AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಮಿಂಚಿನ ಓಟ, ಗಮನ ಸೆಳೆದ ತಮಿಳುನಾಡಿನ ಹೋರಿ

Soraba, Shivamogga: ರೈತರಿಗೆ ಮುಂಗಾರು ಬಳಿಕ ಸದ್ಯ ಬಿಡುವಿನ ವೇಳೆ. ಇದೇ ಸಮಯದಲ್ಲಿ ಬೆಳಕಿನ ಹಬ್ಬ. ಇದರ ನಂತರ ಗ್ರಾಮೀಣ ಮತ್ತು ಹಳ್ಳಿಗರ ಅಚ್ಚುಮೆಚ್ಚಿನ ಕ್ರೀಡೆ ಅಂದ್ರೆ ಅದು ಹೋರಿ ಬೆದರಿಸುವ ಹಬ್ಬವಾಗಿದೆ. ತಮ್ಮ ಅಚ್ಚುಮಚ್ಚಿನ ಹೋರಿಗಳ ಸಾಮರ್ಥ್ಯ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.

ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಮಿಂಚಿನ ಓಟ, ಗಮನ ಸೆಳೆದ ತಮಿಳುನಾಡಿನ ಹೋರಿ
ಸೊರಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಮಿಂಚಿನ ಓಟ
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on:Nov 25, 2023 | 4:49 PM

ಬೆಂಗಳೂರಿನಲ್ಲಿ ಕರಾವಳಿ ಕಂಬಳದ ಓಟದ ಗಮ್ಮತ್ತು ಜೋರಾಗಿದೆ.. ಇದೇ ವೇಳೆ ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಹೋರಿ ಹಬ್ಬದ (bull race festival) ಮಿಂಚಿನ ಓಟ. ಈ ಎರಡು ಗ್ರಾಮೀಣ ಕ್ರೀಡೆಗಳು ಇಂದಿಗೂ ಅದೇ ಖದರ್ ಮತ್ತು ಹಳ್ಳಿಗರ ಜನಪ್ರಿಯತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ರೋಮಾಂಚನವಾಗಿತ್ತು. ಈ ಸ್ಟೋರಿ ನೋಡಿ. ಸೊರಬ ತಾಲೂಕು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ಷೇತ್ರವಾಗಿದೆ. ಈ ತಾಲೂಕಿನ ಗ್ರಾಮೀಣ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು. ಮಲೆನಾಡಿನ ಶಿಕಾರಿಪುರ, ಸೊರಬ ಮತ್ತು ಶಿವಮೊಗ್ಗ (soraba in shivamogga) ತಾಲೂಕಿನ ಗ್ರಾಮಾಂತರ ದಲ್ಲಿ ದೀಪಾವಳಿ ನಂತರದಲ್ಲಿ‌ ಹೋರಿ ಬೆದರಿಸುವ ಹಬ್ಬು ಎರಡು ಮೂರು ತಿಂಗಳು ನಡೆಯುತ್ತಿದೆ.

ರೈತರಿಗೆ ಮುಂಗಾರು ಬಳಿಕ ಸದ್ಯ ಬಿಡುವಿನ ವೇಳೆ. ಇದೇ ಸಮಯದಲ್ಲಿ ಬೆಳಕಿನ ಹಬ್ಬ. ಇದರ ನಂತರ ಗ್ರಾಮೀಣ ಮತ್ತು ಹಳ್ಳಿಗರ ಅಚ್ಚುಮೆಚ್ಚಿನ ಕ್ರೀಡೆ ಅಂದ್ರೆ ಅದು ಹೋರಿ ಬೆದರಿಸುವ ಹಬ್ಬವಾಗಿದೆ. ತಮ್ಮ ಅಚ್ಚುಮಚ್ಚಿನ ಹೋರಿಗಳ ಸಾಮರ್ಥ್ಯ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಒಂದು ಸಲ ರೇಸ್ ನ ಅಖಾಡಕ್ಕೆ ಇಳಿದ್ರೆ ಸಾಕು.. ಬಲಿಷ್ಠ ಕಟ್ಟು ಮಸ್ತಾದ ರಾಜ್ಯದ ಮೂಲೆ ಮೂಲೆ ಯಿಂದ ಬಂದಿರುವ ಹೋರಿಗಳು ಎಂಟ್ರಿ ಕೊಡುತ್ತವೆ. ಈ ಹೋರಿಗಳ ಮಿಂಚಿನ ಓಡ ನೋಡುವುದೇ ರೋಮಾಂಚನವಾಗಿದೆ.

ಇದನ್ನು ನೋಡಿದ್ರೆ ಮೈಜುಂ..ಮೈನವೀರಿಳಿಸಿ ಬಿಡುತ್ತದೆ. ಅಖಾಡದಲ್ಲಿ ಹೋರಿಗಳು ಓಟ ನೋಡಲು ನೆರೆಯ ಗ್ರಾಮಗಳನ್ನು ಸೇರಿದಂತೆ ನೆರೆಯ ತಾಲೂಕು ಹಾಗೂ‌ ಜಿಲ್ಲೆಗಳಿಂದ ಹೋರಿ‌ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಒಂದಡೆ ಹೋರಿ ವೇಗದಲ್ಲಿ ಓಡಿ ಬಂದ್ರೆ ಅದರ ಕೊರಳಲ್ಲಿರುವ ಕೊಬ್ಬರಿ ಹಾರ ಕಿತ್ತುಕೊಳ್ಳಲು ಸಾಹಸ ಯುವಕರ ಗುಂಪು ಮತ್ತೊಂದಡೆ ಇರುತ್ತದೆ.. ಈ ಯುವಕರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯಗಳು ಮೈನವಿರೇಳಿಸುವಂತಿತ್ತು.. ಹೀಗೆ ಬೆಳಗ್ಗೆಯಿಂದ ಸಂಜೆಯವರೆಗೆ ಹೋರಿ ಬೆದರಿಸುವ ಸ್ಪರ್ಧೆಯು ಸಾವಿರಾರು ಜನರನ್ನು ಭರ್ಜರಿಯಾಗಿ ರಂಜಿಸಿತು.

