ಶಿವಮೊಗ್ಗ: ಬಿಸಿಎಂ ಹಾಸ್ಟೇಲ್​ಗಳ ರೇಷನ್​ ದುರ್ಬಳಕೆ, ಟ್ಯೂಷನ್​ನಲ್ಲಿ ಗೋಲ್​ಮಾಲ್; ಹೇಳೋರು ಇಲ್ಲ, ಕೇಳೋರು ಇಲ್ಲ

ಶಿವಮೊಗ್ಗ ಜಿಲ್ಲೆಯಲ್ಲಿ ಸದ್ಯ ಅಧಿಕಾರಿಗಳದ್ದೆ ದರ್ಬಾರು. ಜಿಲ್ಲಾ ಉಸ್ತುವರಿ ಸಚಿವರು ಶಿವಮೊಗ್ಗದತ್ತ ತಲೆ ಹಾಕದೇ ಇರುವುದರಿಂದ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಜಿಲ್ಲೆಯಲ್ಲಿಯರುವ ಬಿಸಿಎಂ ಹಾಸ್ಟೇಲ್​ಗಳು ಅವ್ಯವಸ್ಥೆ ಆಗರವಾಗಿವೆ.

ಶಿವಮೊಗ್ಗ: ಬಿಸಿಎಂ ಹಾಸ್ಟೇಲ್​ಗಳ ರೇಷನ್​ ದುರ್ಬಳಕೆ, ಟ್ಯೂಷನ್​ನಲ್ಲಿ ಗೋಲ್​ಮಾಲ್; ಹೇಳೋರು ಇಲ್ಲ, ಕೇಳೋರು ಇಲ್ಲ
ಶಿವಮೊಗ್ಗದ ಬಿಸಿಎಂ ಹಾಸ್ಟೇಲ್​ಗಳಲ್ಲಿ ರೇಷನ್​ ದುರ್ಬಳಕೆ
Follow us
TV9 Web
| Updated By: Rakesh Nayak Manchi

Updated on: Nov 20, 2022 | 12:59 PM

ಶಿವಮೊಗ್ಗ: ಜಿಲ್ಲೆಯಲ್ಲಿ ಅಧಿಕಾರಿಗಳನ್ನು ಹೇಳುವವರು ಇಲ್ಲ, ಕೇಳುವವರು ಇಲ್ಲ ಎಂಬಂತಾಗಿದೆ. ಪರಿಣಾಮ ತಾವು ಆಡಿದ್ದೇ ಆಟ ಎನ್ನುವಂತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬೇರೆ ಜಿಲ್ಲೆಯವರಾಗಿದ್ದರಿಂದ ಜಿಲ್ಲೆ ಕಡೆಗೆ ಬರುವುದು ಅಪರೂವಾಗಿದೆ. ಪರಿಣಾಮವಾಗಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಜಿಲ್ಲೆಯ ಬಿಸಿಎಂ ಹಾಸ್ಟೇಲ್​ಗಳಲ್ಲಿ ಸಮಸ್ಯೆಗಳ (BCM Hostel Problems) ಆಗರವೇ ಸೃಷ್ಟಿಯಾಗಿದೆ. ಸರಕಾರದ ಮಾರ್ಗಸೂಚಿಯಂತೆ ಅವರಿಗೆ ಗುಣಮಟ್ಟದ ಅಹಾರ ಪೂರೈಕೆಯಾಗುತ್ತಿಲ್ಲ. ಓರ್ವ ವಾರ್ಡನ್​ನಿಂದ ಎರಡು ಮೂರು ಹಾಸ್ಟೇಟ್​ಗಳನ್ನು ನೋಡಿಕೊಳ್ಳಲಾಗುತ್ತಿದೆ. ಮೇನು ಚಾರ್ಟ್ ಪ್ರಕಾರ ಹಾಸ್ಟೇಲ್​ಗಳಲ್ಲಿ ತಿಂಡ, ಊಟ ನೀಡುತ್ತಿಲ್ಲ. ಯಾವ ಹಾಸ್ಟೇಲ್​ನಲ್ಲೂ ಟ್ಯೂಶನ್​ಗಳು ನಡೆಯುತ್ತಿಲ್ಲ. ಪ್ರತಿ ತಿಂಗಳ ಟ್ಯೂಶನ್ ಹೆಸರಿನಲ್ಲಿ 10 ರಿಂದ 15 ಸಾವಿರ ರೂಪಾಯಿ ಅನುದಾನ ದುರ್ಬಳಕೆ ಆಗುತ್ತಿದೆ.

ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ 17 ಬಿಸಿಎಂ ಹಾಸ್ಟೇಲ್​ಗಳಿವೆ. ಹಾಸ್ಟೇಲ್ ಶುಚಿಗೊಳಿಸಲು ಸಿಬ್ಬಂದಿಗಳಿಲ್ಲ. ವಿದ್ಯಾರ್ಥಿಗಳಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಹೊರಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಸಮವಸ್ತ್ರ ನೀಡಬೇಕು. ಆದರೆ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಿಸಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲು ಆಗಿದ್ದರಿಂದ ಅನುದಾನ ಮತ್ತು ಸೌಲಭ್ಯಗಳ ದುರುಪಯೋಗ ನಿರಂತರವಾಗಿ ನಡೆಯುತ್ತಲೇ ಇದೆ. ಹಾಸ್ಟೇಲ್ ಆಹಾರ ಪೂರೈಕೆ ಟೆಂಡರ್ ಪಡೆದ ಗುತ್ತಿಗೆದಾರರಲ್ಲಿ ನೂರೆಂಟು ಸಮಸ್ಯೆಗಳಿವೆ. ಆದರೂ ಗುತ್ತಿಗೆದಾರರಿಗೆ ಸರಕಾರದಿಂದ ಹಣ ಬಿಡುಗಡೆಯಾಗುತ್ತಿದೆ. ಈ ವಿಚಾರ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ಮತ್ತು ವಾರ್ಡನ್​ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟಿವಿ9ಗೆ ಭರವಸೆ ಕೊಟ್ಟಿದ್ದಾರೆ.

ಇದನ್ನೂ ಓದಿ: Bangalore Kadalekayi Parase: ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಶುರು

“ಆಹಾರ ಪೂರೈಕೆಗಳಲ್ಲಿ ಸಮಸ್ಯೆ ಇದೆ, ಕೆಲವೊಂದು ಟೆಂಡರ್​ಗಳಲ್ಲೂ ಗೊಂದಲಗಳಿವೆ. ಕೆಲವೊಂದು ಹಾಸ್ಟೆಲ್​ಗಳಿಗೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಮಸ್ಯೆ ಇರುವುದು ತಿಳಿದುಬಂದಿದೆ. ಅವುಗಳನ್ನು ಸರಿಪಡಿಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” – ಕೋಟಾ ಶ್ರೀನಿವಾಸ್ ಪೂಜಾರಿ, ಸಚಿವರು

