ಶಿವಮೊಗ್ಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ

ಶಿವಮೊಗ್ಗದ SSLC ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ಹಾಗೂ ಶಿಕ್ಷಣ ಇಲಾಖೆಯಿಂದ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಶಿವಮೊಗ್ಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ
ಸಂಕೇತ್ ಕೊಲೆ ಪ್ರಕರಣ
Image Credit source: tv9
Edited By:

Updated on: Feb 24, 2026 | 1:52 PM

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದಲ್ಲಿ (Shivamogga) ಕೊಲೆಯಾದ ಬಾಲಕ ಸಂಕೇತ್ ಕುಟುಂಬದವರಿಗೆ ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಪರಿಹಾರ ನೀಡುವಂತೆ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಕ ಈ ಘೋಷಣೆ ಮಾಡಿಸಿದ್ದಾರೆ. ಪರಿಹಾರ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ‘ಅಪ್ರಾಪ್ತ ಬಾಲಕನ ಸಾವಿಗೆ ಸರ್ಕಾರದಿಂದ ಒಟ್ಟು 15 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಇದರಲ್ಲಿ 10 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾಗೂ 5 ಲಕ್ಷ ರೂ. ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ನಡೆದ ಬಡಾವಣೆಯಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಾತ್ರೆ ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆ ಹೆಚ್ಚುವರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಊರುಗಡೂರು ಭಾಗದಲ್ಲಿ ಔಟ್‌ಪೋಸ್ಟ್ ತೆರೆಯುವ ಮೂಲಕ ವಿಶೇಷ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆ ಮಾಡಿದ ವಿದ್ಯಾರ್ಥಿಗಳು ಗಾಂಜಾ ಸೇವಿಸಿದ್ದರೇ?


ಬಾಲಕ ಸಂಕೇತ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳು ಗಾಂಜಾ ಸೇವಿಸಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಶಿವಮೊಗ್ಗ ಎಸ್‌ಪಿ ನಿಖಿಲ್ ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದ್ದು, ಗಾಂಜಾ ಸೇವನೆ ಹಾಗೂ ಮಾರಾಟದ ವಿರುದ್ಧ ಸಮರ ಸಾರಲಾಗಿದೆ. ಈ ಪ್ರಕರಣದಲ್ಲೂ ಡ್ರಗ್ಸ್ ಸಂಪರ್ಕ ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಎಸ್‌ಪಿ ನಿಖಿಲ್ ಹೇಳಿದ್ದೇನು?

ಕೊಲೆ ಪ್ರಕರಣ ಕುರಿತು ಶಿವಮೊಗ್ಗ ಎಸ್‌ಪಿ ನಿಖಿಲ್ ಮಾಹಿತಿ ನೀಡಿದ್ದು, ಈಗಾಗಲೇ ಕೊಲೆ ಸಂಬಂಧ 7 ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಆಟದ ವೇಳೆ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಿರೀಶ್ ಎಂಬಾತನ ಬಳಿ ಆರೋಪಿಗಳು ಕ್ರಿಕೆಟ್ ಆಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಿನಿಂದಲೇ ಗಲಾಟೆ ನಡೆಯುತ್ತಿತ್ತು. ಸಂಕೇತ್ ಗಲಾಟೆ ಬಿಡಿಸಲು ತೆರಳಿದ್ದ ವೇಳೆ ಕೈಯಿಂದ ಗುದ್ದಿ ಹಲ್ಲೆ ನಡೆಸಿದ್ದು, ಅದರಿಂದ ಸಾವಾಗಿದೆ ಎಂದು ಎಸ್​ಪಿ ವಿವರಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಆಘಾತಕಾರಿ ಮಾಹಿತಿ ಬಯಲು

ಬಂಧಿತ ಅಪ್ರಾಪ್ತರ ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಊರುಗಡೂರು ಭಾಗದಲ್ಲಿ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗಿದ್ದು, ಔಟ್‌ಪೋಸ್ಟ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಈ ದುರ್ಘಟನೆ ಜಿಲ್ಲೆಯಲ್ಲಿ ಆತಂಕ ಉಂಟುಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Yaraganavi
Follow Us