ಸ್ಪರ್ಧೆಗೆ ಬಂದ ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸುತ್ತಾರೆ. ಅಖಾಡದಲ್ಲಿ ಚಿಕ್ಕನಂದಿಹಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್‌, ಹಾರನಹಳ್ಳಿ ಸೃಷ್ಟಿಕರ್ತ ಛಾಯಾ ನಗರ, ಕಾತುವಳ್ಳಿ ಅಂಬಿಗರ ಹುಲಿ, ಹನುಮನಕೊಪ್ಪ ಡಾನ್, ಬೆಟ್ಟದಕೂರ್ಲಿ ಲಂಕಾಸುರ, ಅರಿಶಿಣಗೇರಿ ಗೂಳಿ, ಹೆಸರಿಯ ಚಿನ್ನಾಟದ ಚಿನ್ನ, ವೈಭವ ಶಿವಮೊಗ್ಗದ ಮಹಾರಾಜ, ವಿಷ್ಣುದಾದಾ, ಕೊಡಕಣಿ ಡಾನ್, ತ್ಯಾಗರ್ತಿ ದರ್ಭಾರ್, ಸೊರಬದ ಸೂಪರ್ ಸ್ಟಾರ್, ಹಂಟರ್, ನಗುಮುಖದ ಕಳಸ, ಸೇರಿದಂತೆ ಯಲವಳ್ಳಿಯ ಜಮೀನ್ದಾರನ ಏಕಲವ್ಯ, ಯಜಮಾನ‌ ಪಾಳೆಗಾರ, ಕಲ್ಲೇಶ, ಜೆ.ಪಿ. ಗೌಡ್ರು ದರ್ಬಾರ್, ಅನಾಹುತ, ಹೋರಿ ಮಂಚಪ್ಪ, ಕ್ರಾಂತಿ ವೀರ, ಯಲವಳ್ಳಿ‌ ಕಿಂಗ್, ಡಿ.ಜೆ. ದರ್ಭಾರ್, ನಾಗಪ್ಪ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ‌ ಓಡಿದವು.

ಇದನ್ನೂ ಓದಿ: Bengaluru Kambala: ಬೆಂಗಳೂರು ಕಂಬಳದಲ್ಲಿ ಅಂಕದ ಕೋಳಿಗಳ ಲಕ್ಕಿ ಡ್ರಾ

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆ ಹಾಕಿ ಪ್ರೋತ್ಸಾಹಿಸುತ್ತಿದ್ದರು. ಹೋರಿ ಹಬ್ಬದ ಆಯೋಜಿಸಿದ್ದ ಯಲವಳ್ಳಿ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಗಮನ ಸೆಳೆದ ತಮಿಳುನಾಡಿನ ಹೋರಿ…

ಸೊರಬ ತಾಲೂಕಿನ ಕಾತ್ಹೋಳಿ ಗ್ರಾಮದಲ್ಲಿ ಸ್ನೇಹಿತರಲ್ಲರೂ ಸೇರಿಕೊಂಡು 1.8 ಲಕ್ಷ ನೀಡಿ ತಮಿಳುನಾಡಿನಿಂದ ಹೊರಿಯನ್ನು ಖರೀದಿ ಮಾಡಿಕೊಂಡು ಬಂದಿದ್ದಾರೆ. ತಮಿಳುನಾಡಿನಿಂದ ಖರೀದಿ ಮಾಡಿ ತಂದಿದ್ದ ಕೆಂಚ 777 ಎಂಬ ಹೋರಿಯನ್ನು ಜನರು ಮುಗಿಬಿದ್ದರು. ಕಾತ್ಹೋಳಿ ಗ್ರಾಮದ ಹೋರಿಹಬ್ಬದ ಅಭಿಮಾನಿಗಳು ಒಟ್ಟಿಗೆ ಸೇರಿ ತಮಿಳುನಾಡಿನಿಂದ ಹೋರಿ ಖರೀದಿಸಿ ತಂದಿರುವುದು ವಿಶೇಷವಾಗಿತ್ತು.

ಮಲೆನಾಡಿನ ಭಾಗದಲ್ಲೂ ಹೋರಿ ಬೆದರಿಸುವ ಹಬ್ಬವೂ ಭರ್ಜರಿಯಾಗಿ ನಡೆಯುತ್ತಿದೆ. ಡೇಂಜರ್ ಕ್ರೀಡೆಯಲ್ಲಿ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.. ಈ ನಡುವೆ ಆಯೋಜಕರೇ ಹೋರಿ ಬೆದರಿಸುವ ಸ್ಪರ್ಧೆಯ ಹೆಚ್ಚಿನ ಜವಾಬ್ದಾರಿ ವಹಿಸಿದ್ದಾರೆ.. ದೀಪಾವಳಿ ಹಬ್ಬದ ಸಂತಸ ಸಡಗರ ಮಲೆನಾಡಿನಲ್ಲಿ ಹೋರಿ ಹಬ್ಬದ ಮೂಲಕ ಮುಂದುವರೆದಿರುವುದು ವಿಶೇಷವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 4:48 pm, Sat, 25 November 23