ರಾಜೀನಾಮೆ ಹಿಂಪಡೆಯುವುದಾಗಿ ಘೋಷಿಸಿದ ನಿರ್ಗಮಿತ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್
ರಾಜೀನಾಮೆ ಹಿಂಪಡೆಯುವುದಾಗಿ ಶಿಲ್ಪಾ ನಾಗ್ ಘೋಷಿಸಿದ್ದಾರೆ. ನಿರ್ಗಮಿತ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನಾನು ನನ್ನ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ ಎಂದು ಘೋಷಿಸಿದ್ದಾರೆ.
ಮೈಸೂರು: ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದ ಮೈಸೂರಿನ ಇಬ್ಬರು ಅಧಿಕಾರಿಗಳ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸದ್ಯ ರಾಜೀನಾಮೆ ಹಿಂಪಡೆಯುವುದಾಗಿ ಶಿಲ್ಪಾ ನಾಗ್ ಘೋಷಿಸಿದ್ದಾರೆ. ನಿರ್ಗಮಿತ ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನಾನು ನನ್ನ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ ಎಂದು ಘೋಷಿಸಿದ್ದಾರೆ.
ನನ್ನ ಜೀವನದಲ್ಲಿ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ ನಾನು ರಾಜೀನಾಮೆ ಕೊಟ್ಟಿದ್ದು ಒಂದು ಉದ್ದೇಶಕ್ಕಾಗಿ. ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದು ಅಂತ. ಆದರೆ ಇದೀಗಾ ನಾನು ಹಾಗೂ ಅವರು ವರ್ಗಾವಣೆ ಆಗಿದ್ದಾರೆ. ನನ್ನ ರಾಜೀನಾಮೆ ಆದೇಶ ವಾಪಸ್ಸು ಪಡೆದಿದ್ದೇನೆ ಎಂದು ಮೈಸೂರಿನಲ್ಲಿ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿಕೆ ನೀಡಿದ್ದಾರೆ.
ಯಾರ ಮನೆಯಲ್ಲಿ ರಿಯಲ್ ಎಸ್ಟೇಟ್ ಡೀಲರ್‌ಗಳಿದ್ದಾರೆ. ಯಾರ ಮನೆಯಲ್ಲಿ ಬ್ರೋಕರ್ಸ್ ಇದ್ದಾರೆಂದು ಗೊತ್ತಿದೆ. ಬೇಕಿದ್ರೆ ನನ್ನ, ಅವರ ಟ್ರ್ಯಾಕ್ ರೆಕಾರ್ಡ್ ತೆಗೆದು ನೋಡಲಿ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾನಾಗ್ ಆಕ್ರೋಶ ಹೊರ ಹಾಕಿದ್ದಾರೆ. ಅನಧಿಕೃತ ವ್ಯಕ್ತಿಯನ್ನು ಅಧಿಕೃತ ಮನೆಗೆ ಕರೆಸಿಕೊಂಡಿದ್ದಾರೆ. ಅವರಿಗೆ ಏನು ಮಾಹಿತಿಯನ್ನು ಕೊಟ್ಟಿದ್ದಾರೆಂದೂ ಗೊತ್ತಿದೆ. ನನ್ನ ಜೀವನದಲ್ಲಿ ಇಂತಹ ಅಧಿಕಾರಿಯನ್ನು ನೋಡಿರಲಿಲ್ಲ. ರೋಹಿಣಿ ಕೇಳಿದ ಎಲ್ಲದಕ್ಕೂ ನಾನು ಲೆಕ್ಕವನ್ನು ಕೊಟ್ಟಿದ್ದೇನೆ. ಆದರೆ ಅವರು ಅನಗತ್ಯವಾಗಿ ಗಬ್ಬೆಬ್ಬಿಸುವ ಕೆಲಸ ಮಾಡಿದ್ರು. ಯಾವ ತನಿಖೆ ಬೇಕಾದರೂ ಮಾಡಲಿ ಅದಕ್ಕೆ ದಾಖಲೆ ಇದೆ.
