Pragya Thakur: ಮನೆಗಳಲ್ಲಿ ಆಯುಧಗಳನ್ನಿಟ್ಟುಕೊಳ್ಳಿ ಎಂಬ ಪ್ರಜ್ಞಾ ಠಾಕೂರ್ ಹೇಳಿಕೆ ವಿಚಾರ; ಶಿವಮೊಗ್ಗದಲ್ಲಿ 2 ದೂರು ದಾಖಲು
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂಬ ಅವರ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿವೆ.
![Pragya Thakur: ಮನೆಗಳಲ್ಲಿ ಆಯುಧಗಳನ್ನಿಟ್ಟುಕೊಳ್ಳಿ ಎಂಬ ಪ್ರಜ್ಞಾ ಠಾಕೂರ್ ಹೇಳಿಕೆ ವಿಚಾರ; ಶಿವಮೊಗ್ಗದಲ್ಲಿ 2 ದೂರು ದಾಖಲು](https://images.tv9kannada.com/wp-content/uploads/2022/12/Pragya-Thakur.jpg?w=1280)
ಶಿವಮೊಗ್ಗ: ಹಿಂದೂಗಳು ತಮ್ಮ ಮನೆಯಲ್ಲಿ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂಬ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಪ್ರಜ್ಞಾ ಠಾಕೂರ್ ವಿರುದ್ಧ 2 ದೂರುಗಳು ದಾಖಲಾಗಿವೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಪ್ರಜ್ಞಾ ಠಾಕೂರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಜ್ಞಾ ಠಾಕೂರ್ ಅವರು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಕೋಮುಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಗೋಖಲೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂಬ ಅವರ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಇದೊಂದು ದ್ವೇಷ ಭಾಷಣದ ಪ್ರಕರಣ. ಆಕೆಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ವಿರುದ್ಧ ತೆಹಸೀನ್ ಪೂನವಾಲಾ ಎಂಬುವವರು ಕೂಡ “ದ್ವೇಷ ಭಾಷಣ”ದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಜ್ಞಾ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆಗಳಲ್ಲಿ ಆಯುಧ ಇಟ್ಟುಕೊಳ್ಳುವ ಹಕ್ಕು ನಿಮಗಿದೆ; ಹಿಂದೂಗಳಿಗೆ ಪ್ರಜ್ಞಾ ಸಿಂಗ್ ಠಾಕೂರ್ ಕರೆ
ಏನಿದು ಪ್ರಕರಣ?: ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ತಕ್ಕ ಉತ್ತರ ನೀಡುವ ಹಕ್ಕು ಹಿಂದೂಗಳಿಗೆ ಕೂಡ ಇದೆ. ಹಿಂದೂಗಳು ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುವುದರಿಂದ ತಮ್ಮ ಮನೆಗಳಲ್ಲಿ ಚಾಕುಗಳನ್ನು ಹರಿತಗೊಳಿಸಿ ಇಟ್ಟುಕೊಳ್ಳುವಂತೆ ಕರೆ ನೀಡಿದ್ದರು.
“ಮುಸ್ಲಿಮರು ಲವ್ ಜಿಹಾದ್ ಸಂಪ್ರದಾಯವನ್ನು ಹೊಂದಿದ್ದಾರೆ, ಅವರು ಲವ್ ಮಾಡಿದರೂ ಅವರು ಅದರಲ್ಲಿ ಜಿಹಾದ್ ಮಾಡುತ್ತಾರೆ. ನಾವು (ಹಿಂದೂಗಳು) ಕೂಡ ಪ್ರೀತಿಸುತ್ತೇವೆ, ದೇವರನ್ನು ಪ್ರೀತಿಸುತ್ತೇವೆ, ಸನ್ಯಾಸಿಯಾದವರು ತನ್ನ ದೇವರನ್ನು ಪ್ರೀತಿಸುತ್ತಾರೆ” ಎಂದು ಪ್ರಜ್ಞಾ ಠಾಕೂರ್ ಹೇಳಿದ್ದರು.
ಇದೇ ವೇಳೆ ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಆತ್ಮರಕ್ಷಣೆಗಾಗಿ ಮನೆಯಲ್ಲಿ ಚಾಕುಗಳನ್ನು ಹರಿತವಾಗಿಟ್ಟುಕೊಳ್ಳುವಂತೆ ಹಿಂದೂಗಳ ಬಳಿ ಮನವಿ ಮಾಡಿದರು. ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ. ಏನಿಲ್ಲವೆಂದರೂ ತರಕಾರಿಗಳನ್ನು ಕತ್ತರಿಸಲು ಬಳಸುತ್ತಿದ್ದ ಚಾಕುಗಳಾದರೂ ಹರಿತವಾಗಿರಲಿ. ಯಾವಾಗ ಯಾವ ಪರಿಸ್ಥಿತಿ ಬರುತ್ತದೋ ಗೊತ್ತಿಲ್ಲ. ಎಲ್ಲರಿಗೂ ಆತ್ಮರಕ್ಷಣೆಯ ಹಕ್ಕಿದೆ. ನಮ್ಮ ಮನೆಗೆ ಯಾರಾದರೂ ನುಸುಳಿದರೆ ಅವರಿಗೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.