ಬೆಂಗಳೂರಿಗಿಂತ ಮೊದಲೇ ಶಿವಮೊಗ್ಗದಲ್ಲಿ HMPV ವೈರಸ್ ಪತ್ತೆ..!
ದೇಶದಲ್ಲಿ ಆತಂಕ ಮೂಡಿಸಿರುವ ಎಚ್‌ಎಂಪಿ ವೈರಸ್ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಮೊದಲ ಕೇಸ್ ಪತ್ತೆಯಾದ ಬಳಿಕ ಇದೀಗ ಮಲೆನಾಡು ಶಿವಮೊಗ್ಗದಲ್ಲೂ ಎಚ್‌ಎಂಪಿವಿ ವೈರಸ್ ಪತ್ತೆಯಾಗಿದೆ. 1 ವರ್ಷ, 2 ವರ್ಷ ವಯಸ್ಸಿನ ಆರು ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ, ಶಿವಮೊಗ್ಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಶಿವಮೊಗ್ಗ, (ಜನವರಿ 07): ಶಿವಮೊಗ್ಗದಲ್ಲಿ ಆರು ಮಕ್ಕಳಲ್ಲಿ ಹೆಚ್ಎಂಪಿ ವೈರಸ್ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಮೊದಲೇ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆದ್ರೆ, ಇದೀಗ ಬೆಂಗಳೂರಿಗಿಂತ ಮೊದಲೇ ಶಿವಮೊಗ್ಗದಲ್ಲಿ ವೈರಸ್ ಕಾಣಿಸಿಕೊಂಡಿರುವುದು ತಿಳಿದುಬಂದಿದೆ. ನವಂಬರ್ ತಿಂಗಳಿನಲ್ಲಿ 1 ವರ್ಷ ಹಾಗೂ 2 ವರ್ಷ ವಯಸ್ಸಿನ ಮಕ್ಕಳಲ್ಲಿ ವೈರಸ್ ಕಾಣಿಸಿಕೊಂಡಿದೆ. ಆದ್ರೆ, ಇದೀಗ ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ.
ಕೊರೋನಾ ಶಂಕೆಯಲ್ಲಿ ಸ್ವಾಬ್ ತೆಗೆದು ಟೆಸ್ಟ್ ಮಾಡಿಸಲಾಗಿತ್ತು. ನಂತರ ಲ್ಯಾಬ್ ವರದಿಯಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ ಎನ್ನುವುದು ದೃಢಪಟ್ಟಿತ್ತು. ಉಸಿರಾಟದ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳನ್ನು ಗುಣಪಡಿಸಲಾಗಿದೆ ಎಂದು ಡಾ. ಧನಂಜಯ್ ಸರ್ಜಿ ಮಾಹಿತಿ ನೀಡಿದ್ದಾರ. ಅಕ್ಟೋಬರ್ ನವೆಂಬರ್ ತಿಂಗಳಿನಿಂದಲೇ ಈ ಸೋಂಕು ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: HMPV Cases: ನಾಗ್ಪುರದಲ್ಲಿ ಎರಡು ಎಚ್‌ಎಂಪಿವಿ ಪ್ರಕರಣಗಳು ಪತ್ತೆ, ಒಟ್ಟು ಸಂಖ್ಯೆ 7ಕ್ಕೆ ಏರಿಕೆ
ಮಕ್ಕಳ ವೈದ್ಯ ಡಾ.ಧನಂಜಯ ಸರ್ಜಿ ಹೇಳಿದ್ದಿಷ್ಟು
ಶಿವಮೊಗ್ಗದಲ್ಲಿ ಎಂಎಲ್ ಸಿ ಹಾಗು ಮಕ್ಕಳ ವೈದ್ಯ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದು, ಎಚ್ ಎಂಪಿ ವೈರಸ್ ಬಗ್ಗೆ ವರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಕಾಮನ್ ಆಗಿ ಬಂದು ಹೋಗುವ ವೈರಸ್. ನಮ್ಮ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಟೆಸ್ಟ್ ಗೆ ಕಳುಹಿಸಿದ್ದೆವು. ಐದು ಮಕ್ಕಳಿಗೆ ಬಂದಿತ್ತು. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬಂದಿತ್ತು. ಯಾವುದೇ ತೊಂದರೆ ಮಾಡುವುದಿಲ್ಲ. ಎಲ್ಲಾ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಟೆಸ್ಟ್ ಮಾಡಿದರೆ ಎಲ್ಲಾ ಮಕ್ಕಳಿಗೂ ಬರುತ್ತದೆ. ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. 6 ತಿಂಗಳಿನಿಂದ 4 ವರ್ಷದೊಳಗಿನ ಮಕ್ಕಳಿಗೆ ಬಂದಿತ್ತು. ಈಗ ಯಾವುದು ಪಾಸಿಟಿವ್ ಬಂದಿಲ್ಲ. ಸೆಪ್ಟೆಂಬರ್ ಅಕ್ಟೋಬರ್ ನವಂಬರ್ ತಿಂಗಳಿನಲ್ಲಿ ಮಕ್ಕಳಿಗೆ ವೈರಸ್ ಬರುವುದು ಸಾಮಾನ್ಯ. ಈಗ ಯಾವ ಮಕ್ಕಳಿಗೂ ಬಂದಿಲ್ಲ ಎಂದು ಹೇಳಿದರು.
ಜ್ವರ, ಶೀತ ಹಾಗೂ ಕೆಮ್ಮು ಸಮಸ್ಯೆಯಿಂದ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಮಂಗಳವಾರ ಇಬ್ಬರು ಮಕ್ಕಳು ದಾಖಲಾಗಿದ್ದರು. ಪರೀಕ್ಷಿಸಿದಾಗ HMPV ವೈರಸ್ ಪತ್ತೆಯಾಗಿತ್ತು. ಆದರೆ ಮಾದರಿ ಸಂಗ್ರಹಿಸಿ ಅದರ ಫಲಿತಾಂಶ ಬರುವ ವೇಳೆ ಅಂದರೆ ಇಂದು(ಜ.07) ಇಬ್ಬರು ಮಕ್ಕಳು ಗುಣಮುಖರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪತ್ತೆಯಾದ 2 ಪ್ರಕರಣಗಳಲ್ಲಿ 3 ತಿಂಗಳ ಮಗು ಈಗಾಗಲೆ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಇನ್ನು 8 ತಿಂಗಳ ಮಗು ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಪತ್ತೆಯಾಗಿರುವ ಈ ವೈರಸ್‌ನಿಂದ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇಷ್ಟೇ ಅಲ್ಲ ಇದು ಕೋವಿಡ್ ರೀತಿಯ ಯಾವುದೇ ಪರಿಣಾಮ ಸೃಷ್ಟಿಸುವುದಿಲ್ಲ ಎಂದಿದೆ.
HMPV ವೈರಸ್ ಕುರಿತು ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಮಾರ್ಗಸೂಚಿ ಪ್ರಕಟಿಸಿದೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ ಎಂದು ಸೂಚಿಸಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತ ನೀಡಲು ಸೂಚಿಸಿದೆ.ಕೈಗಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಿದೆ. ಕೆಮ್ಮುವಾಗಿ ಮೂಗು, ಬಾಯಿ ಮುಚ್ಚಿಕೊಳ್ಳಲು ಸೂಚಿಸಲಾಗಿದೆ. HMPV ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಲು ಸೂಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:02 pm, Tue, 7 January 25