ರೋಹಿಣಿ ಸಿಂಧೂರಿ 12 ಕೋಟಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದ್ಯಾವ 12 ಕೋಟಿ ಎಂದು ರೋಹಿಣಿ ಸಿಂಧೂರಿಯೇ ಹೇಳಲಿ. ನಾನು ಒಂದು ಪೈಸೆಯೂ ಕ್ಯಾಷ್ ರೂಪದಲ್ಲಿ ಪಡೆದುಕೊಂಡಿಲ್ಲ. ನಾನು ತೆಗೆದುಕೊಂಡಿರುವುದಕ್ಕೆ ದಾಖಲೆ ಪಾಲಿಕೆಯಲ್ಲಿಯೇ ಇದೆ. ಇದು ಕೇವಲ ಮೂರು ದಿನದಲ್ಲಿ ಉಂಟಾಗಿರುವ ಗೊಂದಲವಷ್ಟೇ. ಮೈಸೂರಿಗೆ ಯಾವ ಅಧಿಕಾರಿ ಬಂದರೂ ಕೆಲಸ ಮಾಡುತ್ತಾರೆ. ಆದರೆ ಹಾಳು ಮಾಡುವಂತಹ ಅಧಿಕಾರಿಗಳು ಮಾತ್ರ ಬೇಡ. ಈ ಮಾತು ಹೇಳಿರುವುದಕ್ಕೆ ನನಗೆ ಯಾವುದೇ ಬೇಸರ ಇಲ್ಲ ಎಂದು ಮೈಸೂರಿನಲ್ಲಿ ಐಎಎಸ್ ಅಧಿಕಾರಿ ಶಿಲ್ಪಾನಾಗ್ ಹೇಳಿದ್ದಾರೆ.
ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದ ಶಿಲ್ಪಾ ನಾಗ್ ಕಳೆದ ಮೂರು ದಿನಗಳಿಂದ ಸರ್ಕಾರಕ್ಕೆ ತಲೆನೋವಾಗಿದ್ದ ಮೈಸೂರು ಐಎಎಸ್ ಅಧಿಕಾರಿಗಳ ಜಗಳಕ್ಕೆ ಬ್ರೇಕ್ ಹಾಕಲು ಸರ್ಕಾರ ಟ್ರಾನ್ಸ್ಫರ್ ಅಸ್ತ್ರ ಬಳಸಿದೆ. ಇಬ್ಬರು ಮಹಿಳಾ ಅಧಿಕಾರಿಗಳ ಜಗಳ ಇವತ್ತು ಕೊನೆಯಾಗುತ್ತೆ, ನಾಳೆಗೆ ಮುಗಿಯುತ್ತೆ ಅಂದುಕೊಂಡಿದ್ದ ಸರ್ಕಾರ ಕೊನೆಗೆ ಇಬ್ಬರನ್ನೂ ಮೈಸೂರಿನಿಂದ ವರ್ಗಾವಣೆ ಮಾಡಿದೆ. ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಆಗಿದ್ದ ಶಿಲ್ಪಾನಾಗ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ನಿನ್ನೆ ಮಧ್ಯಾಹ್ನ ಆಡಳಿತಾತ್ಮಕವಾಗಿ ಐಎಎಸ್ಗೆ ಶಿಲ್ಪಾ ನಾಗ್ ರಾಜೀನಾಮೆ ನೀಡಿದ್ದರು. ಸಿಎಸ್‌ಗೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದರು. 2 ದಿನಗಳ ಹಿಂದೆ ನೀಡಿದ್ದ ರಾಜೀನಾಮೆ ಸ್ವೀಕರಿಸಿರಲಿಲ್ಲ. ಹೀಗಾಗಿ ನಿನ್ನೆ ಆಡಳಿತಾತ್ಮಕವಾಗಿ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅಂಗೀಕಾರವಾಗುವವರೆಗೂ ಶಿಲ್ಪಾನಾಗ್ ನಿಯೋಜಿತ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸದ್ಯ ಈಗ ತಮ್ಮ ರಾಜೀನಾಮೆ ಹಿಂಪಡೆಯುವುದಾಗಿ ಶಿಲ್ಪಾ ನಾಗ್ ಘೋಷಿಸಿದ್ದಾರೆ.
ನಿನ್ನೆ ರಾತ್ರಿ ಟ್ರಾನ್ಸ್ಫರ್ ಆದೇಶ ಹೊರಡಿಸಿದ ಸರ್ಕಾರ, ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯನ್ನ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಿದೆ. ಮತ್ತೊಂದೆಡೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ರನ್ನ ಆರ್ಡಿಪಿಆರ್ ನಿರ್ದೇಶಕಿಯಾಗಿ ಟ್ರಾನ್ಸ್ಫರ್ ಮಾಡಲಾಗಿದೆ.
ಇದನ್ನೂ ಓದಿ: ಆಡಳಿತಾತ್ಮಕವಾಗಿ ಮೈಸೂರು ಪಾಲಿಕೆ ಆಯುಕ್ತೆ ಸ್ಥಾನಕ್ಕೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ ಶಿಲ್ಪಾ ನಾಗ್
Published On - 1:03 pm, Sun, 6 June 21