AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷ್ ಸೈನ್ಯ ಸೇರಿದ ಕೊಪ್ಪಳದ ಶಹಪುರ ಗ್ರಾಮದ ಹೈದ; ತಾಯ್ನಾಡಿನ ಬಗ್ಗೆ ಇವರಿಗಿದೆ ಅಪಾರ ಹೆಮ್ಮೆ

ಇಂಗ್ಲೆಂಡ್​ನ ಜಾಸ್ಮಿನ್ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್ ಡೈಸಿ ಎಂಬ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಕಳೆದ 10 ವರ್ಷದಿಂದ ಇಂಗ್ಲೆಂಡ್​ನಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್ ಮತ್ತು ಮಿಲಿಟರಿ ಸೇವೆಗಾಗಿ ಅಫ್ಘಾನಿಸ್ಥಾನ, ಕೀನ್ಯಾ ಮತ್ತು ಜರ್ಮನಿಯಲ್ಲೂ ಸಂಚರಿಸಿದ್ದಾರೆ. ಬ್ರಿಟಿಷ್ ಪ್ರಜೆಯಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿದ್ದಾರೆ ಗೋಪಿ.

ಬ್ರಿಟಿಷ್ ಸೈನ್ಯ ಸೇರಿದ ಕೊಪ್ಪಳದ ಶಹಪುರ ಗ್ರಾಮದ ಹೈದ; ತಾಯ್ನಾಡಿನ ಬಗ್ಗೆ ಇವರಿಗಿದೆ ಅಪಾರ ಹೆಮ್ಮೆ
ಇಂಗ್ಲೆಂಡ್​ನ ಈಸ್ಟ್ ಮಿಡ್ಲ್​ನಲ್ಲಿರುವ ಬ್ರಿಟಿಷ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗೋಪಿ
TV9 Web
| Edited By: |

Updated on:Jul 06, 2021 | 3:50 PM

Share

ಕೊಪ್ಪಳ: ಜಾಣನಾದವನು ಗತಕಾಲದ ಘಟನೆಗಳನ್ನು ಕುರಿತು ಶೋಕಿಸುವುದಿಲ್ಲ. ಭವಿಷ್ಯದ ಬಗ್ಗೆಯೂ ಚಿಂತಿಸುವುದಿಲ್ಲ. ಇಂದಿನ ದಿನವೇ ಸುದಿನ. ನಾಳೆಯದು ಕಠಿಣವೆಂದು ಭಾವಿಸುತ್ತಾನೆ. ಹೀಗೆ ಭಾವಿಸಿ ಮುನ್ನೆಡೆದರೆ ಏನಾದರೂ ಒಂದನ್ನು ಸಾಧಿಸಲು ಸಾಧ್ಯ ಎಂಬ ಮಾತಿಗೆ ನಿದರ್ಶನ ಕೊಪ್ಪಳ ಜಿಲ್ಲೆಯ ಗೋಪಾಲ. ಬಡತನ ಮತ್ತು ಅನಕ್ಷರತೆ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ ವಾಕೋಡೆ, ಕೌಟುಂಬಿಕ ಸಮಸ್ಯೆಯ ಸುಳಿಗಳಿಂದ ಸುಧಾರಿಸಿಕೊಂಡು, ವರ್ತಮಾನ ಕಾಲದಲ್ಲಿ ಕಾರ್ಯನಿರತನಾಗಿರುವುದು ಅವಶ್ಯವೆಂದು ತಿಳಿದು, ಅಚ್ಚರಿಯ ಬೆಳವಣಿಗೆಯೊಂದಕ್ಕೆ ಸಾಕ್ಷಿ ಎಂಬಂತೆ ಬ್ರಿಟಿಷ್ ಸೈನ್ಯ ಸೇರಿದ್ದಾರೆ.

ಗೋಪಾಲ ವಾಕೋಡೆಯವರ ಬಾಲ್ಯ ಗೋಪಾಲ ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದ ಎಲ್ಲಪ್ಪ ವಾಕೋಡೆ ಮತ್ತು ಫಕೀರವ್ವರ ಐದು ಮಕ್ಕಳಲ್ಲಿ ಗೋಪಿ ಕೂಡ ಒಬ್ಬರು. ಇವರಿಗೆ ಒಬ್ಬ ಅಣ್ಣ ಮತ್ತು ಮೂವರು ಸಹೋದರಿಯರಿದ್ದಾರೆ. ಗೋಪಿ ಬಾಲ್ಯದಲ್ಲಿದ್ದಾಗ ತಂದೆ ಎಲ್ಲಪ್ಪ ವಾಕೋಡೆ ಕುಟುಂಬ ಸಮೇತ ಗೋವಾಕ್ಕೆ ತೆರಳುತ್ತಾರೆ. ಆಗ ಮದ್ಯವ್ಯಸನಿಯಾಗಿ ರೂಪುಗೊಂಡ ಎಲ್ಲಪ್ಪ ವಾಕೋಡೆ 1995ರಲ್ಲೇ ಸಾವಿಗೀಡಾಗುತ್ತಾರೆ. ತಂದೆಯ ನಿಧನದ ಬಳಿಕ ತಾಯಿಯೂ ಮೃತಪಟ್ಟಿದ್ದಾರೆ. ಅಣ್ಣ ಮದುವೆಯಾಗಿ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗೋಪಾಲನ ಅತ್ತಿಗೆ ಶಹಪುರ ಗ್ರಾಮದಲ್ಲಿಯೇ ಇದ್ದಾರೆ. ಇನ್ನು ಮೂವರು ಸೋದರಿಯರಿಗೆ ಅದೇ ಗ್ರಾಮದ ಗೋಗರೆ ಮತ್ತು ನಾಯ್ಕಲ್ ಮನೆತನದ ಯುವಕರಿಗೆ ಮದುವೆ ಮಾಡಿಕೊಡಲಾಗಿದೆ.

ಕಡಲೆಕಾಯಿ ಮಾರಟಕ್ಕೆ ಮುಂದಾದ ಗೋಪಾಲ ಎಲ್ಲಪ್ಪ ವಾಕೋಡೆ ಕುಟುಂಬದೊಂದಿಗೆ ಗೋವಾಕ್ಕೆ ತೆರಳುತ್ತಾರೆ. ಆಗ ಗೋಪಾರಿಗೆನಿಗೆ 10 ವರ್ಷ. ಗೋವಾಕ್ಕೆ ತೆರಳಿದಾಗ ಅಲ್ಲಿ ಆಗಿದ್ದೇ ಬೇರೆ. ತಂದೆ ಮದ್ಯವ್ಯಸನಿಯಾಗಿ ತಾಯಿಗೆ ಕಿರುಕುಳ ನೀಡುತ್ತಿರುತ್ತಾರೆ. ತಂದೆ-ತಾಯಿಯ ಜಗಳ ಕಂಡು ಗೋಪಿ ದಿನಾಲೂ ಕಣ್ಣೀರು ಹಾಕುತ್ತಿರುತ್ತಾರೆ. ಅಣ್ಣ ಮತ್ತು ಸೋದರಿಯರು ಮುಗ್ಧರು. ಈ ದೌರ್ಭಾಗ್ಯದ ದಿನಗಳಿಗಾಗಿ ದುಃಖಿಸಿದ್ದ ಅವರು, ಜೀವನಕ್ಕೆ ಏನು ಮಾಡುವುದೆಂದು ಯೋಚಿಸಿ ಶಿಕ್ಷಣ ತೊರೆದು ಅಲ್ಲಿನ ಬೀಚ್​ಗಳಲ್ಲಿ ಕಡಲೆ ಮಾರಾಟ ಮಾಡಲು ಅಣಿಯಾಗುತ್ತಾರೆ. ದೈಹಿಕ ಶ್ರಮ, ಹಣಕಾಸಿನ ಸ್ಥಿತಿ ಲೆಕ್ಕಿಸದೇ ಕುಟುಂಬ ನಿರ್ವಹಣೆಗೆ ಹಗಲಿರುಳೂ ಶ್ರಮಿಸುತ್ತಾರೆ.

