ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯನ್ನು ಬೆಂಗಳೂರಲ್ಲೇ ಲಾಕ್​ ಮಾಡಿದ ಸಚಿವ ಜಮೀರ್

|

Updated on: Oct 27, 2024 | 12:39 PM

ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಕೋಟಿಯಲ್ಲಿ ಈ ಬಾರಿ ಗೆಲ್ಲಲು ಕಾಂಗ್ರೆಸ್​​ ಪಣತೊಟ್ಟಿದ್ದು, ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಇನ್ನು ಟಿಕೆಟ್​ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ​​ ಅಜ್ಜಂಪೀರ್ ಖಾದ್ರಿ ಅವರನ್ನು ನಾಯಕರು ಮನವೊಲಿಸಿದ್ದಾರೆ. ಆದರೂ ಸಹ ಸಚಿವ ಜಮೀರ್ ಅಹಮ್ಮದ್ ಖಾನ್, ಅಜ್ಜಂಪೀರ್ ಖಾದ್ರಿ ಅವರನ್ನು ಬೆಂಗಳೂರಿನಲ್ಲೇ ಲಾಕ್ ಮಾಡಿದ್ದಾರೆ.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯನ್ನು ಬೆಂಗಳೂರಲ್ಲೇ ಲಾಕ್​ ಮಾಡಿದ ಸಚಿವ ಜಮೀರ್
ಶಿಗ್ಗಾಂವಿ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ
Follow us on

ಬೆಂಗಳೂರು/ಹಾವೇರಿ, (ಅಕ್ಟೋಬರ್ 27): ಶಿಗ್ಗಾಂವಿ ಉಪಚುನಾವಣೆಯ ಟಿಕೆಟ್​ ಕೈತಪ್ಪಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ ಅವರೊಂದಿಗೆ ಸಂಧಾನ ಸಭೆ ಯಶಸ್ವಿಯಾದಂತಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಚಿವರ ಜಮಿರ್ ಅಹಮ್ಮದ್ ಖಾನ್ ಅವರೇ ಖಾದ್ರಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಅ.30ರಂದು ಖಾದ್ರಿ ಅವರು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರೆ ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಸಚಿವ ಜಮಿರ್ ಅಹಮ್ಮದ್ ಖಾನ್ ಅವರು ಖಾದ್ರಿಯವರನ್ನು ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲೇ ಲಾಕ್ ಮಾಡಿದ್ದಾರೆ.

ಹೌದು.. ಬೆಂಬಲಿಗರು ನಾಮಪತ್ರ ಹಿಂಪಡೆಯದಂತೆ ಒತ್ತಡ ಹೇರಬಹುದು. ಹಾಗೇ ಮನಸ್ಸು ಬದಲಿಸಿ ಪಕ್ಷೇತರರಾಗಿ ಮುಂದುವರಿದರೆ ಕಷ್ಟ ಎಂಬ ಆತಂಕ ಕಾಂಗ್ರೆಸ್​​ ನಾಯಕರಿಗೆ ಇದೆ. ಹೀಗಾಗಿ ಅಕ್ಟೋಬರ್ 30ರವರೆಗೆ ಬೆಂಗಳೂರಿನಲ್ಲೇ ಇರುವಂತೆ‌ ಖಾದ್ರಿಗೆ ಸೂಚನೆ ನೀಡಲಾಗಿದೆ. ಅದರಂತೆ ಜಮೀರ್ ಅಹಮ್ಮದ್ ಖಾನ್ ಬೆಂಗಳೂರಿನಲ್ಲಿರುವ ತಮ್ಮ ಸರ್ಕಾರಿ ನಿವಾಸರಲ್ಲೇ ಖಾದ್ರಿ ಅವರನ್ನು ಲಾಕ್ ಮಾಡಿ ಇಟ್ಟಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟ: ಸಂಧಾನಕ್ಕೆ ಬಂದಿದ್ದ ಜಮೀರ್ ಕಾರಿನ ಗಾಜು ಪುಡಿಪುಡಿ

