Sanchari Vijay Funeral: ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ನಡೆಯಲಿದೆ ಸಂಚಾರಿ ವಿಜಯ್ ಅಂತ್ಯಸಂಸ್ಕಾರ
Sanchari Vijay Death: ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ.
ಚಿಕ್ಕಮಗಳೂರು: ನಟ ಸಂಚಾರಿ ವಿಜಯ್ ಪಾರ್ಥಿವ ಶರೀರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ತಲುಪಿದೆ. ಅವರ ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಮತ್ತು ಸ್ನೇಹಿತರು ನೆರೆಯುತ್ತಿದ್ದಾರೆ. ಸಂಚಾರಿ ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ಬಿಲ್ವಪತ್ರೆ, ಭಸ್ಮ ಬಳಸಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಪ್ಪೂರು ಯತೀಶ್ವರ ಶಿವಾಚಾರ್ಯಶ್ರೀ ತಿಳಿಸಿದ್ದಾರೆ. ಸ್ಥಳದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಜಿಲ್ಲಾಧಿಕಾರಿ, ಎಸ್ಪಿ ಸ್ಥಳದಲ್ಲೇ ಮೊಕ್ಕಾ ಹೂಡಿದ್ದಾರೆ.
ಸಮಚಾರಿ ವಿಜಯ್ ಅವರ ಮೃತದೇಹ ವೀಕ್ಷಿಸಲು ಗ್ರಾಮಸ್ಥರು, ಅವರ ಊರಿ ಗೆಳೆಯರು ನೆರೆದಿದ್ದಾರೆ. ಪೊಲೀಸ್ ಸಿಬ್ಬಂದಿ ಹೆಚ್ಚಿನ ಜನರನ್ನು ಸ್ಥಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಕೊವಿಡ್ ನಿಯಮಾನುಸಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ ವಿಧಾನ ನಡೆಯಲಿದೆ.
ಎರಡು ದಿನಗಳ ಹಿಂದೆ ನಡೆದ ಭೀಕರ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್(38) ತಮ್ಮ ವಿಭಿನ್ನ ಅಭಿನಯದ ಮೂಲಕ ಚಂದನವನ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿದ್ದ ಕಲಾವಿದರಾಗಿದ್ದರು. ಸಂಕಷ್ಟಕ್ಕೊಳಗಾದವರ ಸೇವೆಯೇ ಸರ್ವಸ್ವ ಅಂದುಕೊಂಡು ಬದುಕುತ್ತಿದ್ದ ನಟ ಸಂಚಾರಿ ವಿಜಯ್ ಜೀವನದ ಕೊನೆಯವರೆಗೂ ನೊಂದವರ ಬೆನ್ನಿಗೆ ನಿಂತಿದ್ದರು. ಮಧ್ಯರಾತ್ರಿವರೆಗೂ ಒಂದಷ್ಟು ಜನರ ಕಣ್ಣೀರು ಒರೆಸಿ ಇನ್ನೇನು ಮನೆ ಸೇರಬೇಕು ಅನ್ನುವಷ್ಟರಲ್ಲಿ ವಿಜಯ್ ಬಾಳಲ್ಲಿ ವಿಧಿ ಕ್ರೂರ ಆಟ ಆಡಿಬಿಟ್ಟಿದೆ. ಬೈಕ್ ಅಪಘಾತದ ತೀವ್ರತೆಗೆ ಕೋಮಾದಲ್ಲಿದ್ದ ನಟ ವಿಜಯ್ ಶಾಶ್ವತವಾಗಿ ಕಣ್ಣುಮುಚ್ಚಿದ್ದಾರೆ. ಇಂದು ಬೆಳಗ್ಗೆ 3.34ಕ್ಕೆ ಜೀವನ್ಮರಣ ಹೋರಾಟ ಅಂತ್ಯಗೊಂಡಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಕಡೆಯ ಬಾರಿಗೆ ನೋಡಲು ಅನೇಕ ಗಣ್ಯರು ಆಗಮಿಸಿ ಕಣ್ಣೀರು ಸುರಿಸಿದರು.
ಇಂದು ಮುಂಜಾನೆ ಅಂಗಾಂಗ ಕಸಿ ಕಾರ್ಯ ಮುಗಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಅಪೋಲೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಬಳಿಕ ವಿಜಯ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈಗ ಸಂಚಾರಿ ವಿಜಯ್ ಪಾರ್ಥಿವ ಶರೀರ ರವೀಂದ್ರ ಕಲಾಕ್ಷೇತ್ರದಿಂದ ಹುಟ್ಟೂರಿನತ್ತ ತೆರಳುತ್ತಿದೆ. ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಟ ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು
(Actor Sanchari Vijays funeral according to the rituals of Veerashaiva Lingayat at Panchanahalli Chikkamagaluru)
Published On - 2:57 pm, Tue, 15 June 21