gopal vakode

ಗೋಪಾಲ ವಾಕೋಡೆ

ಬ್ರಿಟಿಷ್ ಹಿರಿಯ ನಾಗರಿಕರ ಕಣ್ಣಿಗೆ ಬಿದ್ದ ಗೋಪಾಲ ಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ಬ್ರಿಟಿಷ್ ನಾಗರಿಕತೆಯ ಹಿರಿಯ ದಂಪತಿಗಳು ತಮ್ಮ ನಿಕಟವರ್ತಿ ಲಿಂಡಾ ಹ್ಯಾನ್ಸನ್ ಅವರೊಂದಿಗೆ ಪ್ರತಿವರ್ಷ ಭಾರತ ಪ್ರವಾಸ ಕೈಗೊಳ್ಳುವುದು ವಾಡಿಕೆ. ಗೋವಾದ ಬೆತೆಲ್ ಬಾತಿ ಬೀಚ್​ನಲ್ಲಿ ಗೋಪಿ ಕಡಲೆ ಮಾರಾಟ ಮಾಡುವುದನ್ನು ಆಕಸ್ಮಿಕವಾಗಿ ಇವರು ಗಮನಿಸುತ್ತಾರೆ. ಬಿಸಿಲನ್ನೂ ಲೆಕ್ಕಿಸದೇ ಬೀಚಿನಲ್ಲಿ ಬಾಲಕ ಗೋಪಿ ಪ್ರವಾಸಿಗರಿಗೆ ಕಡಲೆ ತಗೊಳ್ಳಿ ಎಂದು ವಿನಂತಿಸುವ ಪರಿ, ಮುಗ್ಧತೆ, ಅವರಲ್ಲಿನನ ಜೀವನ ಪ್ರೀತಿ ಕಂಡು ಮಮ್ಮಲ ಮರುಗುತ್ತಾರೆ. ಅಂತಃಕರಣದಿಂದ ಈತನಿಗೆ ಹತ್ತಿರದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಹಾಗೂ ಕಡಲೆ ಮಾರಾಟ ಮಾಡುವ ಬಿದಿರಿನ ಬುಟ್ಟಿ, ವಾಚು ಕೊಡಿಸುತ್ತಾರೆ. ನಂತರ ಮಡಗಾಂವ್ ನಗರದ ರಸ್ತೆಯ ಪಕ್ಕದಲ್ಲಿರುವ ಆತನ ಟೆಂಟ್ ಮತ್ತು ತಾಯಿಯನ್ನೂ ನೋಡಿ ಮರುಕ ಪಡುತ್ತಾರೆ. ಆತನಿಗೆ ಆ ವರ್ಷ ಬೀಳ್ಕೊಟ್ಟು ಮುಂದಿನ ವರ್ಷ ಭೇಟಿಯಾಗುವ ಭರವಸೆ ನೀಡಿ ವಿದಾಯ ಹೇಳುತ್ತಾರೆ.

