ಕೋಟೆ ಆಂಜನೇಯ ದೇಗುಲ ಆವರಣ ಅಭಿವೃದ್ಧಿಗೆ 2 ಕೋಟಿ ರೂಪಾಯಿ; ಸಚಿವ ಕೆ. ಎಸ್. ಈಶ್ವರಪ್ಪರಿಂದ ಗುದ್ದಲಿ ಪೂಜೆ
ಇಂದು ಮುಂಜಾನೆ ಸಚಿವ ಕೆ. ಎಸ್. ಈಶ್ವರಪ್ಪ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದ್ದಾರೆ.
ಶಿವಮೊಗ್ಗ: ನಗರದ ಸುಪ್ರಸಿದ್ಧ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಮತ್ತು ಸೀತಾರಾಮಾಂಜನೇಯ ದೇವಸ್ಥಾನ ಆವರಣದ ಅಭಿವೃದ್ಧಿಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇಂದು ಮುಂಜಾನೆ ಸಚಿವ ಕೆ. ಎಸ್. ಈಶ್ವರಪ್ಪ ದೇವಸ್ಥಾನದ ಅಭಿವೃದ್ಧಿ ಯೋಜನೆಗೆ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದ್ದಾರೆ. ತುಂಗಾ ತಟದಲ್ಲಿರುವ ಈ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹವಿದೆ. ಕಳೆದ ಅನೇಕ ವರ್ಷಗಳಿಂದ ದೇವವಸ್ಥಾನದ ಜೀರ್ಣೋದ್ದಾರಕ್ಕೆ ಭಕ್ತರು ಮನವಿ ಸಲ್ಲಿಸಿದ್ದರು. ಈ ಮನವಿಗೆ ಇಂದು ಅಧಿಕೃತವಾಗಿ ಮನ್ನಣೆ ಸಿಕ್ಕಿದಂತಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆಗೆ ಮುಂದಾದ ಸಚಿವರು ಬೆಳ್ಳಂಬೆಳ್ಳಿಗ್ಗೆ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗ ನಗರದ ಭೇಟಿಗೆ ಮುಂದಾಗಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಗರದ ಶೇಷಾದ್ರಿಪುರಂ, ಶಿವಪ್ಪನಾಯಕ ಪ್ಯಾಲೇಸ್, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಗ್ರಂಥಾಲಯ, ಫ್ರೀಡಂ ಪಾರ್ಕ್ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಸಚಿವರಿಗೆ ಮೇಯರ್ ಸುನಿತಾ ಅಣ್ಣಪ್ಪ, ಪಾಲಿಕೆ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಸಂದರ್ಭದಲ್ಲಿ ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಿನ್ನೆಯ ವಿವಾದಾತ್ಮಕ ಹೇಳಿಕೆಗೆ ನಾನು ಈಗಲೂ ಬದ್ಧ. (ನಮ್ಮ ತಂಟೆಗೆ ಯಾರೇ ಬಂದರೂ ನಾವು ಸುಮ್ಮನೆ ಬಿಡಲ್ಲ. ಯಾವುದರಲ್ಲಿ ಹೊಡೀತಾರೋ ಅದರಲ್ಲೇ ಹೊಡೆದು ತೇಗೀರಿ) ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಒಂದು ಕಾಲದಲ್ಲಿ ಶೋಷಣೆ ನಡೆಯುತ್ತಿತ್ತು. ಕೇರಳದಲ್ಲಿ ಜನಸಂಘದ ರಾಷ್ಟ್ರೀಯ ಅಧ್ಯಕ್ಷ ಪಂಡಿತ ದೀನದಯಾಳ ಉಪಾಧ್ಯಾಯರ ಕೊಲೆ ಮೊಗಲ್ ಸರಾಯಿ ರೇಲ್ವೆ ಫ್ಲಾಟ್ ಫಾರಂನಲ್ಲಿ ನಡೆದಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಶಾಖೆ ಆರಂಭಿಸುವ ಸಂದರ್ಭದಲ್ಲಿ ಯುವಕರನ್ನು ಕೊಂದು ಹಾಕುತ್ತಿದ್ದರು. ಆ ಸಂದರ್ಭದಲ್ಲಿ ಯಾರು ಹೇಳುವವರು ಮತ್ತು ಕೇಳುವವರು ಇರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ನಾವು ನಾವಾಗಿಯೇ ಯಾರನ್ನು ಮುಟ್ಟುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಇರುವುದಿಲ್ಲ. ಹೊಡೆದರೆ ವಾಪಸ್ ಅದರಲ್ಲಿಯೇ ಹೊಡೆಯಿರಿ ಎಂದು ಹೇಳೀದ್ದು ತಪ್ಪಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ; ಸಂಪುಟದಿಂದ ಕೈಬಿಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಒತ್ತಾಯ
Published On - 9:43 am, Mon, 9 August 21