ನಿನ್ನೆ(ಅಕ್ಟೋಬರ್ 26) ಸಿಎಂ, ಡಿಸಿಎಂ ಸೇರಿಕೊಂಡು ಖಾದ್ರಿ ಅವರೊಂದಿಗೆ ಸಂಧಾಣ ಸಭೆ ನಡೆಸಿದರು. ಈ ವೇಳೆ ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಖಾದ್ರಿ ಅವರಿಗೆ ಮನವಿ ಮಾಡಿದ್ದಾರೆ. ಆದ್ರೆ, ಖಾದ್ರಿ ಬೆಂಬಲಿಗರ ಅಭಿಪ್ರಾಯ ಪಡೆದು ನಿರ್ಧರಿಸುವುದಾಗಿ ಹೇಳಿದ್ದಾರೆ. ಹಾಗೇ ನಮ್ಮ ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳಿ ಎಂದಿದ್ದಾರೆ. ಆದರೆ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆಸುವುದು ಬೇಡ. ಶಿಗ್ಗಾಂವಿಗೆ ಬಂದು ನಿಮ್ಮ ಬೆಂಬಲಿಗರನ್ನು ಭೇಟಿಯಾಗಿ ಮಾತನಾಡುತ್ತೇವೆ ಎಂದು ನಾಯಕರು ತಿಳಿಸಿದ್ದಾರೆ. ಹೀಗಾಗಿ ನೀವು ಬೆಂಗಳೂರಲ್ಲೇ ಇರಿ ಎಂದು ಖಾದ್ರಿಗೆ ತಾಕೀತು ಮಾಡಿರುವ ಜಮೀರ್, ತಮ್ಮ ಸರ್ಕಾರಿ ನಿವಾಸದಲ್ಲಿ ಇರಿಸಿದ್ದಾರೆ.

ಅಕ್ಟೋಬರ್ 30 ನಾಮಪತ್ರ ವಾಪಸ್ ಪಡೆದುಕೊಳ್ಳಲು ಕೊನೆದಿವಾಗಿದ್ದು, ಅಂದೇ ಜಮೀರ್ ಅಹಮ್ಮದ್ ಖಾನ್ ಅವರು ಖಾದ್ರಿಯವರನ್ನು ಬೆಂಗಳೂರಿನಿಂದ ಶಿಗ್ಗಾಂವಿಗೆ ಕರೆದುಕೊಂಡು ಹೋಗಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಹೊಂದಾಣಿಕೆ ಆರೋಪ ಮಾಡಿದ್ದ ಖಾದ್ರಿ

ಟಿಕೆಟ್​ ಸಿಗದಿದ್ದಕ್ಕೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸನ್ನದ್ಧರಾಗಿದ್ದ ಖಾದ್ರಿ ಅವರನ್ನು ತಡೆಯಲು ಶುಕ್ರವಾರ ಶಿಗ್ಗಾವಿಗೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಆಗಮಿಸಿದ್ದರು. ಆದ್ರೆ, ಖಾದ್ರಿ ಅವರು ಜಮೀರ್ ಕೈಗೆ ಸಿಗದೇ  ಇನ್ನೇನು ಕೆಲವೇ ನಿಮಿಷಗಳ ಬಾಕಿ ಇರುವಾಗೇ ಬೈಕ್​ನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದರು. ಈ ಮೂಲಕ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಅಲ್ಲದೇ ಕಾಂಗ್ರೆಸ್​ ನಾಯಕರ ವಿರುದ್ಧ ಹೊಂದಾಣಿಕೆ ರಾಜಕಾರಣ ಆರೋಪ ಮಾಡಿದ್ದರು. ಈ ಮೂಲಕ ರಾಜ್ಯರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಅಲ್ಲದೇ ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದರು.

ಇದರಿಂದ ಕಂಗಾಲಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೀಡಿದ ಬುಲಾವ್‌ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿಗೆ ತೆರಳಿದ ಖಾದ್ರಿ, ಜಮೀರ್‌ ಅಹ್ಮದ್‌ಖಾನ್‌ ಮಧ್ಯಸ್ಥಿಕೆಯಲ್ಲಿ ಸಿಎಂ ಜತೆಗೆ ಬೆಳಗ್ಗೆ ಮಾತುಕತೆ ನಡೆಸಿದ್ದಾರೆ. ಆದ್ರೆ, ಅಕ್ಟೋಬರ್ 30ರಂದು ಖಾದ್ರಿ ಅವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.