ಪ್ರೀತಿಯ ಧಾರೆ ಎರೆದ ಬ್ರಿಟಿಷರು ಕಡಲೆ ಮಾರುತ್ತಿದ್ದ ಗೋಪಿಯ ದೈನ್ಯತೆ, ಬಡತನ ಐದಾರು ವರ್ಷ ಕಳೆದರೂ ನೀಗಿರಲಿಲ್ಲ. ವರ್ಷಕ್ಕೊಮ್ಮೆ ಬರುತ್ತಿದ್ದ ಬ್ರಿಟಿಷ್ ದಂಪತಿಗಳು ಗೋಪಿಗೆ ಹಣಕಾಸಿನ ನೆರವು ನೀಡಿ ಅಂತಃಕರಣದ ಧಾರೆ ಎರೆಯುತ್ತಿದ್ದರು. 19 ವರ್ಷ ಆಗುತ್ತಿದ್ದಂತೆ ಗೋಪಿಯನ್ನು ಇಂಗ್ಲೆಂಡ್​ಗೆ ಕರೆದುಕೊಂಡು ಹೋದರು. ಬ್ರಿಟ್ಸ್ ಕೊರೊಲ್ ಮತ್ತು ಕೊಲಿನ್ ಹ್ಯಾನ್ಸನ್ ದಂಪತಿಗಳು ಅಲ್ಲಿಂದಲೇ ಗೋಪಿಯ ಕುಟುಂಬದವರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಗೋಪಿಯ ಸಹೋದರಿಯರ ಮದುವೆ ಮತ್ತು ಮನೆ ಕಟ್ಟಲು ನೆರವಾದರು. ಈ ನಡುವೆ ಗೋಪಿಗೆ ಇಂಗ್ಲೆಂಡ್​ನ ಸ್ಥಳೀಯ ಮಿಲಿಟರಿ ಬ್ಯಾರಕ್​ನಲ್ಲಿ ಕ್ರಿಕೆಟ್ ತರಬೇತಿ ಕೊಡಿಸಿದರು. ಹಂತ ಹಂತವಾಗಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೋಪಿ ಸ್ಥಳೀಯ ಕ್ರಿಕೆಟ್ ತಂಡದ ನಾಯಕನಾಗಿ ಗಮನ ಸೆಳೆಯುತ್ತಾರೆ. ಆತನ ನಡೆ, ನುಡಿ, ಆಟೋಟದಲ್ಲಿನ ಪ್ರತಿಭೆಗೆ ಸಂಘ-ಸಂಸ್ಥೆಗಳು ಅಭಿನಂದಿಸಿ ಆದರಿಸುತ್ತವೆ. ಪ್ರಶಸ್ತಿ, ಮಾನ ಸನ್ಮಾನಗಳನ್ನು ನೀಡಿ ಗೌರವಿಸುತ್ತವೆ. ಕ್ರಿಕೆಟ್ ಆಟದಲ್ಲಿನ ಇವರ ಚಾಣಾಕ್ಷತೆ ಕಂಡು ಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಸೈನ್ಯಕ್ಕೆ ಸೇರಿಸಿಕೊಳ್ಳುವೆಯಾ? ಎಂದಾಗ ಗೋಪಿ ಸಮ್ಮತಿಸುತ್ತಾರೆ. ಸದ್ಯ ಗೋಪಿ ಇಂಗ್ಲೆಂಡ್​ನ ಈಸ್ಟ್ ಮಿಡ್ಲ್​ನಲ್ಲಿರುವ ಬ್ರಿಟಿಷ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬ್ರಿಟಿಷ್ ಪ್ರಜೆಯಾದ ಗೋಪಿ ಇಂಗ್ಲೆಂಡ್​ನ ಜಾಸ್ಮಿನ್ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್ ಡೈಸಿ ಎಂಬ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಕಳೆದ 10 ವರ್ಷದಿಂದ ಇಂಗ್ಲೆಂಡ್​ನಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್ ಮತ್ತು ಮಿಲಿಟರಿ ಸೇವೆಗಾಗಿ ಅಫ್ಘಾನಿಸ್ಥಾನ, ಕೀನ್ಯಾ ಮತ್ತು ಜರ್ಮನಿಯಲ್ಲೂ ಸಂಚರಿಸಿದ್ದಾರೆ. ಬ್ರಿಟಿಷ್ ಪ್ರಜೆಯಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿದ್ದಾರೆ ಗೋಪಿ. ಮೂರು ವರ್ಷಕ್ಕೊಮ್ಮೆ ಜನ್ಮ ನೀಡಿದ ಗ್ರಾಮಕ್ಕೆ ಆಗಮಿಸಿ ಬಂಧುಗಳೊಂದಿಗೆ ಬೆರೆಯುತ್ತಾರೆ. ಬಡತನದ ಬೇಗುದಿಯಲ್ಲಿ ಬೆಂದ ಗೋಪಾಲ್ ವಾಕೋಡೆ ಸ್ವಸಾಮರ್ಥ್ಯದಿಂದ ಬ್ರಿಟಿಷ್ ಮಿಲಿಟರಿ ಪಡೆ ಸೇರಿದ ಬಗೆ ಅಚ್ಚರಿಗೆ ಕಾರಣವಾಗಿದೆ. ಗೋಪಾಲರ ನಡೆ, ನುಡಿ, ವಿನಮ್ರತೆ, ಕ್ರೀಡೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ, ವಿದೇಶೀ ಮಾಧ್ಯಮಗಳು ವರದಿ ಮಾಡಿವೆ. ಕೊಪ್ಪಳದ ಕುಗ್ರಾಮವೊಂದರಲ್ಲಿ ಜನಿಸಿ ಬ್ರಿಟಿಷ್ಬ್ರಿಟಿಷ್ ಮಿಲಿಟರಿ ಹೇಗೆ ಸೇರಿದರು? ಎನ್ನುವ ಕುರಿತು ಸದ್ಯದಲ್ಲೇ ಜೀವನಗಾಥೆ ಚಿತ್ರೀಕರಣವಾಗಲಿದೆ.