BCM Hostel

ಪ್ಯಾಡ್, ಕೊಬ್ಬರಿ ಎಣ್ಣೆ, ಸಾಬೂನು, ಪೇಸ್ಟ್, ಬ್ರಶ್, ಬಟ್ಟೆ, ಬೆಡ್​ಶೀಟ್ ಹೀಗೆ ಅಗತ್ಯದ ವಸ್ತುಗಳನ್ನು ಉಚಿತವಾಗಿ ಪ್ರಾಥಮಿಕ ಮಕ್ಕಳ ಹಾಸ್ಟೇಲ್​ಗಳಿಗೆ ನೀಡಬೇಕು. ಆದರೆ ಬಂದಿರುವ ಎಲ್ಲ ರೇಷನ್ ಬಹುತೇಕ ಹಾಸ್ಟೇಲ್ ಮತ್ತು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಇನ್ನೂ ಹಾಸ್ಟೇಲ್ ವಾರ್ಡನ್​ ಮತ್ತು ಸಿಬ್ಬಂದಿಗಳ ಹಾಜರಿಯಲ್ಲೂ ದೊಡ್ಡ ಹೆಚ್ಚುಕಡಿಮೆ ಇದೆ. ಹಾಸ್ಟೇಲ್​ಗೆ ಇವರು ವಾರದಲ್ಲಿ ಒಂದು ಎರಡು ದಿನ ಮಾತ್ರ ಬರುತ್ತಾರೆ. ಆದರೆ ಹಾಜರಾತಿಯಲ್ಲಿ ಮಾತ್ರ ಎಲ್ಲಾ ದಿನಗಳಲ್ಲಿ ಬಂದಿರುವುದಾಗಿ ದಾಖಲಾಗಿರುತ್ತದೆ. ವಾರ್ಡನ್ ಮತ್ತು ಸಿಬ್ಬಂದಿಗಳು ಯಾವುದೇ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಈ ಹಾಸ್ಟೇಲ್​ಗಳ ಸಮಸ್ಯೆ ದಲಿತ ಸಂಘರ್ಷ ಸಮಿತಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

“ಸರ್ಕಾರದ ಆದೇಶದ ಪ್ರಕಾರ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ಹಾಸ್ಟೆಲ್​ ವಿದ್ಯಾರ್ಥಿಗಳಿಗೆ ನೀಡಬೇಕು. ಆದರೆ ಯಾವೊಂದು ಸೌಲಭ್ಯವೂ ಮಕ್ಕಳಿಗೆ ತಲುಪುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಬಗ್ಗೆ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದರೂ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ಬಗೆಹರಿಸಿಲ್ಲ. ಹೊಸದಾಗಿ ಬಂದ ನಿರ್ದೇಶಕರಿಗೂ ದೂರು ನೀಡಿದ್ದು, ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ, ಹೀಗಾಗಿ ಸ್ವಲ್ಪದಿವಸ ಕಾದು ನೋಡುತ್ತೇವೆ” – ರಂಗಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡರು

BCM Hostel

ಇದನ್ನೂ ಓದಿ: ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ: ಪೊಲೀಸರಿಂದ ಶಂಕಿತನ ಗುರುತು ಪತ್ತೆ

“ಒಂದು ವಾರದ ಹಿಂದೆಯಷ್ಟೇ ನಾನು ಉಪನಿರ್ದೇಶಕನಾಗಿ ನೇಮಕಗೊಂಡಿದ್ದೇನೆ. ಸಮಸ್ಯೆಗಳ ಬಗ್ಗೆ ಈಗಷ್ಟೇ ನನಗೆ ತಿಳಿದುಬಂದಿದೆ. ಹೀಗಾಗಿ ಒಂದೊಂದೇ ಹಾಸ್ಟೆಲ್​ಗಳಿಗೆ ಭೇಟಿ ನೀಡುತ್ತಿದ್ದೇನೆ. ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ಸರ್ಕಾರದಿಂದ ಒದಗಿಸಬೇಕಾದ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ನ್ಯಾಯಯುತವಾಗಿ ತಲುಪಿಸಲಾಗುವುದು” – ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು

BCM Hostel

ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹಾಸ್ಟೇಲ್​ಗಳ ವ್ಯವಸ್ಥೆ ಹದಗೆಟ್ಟು ಹೋಗಿದೆ. ನ್ಯಾಯಯುತವಾಗಿ ಬಿಸಿಎಂ ಹಾಸ್ಟೇಲ್​ನ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ತಲಪುತ್ತಿಲ್ಲ. ಹೀಗಾಗಿ ಹಾಸ್ಟೇಲ್​ಗಳಲ್ಲಿ ನಡೆಯುತ್ತಿರುವ ಅವ್ಯವವಹಾರ, ಗೋಲ್​ಮಾಲ್​ಗೆ ಬ್ರೇಕ್ ಹಾಕುವವರು ಯಾರು ಎನ್ನುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಗುತ್ತಿಲ್ಲ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