ಮುಖ್ಯಮಂತ್ರಿ ಬದಲಿಸಿದರೆ ಬಿಜೆಪಿ ಇತಿಹಾಸ ಮುಗೀತು: ಬಿಎಸ್ವೈ ಪರ ನಿಂತ ಶಾಮನೂರು ಶಿವಶಂಕರಪ್ಪ, ರೇಣುಕಾಚಾರ್ಯ, ಎಂ ಬಿ ಪಾಟೀಲ್
ಯಡಿಯೂರಪ್ಪ ಪರ 65ಜನ ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ಹೈಕಮಾಂಡ್ ಈವರೆಗೆ ಯಾವುದೇ ಸೂಚನೆ ನೀಡಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು: ಬಿ.ಎಸ್. ಯಡಿಯೂರಪ್ಪನವರೇ (BS Yediyurappa) ಕರ್ನಾಟಕ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು. ಇಡೀ ಲಿಂಗಾಯತ ಸಮುದಾಯ ಯಡಿಯೂರಪ್ಪ ಪರ ಇದೆ. ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಸಮುದಾಯ ಮುಂದೆ ಹೋಗಲಿದೆ. ಯಡಿಯೂರಪ್ಪ ಬದಲಿಸಿದರೆ ಬಿಜೆಪಿ (Karnataka BJP) ಇತಿಹಾಸ ಮುಗೀತು ಎಂದು ಮುಖ್ಯಮಂತ್ರಿ ಭೇಟಿ ಬಳಿಕ ಶಾಮನೂರು ಶಿವಶಂಕರಪ್ಪ ಕಟು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ, ಎಂ.ಪಿ. ರೇಣುಕಾಚಾರ್ಯ, ಎಂ.ಬಿ. ಪಾಟೀಲ್ ಹಾಗೂ ಶಾಮನೂರು ಶಿವಶಂಕರಪ್ಪ ಕೂಡ ಯಡಿಯೂರಪ್ಪ ಪರ ನಿಂತಂತಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಚರ್ಚೆ ಮಧ್ಯೆ ಸಿಎಂ ಅಧಿಕೃತ ನಿವಾಸಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆ ಅಪಾರ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಕೂಡ ಹೇಳಿಕೆ ನೀಡಿದ್ದಾರೆ.
ಸಿಎಂ ಆಗಿ ಅವರನ್ನ ಮುಂದುವರಿಸುವುದು ಬಿಜೆಪಿಗೆ ಬಿಟ್ಟಿದ್ದು. ಆದರೆ ಯಡಿಯೂರಪ್ಪರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ದೆಹಲಿಗೆ ಹೋದಾಗ ಸುದ್ದಿ ಮಾಡಿಸಿ ಅವರನ್ನ ವೀಕ್ ಮಾಡಿದ್ರು. ನಿನ್ನೆ ಆಡಿಯೋ ಬಿಡುಗಡೆ ಮಾಡಿ ಮತ್ತಷ್ಟು ವೀಕ್ ಮಾಡಿದ್ದಾರೆ. ಯಡಿಯೂರಪ್ಪ ನಮ್ಮ ಸಮುದಾಯದ ನಾಯಕ, ನನಗೆ ನೋವಾಗಿದೆ. ಅವರ ಪರ ಹೇಳಿಕೆ ಕೊಟ್ಟು ಲಾಭ ಪಡೆವ ಉದ್ದೇಶ ನನ್ನದಲ್ಲ. ಆದರೆ, ಬಿಜೆಪಿ ವರಿಷ್ಠರು ನಡೆದುಕೊಳ್ಳುತ್ತಿರುವ ರೀತಿಗೆ ಬೇಸರ ಇದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವರು ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾವಣೆ ಅಸಾಧ್ಯ ಮತ್ತೊಂದೆಡೆ ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಮಾತನಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹೈಕಮಾಂಡ್, ರಾಜ್ಯದ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಹೆಸರಿನಲ್ಲಿ ಫೇಕ್ ಆಡಿಯೋ ಸೃಷ್ಠಿ ಮಾಡಿದ್ದಾರೆ. ನಾನು ಕಟೀಲ್ ಅವರಿಗೆ ಕರೆ ಮಾಡಿ ಈ ಬಗ್ಗೆ ಕೇಳಿದ್ದೇನೆ. ಕಟೀಲ್ ಅವರಿಗೆ ಕೆಟ್ಟ ಹೆಸರು ತರಲು ಫೇಲ್ ಆಡಿಯೋ ಸೃಷ್ಠಿ ಮಾಡಲಾಗಿದೆ. ರಾಷ್ಟ್ರೀಯ ನಾಯಕರು ಹಾಗೂ ಬಿಎಸ್ವೈ ಸಂಬಂಧ ಹಳೆಯದು. ಇವರು ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾವಣೆ ಅಸಾಧ್ಯ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ಯಡಿಯೂರಪ್ಪ ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಬಿಎಸ್ವೈ ಅದೆಷ್ಟು ಬಾರಿ ಜೈಲಿಗೆ ಹೋಗಿದ್ದಾರೆ. ನಿರಾಣಿ ಕೈಗಾರಿಕೋದ್ಯಮಿ, ಬಿಸಿನೆಸ್ಗಾಗಿ ದೆಹಲಿಗೆ ಹೋಗಿರಬಹುದು. ದೆಹಲಿಗೆ ಹೋದಾಕ್ಷಣ ರಾಜಕಾರಣಕ್ಕೆ ಎನ್ನಲಾಗದು. ನಾನು ನಾಳೆ ನಾಡಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದಾಕ್ಷಣ ರಾಷ್ಟ್ರೀಯ ನಾಯಕರು ಸಮಯ ನೀಡಿ ಮತಾಡಿಸ್ತಾರೆ ಎಂಬುದು ಸುಳ್ಳು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
65ಜನ ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ ಯಡಿಯೂರಪ್ಪ ಪರ 65ಜನ ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ಹೈಕಮಾಂಡ್ ಈವರೆಗೆ ಯಾವುದೇ ಸೂಚನೆ ನೀಡಿಲ್ಲ. ಕೂಸು ಹುಟ್ಟುವುದಕ್ಕೂ ಮೊದಲು ಕುಲಾಯಿ ಹೊಲಿಸುವುದೇಕೆ. ಹಿಂದುಳಿದ, ವೀರಶೈವ ಮಠಾಧೀಶರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಇವತ್ತಿನ ಬೇಟಿ ವಿಶೇಷವೇನಲ್ಲ, ಶ್ರೀಗಳ ಸಲಹೆ ಸ್ಚೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪರನ್ನು ಬದಲಿಸಿದರೆ ಬಿಜೆಪಿಗೆ ದೊಡ್ಡ ಕಳಂಕ ಅಂಟಿಕೊಳ್ಳಲಿದೆ: ರಂಭಾಪುರಿ ಶ್ರೀ
ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಚರ್ಚೆ ಮಧ್ಯೆ ಸಿಎಂ ಅಧಿಕೃತ ನಿವಾಸಕ್ಕೆ ಶಾಮನೂರು ಶಿವಶಂಕರಪ್ಪ ಭೇಟಿ
Published On - 7:56 pm, Mon, 19 July 21