ನಾನು ಮೂಲತಃ ಕೊಪ್ಪಳ ಜಿಲ್ಲೆಯವನು, ಚಿಕ್ಕಂದಿನದಲ್ಲಿ ಸಾಕಷ್ಟು ಬಡತನ ಅನುಭವಿಸಿದ್ದೇನೆ. ಬ್ರಿಟಿಷ್ ದಂಪತಿಗಳು ನನ್ನನ್ನು ಮನೆ ಮಗನಂತೆ ಸಾಕಿದ್ದಾರೆ. ಅವರಿಂದಲೇ ನಾನು ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೂರು ವರ್ಷ ನಾಲ್ಕು ವರ್ಷಕ್ಕೊಮ್ಮೆ ಗ್ರಾಮಕ್ಕೆ ಹೋಗಿ ಬರುತ್ತೇನೆ. ನಾನು ಯಾವತ್ತೂ ಅವರ ಋಣ ಮರೆಯಲು ಸಾಧ್ಯವಿಲ್ಲ ಎಂದು ಗೋಪಾಲ್ ವಾಕೋಡೆ ತಿಳಿಸಿದ್ದಾರೆ.

ನಮ್ಮೂರಿನ ಯುವಕ ಬ್ರಿಟಿಷ್ ಸೈನ್ಯದಲ್ಲಿ ಸೇನೆ ಸೇರಿದ್ದು, ನಮೆಗಲ್ಲ ಹೆಮ್ಮೆಯ ವಿಷಯ. ಗೋಪಾಲ್ ಚಿಕ್ಕಂದಿನಲ್ಲಿ ಸಾಕಷ್ಟು ಬಡತನ ಅನುಭವಿಸಿದ್ದಾರೆ. ಹತ್ತು ವರ್ಷದವನಿದ್ದಾಗಲೇ ದುಡಿಯಲು ಹೋಗಿದ್ದ, ಇದೀಗ ಆತ ನಮಗೆಲ್ಲ ಮಾದರಿಯಾಗಿದ್ದಾನೆ ಎಂದು ಗ್ರಾಮಸ್ಥರಾದ ರಾಜು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 17 ಚಾಕ್​ಪೀಸ್​ಗಳ ಮೇಲೆ ರಾಷ್ಟ್ರಗೀತೆಯ ಕೆತ್ತನೆ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಯುವಕನ ಸಾಧನೆ

ಅಮೆರಿಕಾದಿಂದ ಅಂತರಿಕ್ಷಕ್ಕೆ ಹೊರಟ ಗುಂಟೂರು ಯುವತಿ; ಕಲ್ಪನಾ ಚಾವ್ಲಾ ನಂತರ ಸಾಧನೆಯತ್ತ ಮತ್ತೋರ್ವ ಭಾರತೀಯ ನಾರಿ

Published On - 3:46 pm, Tue, 6 July 21