ವೃದ್ಧ ದಂಪತಿ ನಿಗೂಢ ಸಾವಿನ ರಹಸ್ಯ ರಿವೀಲ್: ಸಂಬಂಧಿಕನಿಂದಲೇ ನಡೀತು ಪೈಶಾಚಿಕ ಕೃತ್ಯ
ಶಿವಮೊಗ್ಗದ ಭದ್ರಾವತಿಯಲ್ಲಿ ವೃದ್ಧ ದಂಪತಿ ನಿಗೂಢ ಸಾವಿನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ವೈದ್ಯನಾಗಿರುವ ಸಂಬಂಧಿಕನಿಂದಲೇ ಈ ಪೈಶಾಚಿಕ ಕೃತ್ಯ ನಡೆದಿದ್ದು, ಹಣಕ್ಕಾಗಿ ದಂಪತಿಗೆ ಚಿಕಿತ್ಸೆಯ ನೆಪದಲ್ಲಿ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಹಣ ದೋಚಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಶಿವಮೊಗ್ಗ, ಜನವರಿ 21: ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ಮನೆಯಲ್ಲಿಯೇ ವೃದ್ಧ ದಂಪತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ಸಂಬಂಧಿಕ ಮತ್ತು ವೈದ್ಯನಾಗಿರುವ ಡಾ. ಮಲ್ಲೇಶ್ ಎಂಬಾತನೇ ಚಂದ್ರಪ್ಪ(80) ಮತ್ತು ಅವರ ಪತ್ನಿ ಜಯಮ್ಮ(75) ಅವರನ್ನು ಕೊಲೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಪಕ್ಕಾ ಪ್ಲ್ಯಾನ್ ಮಾಡಿ ಕೃತ್ಯ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿ ಲಕ್ಷಾಂತರ ರೂ. ದರೋಡೆ
ತಮ್ಮನ ಮಗನಾಗಿರುವ ಡಾ . ಮಲ್ಲೇಶ್ನಿಂದಲೇ ಮೃತ ಚಂದ್ರಪ್ಪ ಮತ್ತು ಅವರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಪಿ ವೈದ್ಯ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ದೊಡ್ಡಪ್ಪನ ಬಳಿ ಹಣ ಕೇಳಿದ್ದ. ಇದಕ್ಕೆ ಅವರು ಒಪ್ಪದ ಕಾರಣ ದೊಡ್ಡಪ್ಪ-ದೊಡ್ಡಮ್ಮ ಅಂತಲೂ ನೋಡದೆ ಕೊಲೆ ಮಾಡಿದ್ದಾನೆ. ಚಿಕಿತ್ಸೆ ನೆಪದಲ್ಲಿ ಇಬ್ಬರಿಗೂ ಇಂಜೆಕ್ಷನ್ ನೀಡಿದ್ದು, ಇದರಿಂದಲೇ ದಂಪತಿ ಮೃತಪಟ್ಟಿದ್ದಾರೆ. ದೇಹದ ಮೇಲೆ ಯಾವುದೇ ಗಾಯ ಮಾಡದೆ ಆರೋಪಿ ಡಬಲ್ ಮರ್ಡರ್ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ದೋಚಿದ್ದ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಭದ್ರಾವತಿಯಲ್ಲಿ ವೃದ್ಧ ದಂಪತಿ ಅನುಮಾನಸ್ಪದ ಸಾವು; ಸ್ಥಳಕ್ಕೆ ವಿಧಿವಿಜ್ಞಾನ ತಂಡ, ಶ್ವಾನ ದಳ ದೌಡು
ಔಷಧ ಹೈಡೋಸ್ ನೀಡಿ ಕೊಲೆ
ಘಟನೆ ಬಗ್ಗೆ ಮಾಹಿತಿ ನೀಡಿರುವ ಶಿವಮೊಗ್ಗ ಎಸ್ಪಿ ನಿಖಿಲ್, ಔಷಧ ಹೈಡೋಜ್ ನೀಡಿ ದಂಪತಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಮಲ್ಲೇಶ್ ಕೊಲೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ಮೃತ ಚಂದ್ರಪ್ಪರ ತಮ್ಮ ಪಾಲಾಕ್ಷಪ್ಪನ ಮಗನಾಗಿದ್ದು, ಈ ಹಿಂದೆ ಈತ ಬೆಂಗಳೂರಿನಲ್ಲೂ ಇದೇ ರೀತಿ ಕೃತ್ಯ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ. ಶಿವಮೊಗ್ಗದಲ್ಲಿ BAMS ವೈದ್ಯನಾಗಿ ಎರಡು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ಆರೋಪಿ ಬಹಳ ಸಾಲ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ದೊಡ್ಡಪ್ಪನ ಬಳಿ 15 ಲಕ್ಷ ರೂ. ಸಾಲ ಕೇಳಿದ್ದ. ಆದರೆ ಚಂದ್ರಪ್ಪ ಹಣ ನೀಡಲು ನಿರಾಕರಿಸಿದ್ದ ಕಾರಣ ಕೊಲೆ ಮಾಡಿದ್ದಾನೆ. ಇಬ್ಬರಿಗೂ ಅನಸ್ತೇಶಿಯಾ ಇಂಜೆಕ್ಷನ್ 50-50 ಡೋಸ್ ನೀಡಿ ಬಚಾವ್ ಆಗಲು ಯತ್ನಿಸಿದ್ದಾನೆ. ಕದ್ದ ಸುಮಾರು 80 ಗ್ರಾಂ ಬಂಗಾರವನ್ನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.
ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಬಳಿಕ ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಮನೆಯ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾದರೆ, ಹಾಲ್‌ನಲ್ಲಿ ಪತ್ನಿ ಜಯಮ್ಮ ಶವ ಬಿದ್ದಿರುವುದು ಗೊತ್ತಾಗಿತ್ತು. ಮೃತ ಚಂದ್ರಪ್ಪ ಭದ್ರಾವತಿಯ ವಿಐಎಸ್ಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಮನೆಗೆ ನುಗ್ಗಿ ದರೋಡೆಕೋರರು ಹತ್ಯೆಗೈದಿರುವ ಬಗ್ಗೆ ಮೊದಲು ಅನುಮಾನ ವ್ಯಕ್ತವಾಗಿತ್ತು. ಈ ಆಧಾರದಲ್ಲಿ ಪೊಲೀಸರು ತನಿಖೆಗೆ ಇಳಿದಾಗ ಸಂಬಂಧಿಕ ವೈದ್ಯನೇ ಕೃತ್ಯ ಎಸಗಿರೋದು ಬಯಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:09 pm, Wed, 21 January 26