ಮತ್ತು ಸರ್ಕಾರದ ನಡುವೆ ಉತ್ತಮ ಸಮನ್ವಯಕ್ಕಾಗಿ ‘ಸಮನ್ವಯ ಸಮಿತಿ (Coordination Committee)’ ರಚನೆ ಮಾಡಬೇಕು ಎಂದು ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಪ್ರಸ್ತಾವನೆಯನ್ನು ಕಾಂಗ್ರೆಸ್ ನಾಯಕತ್ವ ನಿರಸ್ಕರಿಸಿದೆ. ಈ ಬೆಳವಣಿಗೆಯು ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ನೂತನ ಸಚಿವ ಸಂಪುಟದಲ್ಲಿ ಸಾಕಷ್ಟು ಸಂಖ್ಯೆಯ ಹಿರಿಯ ಸಚಿವರು ಇರಲಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು ಎನ್ನುವ ದೂರದೃಷ್ಟಿಯಿಂದ ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ. ಆದರೆ, ಈ ಮನವಿಯನ್ನು ನಿರಾಕರಿಸಿರುವ ಕಾಂಗ್ರೆಸ್ ಹೈಕಮಾಂಡ್, ‘ರಾಜ್ಯದಲ್ಲಿ ಯಾವುದೇ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿಲ್ಲ. ಕಾಂಗ್ರೆಸ್ ಪಕ್ಷವೇ ಸ್ವತಂತ್ರವಾಗಿ ಅಧಿಕಾರ ನಡೆಸುತ್ತಿರುವುದರಿಂದ ಪ್ರತ್ಯೇಕ ಸಮನ್ವಯ ಸಮಿತಿಯ ಅಗತ್ಯವೇ ಇಲ್ಲ. ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯದ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷರೇ ನಿಭಾಯಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದೆ. ಸಿಎಂ ಪಟ್ಟದಿಂದ ಕೆಳಗಿಳಿಯುತ್ತಿದ್ದಂತೆಯೇ ಹೈಕಮಾಂಡ್ ಸಿದ್ದರಾಮಯ್ಯ ಅವರ ಮಾತಿಗೆ ಮೊದಲಿನಷ್ಟು ಮನ್ನಣೆ ನೀಡುತ್ತಿಲ್ಲವೇ ಎಂಬ ಅನುಮಾನಕ್ಕೆ ಇದು ಆಸ್ಪದ ಮಾಡಿಕೊಟ್ಟಿದೆ.
ಈ ಎಲ್ಲಾ ರಾಜಕೀಯ ವಿದ್ಯಮಾನಗಳ ನಡುವೆಯೂ ಬೆಂಗಳೂರಿನ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಶಾಸಕರು ಮತ್ತು ಪ್ರಮುಖ ನಾಯಕರ ಭೇಟಿ ಮುಂದುವರಿದಿದೆ. ಹಿರಿಯ ನಾಯಕ ಕೆಜೆ ಜಾರ್ಜ್, ಶಾಸಕ ಪೊನ್ನಣ್ಣ, ಪುಟ್ಟರಂಗಶೆಟ್ಟಿ ಹಾಗೂ ಬಿಲ್ಕಿಸ್ ಬಾನು ಸೇರಿದಂತೆ ಹಲವು ಪ್ರಮುಖರು ಕಾವೇರಿ ನಿವಾಸಕ್ಕೆ ಧಾವಿಸಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಹೊಸ ಇತಿಹಾಸ ಬರೆಯಲು ಹೈಕಮಾಂಡ್ ಮುಂದಾಗಿದೆ. ಶಿಷ್ಟಾಚಾರದಂತೆ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಶಾಸಕರ ಮೇಲಿದ್ದರೂ, ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ತಡೆಯಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಸಭೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರ ಮೂಲಕವೇ ಡಿಕೆ ಶಿವಕುಮಾರ್ ಅವರ ಹೆಸರನ್ನು ನೂತನ ಸಿಎಲ್‌ಪಿ ನಾಯಕ ಸ್ಥಾನಕ್ಕೆ ಪ್ರಸ್ತಾಪಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ. ಸಿದ್ದರಾಮಯ್ಯ ಅವರು ಹೆಸರು ಸೂಚಿಸಿದ ಬಳಿಕ ಅದಕ್ಕೆ ಶಾಸಕರು ಅಧಿಕೃತ ಅನುಮೋದನೆ ನೀಡಲಿದ್ದಾರೆ. ಪ್ರಸ್ತಾವನೆ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಅವರು ಧನ್ಯವಾದ ಭಾಷಣ ಮಾಡಲಿದ್ದಾರೆ. ತದನಂತರ ನೂತನ ಶಾಸಕಾಂಗ ಪಕ್ಷದ ನಾಯಕರು ಸರ್ಕಾರ ರಚನೆಯ ಹಕ್ಕು ಮಂಡಿಸಲು ಲೋಕಭವನ (ರಾಜಭವನ) ಕ್ಕೆ ಅಧಿಕೃತ ಮಾಹಿತಿ ರವಾನಿಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