ಶಿವಮೊಗ್ಗ: ಡಾ. ಸುಧಾಕರ್ ಅವರು ಮೊನ್ನೆ ( ಜೂನ್ 12) ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಜಿಲ್ಲಾಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊವಿಡ್ ಮತ್ತು ನಾನ್ ಕೊವಿಡ್ ಚಿಕಿತ್ಸೆ ಕುರಿತು ಮಾಹಿತಿ ಕಲೆ ಹಾಕಿದ್ದರು. ಅವರು ಬಂದು ಹೋಗಿ ಇನ್ನೂ ಎರಡು ದಿನವಾಗಿಲ್ಲ. ಅಷ್ಟರಲ್ಲೇ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೊವಿಡ್ ವಾರ್ಡ್ನಲ್ಲಿ ಸಮಸ್ಯೆಗಳು ಶುರುವಾಗಿದೆ. ಇಷ್ಟು ದಿನನಗಳ ಕಾಲ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಆರೈಕೆಗೆ ಕುಟುಂಬಸ್ಥರಿಗೆ ಅವಕಾಶವಿತ್ತು. ಆದರೆ ಹಠಾತ್ ಆಗಿ ಇಂದು ಎಲ್ಲ ಸೋಂಕಿತರ ಆರೈಕೆ ಮಾಡುತ್ತಿರುವ ಕುಟುಂಬಸ್ಥರನ್ನು ವಾರ್ಡ್ನಿಂದ ಹೊರಗೆ ಹಾಕಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಸೋಂಕಿತರ ಕುಟುಂಬಸ್ಥರು ಈ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದರು.
ಕುಟುಂಬಸ್ಥರನ್ನು ವಾರ್ಡ್ ಒಳಗೆ ಬಿಡದ ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲಿ ಪೊಲೀಸರು ಮತ್ತು ಸೋಂಕಿತರ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಹೀಗಾಗಿ 50ಕ್ಕೂ ಹೆಚ್ಚು ಸೋಂಕಿತರ ಕುಟುಂಬಸ್ಥರು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕುರಿತು ಬೇಸರ ಹೊರಹಾಕಿದರು. ಸೋಂಕಿತ ಪತಿಯನ್ನು ಆರೈಕೆ ಮಾಡಲು ಬಿಡುತ್ತಿಲ್ಲ. ಊಟ, ಔಷಧಿ, ಗಂಜಿ, ಕಾಫಿ ಟೀ ನೀಡಲು ಅವಕಾಶ ಕೊಡುತ್ತಿಲ್ಲ. ಕಳೆದ ಒಂದು ವಾರದಿಂದ ಕೊವಿಡ್ ವಾರ್ಡ್ ಒಳಗೆ ಹೋಗಲು ಅವಕಾಶ ಕೊಟ್ಟಿದ್ದರು. ಆದರೆ ಇಂದು ಹಠಾತ್ ಆಗಿ ಒಳಗೆ ಬಿಡುತ್ತಿಲ್ಲ. ಹೀಗೆ ಮಾಡಿದರೆ ಹೇಗೆ? ನನ್ನ ಪತಿಗೆ ಹೆಚ್ಚು ಕಡಿಮೆ ಆದರೆ ಜವಾಬ್ದಾರಿ ಯಾರು ಎಂದು ಶಿಕಾರಿಪುರದ ಮಹಿಳೆ ಜ್ಯೋತಿ ಟಿವಿ9 ಡಿಜಿಟಲ್ ಜತೆ ನೋವು ಹಂಚಿಕೊಂಡಿದ್ದಾರೆ.
ಆರೋಗ್ಯ ಸಚಿವರಿಗೆ ಎಲ್ಲವೂ ಸರಿಯಾಗಿದೆ. ಉತ್ತಮ ಚಿಕಿತ್ಸೆ ಸೇರಿದಂತೆ ಎಲ್ಲ ಸೌಲಭ್ಯಗಳು ಇದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಆದರೆ ಇಂದು ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಮತ್ತು ನಾನ್ ಕೊವಿಡ್ ರೋಗಿಗಳು ಔಷಧಿಯಿಲ್ಲದೇ ಪರದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ವೈದ್ಯರು ಚೀಟಿ ಬರೆದುಕೊಟ್ಟು ಔಷಧಿಗಳನ್ನು ತೆಗೆದುಕೊಳ್ಳಲು ಹೇಳಿದ್ದಾರೆ. ಆದರೆ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಔಷಧಿ ವಿತರಣೆ ವಿಭಾಗದಲ್ಲಿ ಬಹುತೇಕ ಮಾತ್ರೆಗಳು ಸಿಗುತ್ತಿಲ್ಲ. ಬಡ ರೋಗಿಗಳು ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಬಂದರೆ ಇಲ್ಲಿ ಯಾವ ವ್ಯವಸ್ಥೆಯೂ ಇಲ್ಲ ಎಂದು ಸೋಂಕಿತರ ಸಂಬಂಧಿಕರಾದ ಮಂಜುನಾಥ್ ತಿಳಿಸಿದ್ದಾರೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಮತ್ತು ನಾನ್ ಕೊವಿಡ್ ರೋಗಿಗಳು ಸದ್ಯ ಪರದಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೇ ಲಾಕ್ಡೌನ್ ಮುಂದುವರೆದಿದೆ. ಈ ನಡುವೆ ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಸಾವು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಿರುವಾಗಲೇ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕಿರುವ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಪದೇ ಪದೇ ಯಡವಟ್ಟು ಮಾಡಿಕೊಳ್ಳುತ್ತಿರುವುದು ರೋಗಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಬಸವರಾಜ್ ಯರಗಣವಿ
ಇದನ್ನೂ ಓದಿ: