ಶಿವಮೊಗ್ಗ, ಮಾ.26: ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದಕ್ಕೆ ಸಿಡಿದೆದ್ದಿರುವ ಕೆಎಸ್ ಈಶ್ವರಪ್ಪ (K S Eshwarappa) ಬಂಡಾಯ ಶಿವಮೊಗ್ಗದಲ್ಲಿ (Shivamogga) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಅಸಮಾಧಾನಗೊಂಡಿರುವ ಈಶ್ವರಪ್ಪ ಅವರನ್ನು ಬಿಜೆಪಿ (BJP) ನಾಯಕರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಸಹ ಈಶ್ವರಪ್ಪ ಯಾವುದೇ ಮಾತಿಗೂ ಜಗ್ಗದೇ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಸಹ ನಿಗದಿ ಮಾಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಹರಿ ಹರ ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಏಪ್ರಿಲ್ 12 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25 ಸಾವಿರ ಜನರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ (B Y Raghavendra) ಅವರಿಗೆ ಸೋಲಿನ ಭಯ ಶುರುವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿವೈ ವಿಜಯೇಂದ್ರ (B Y Vijayendra) ಗೆಲುವಿಗಾಗಿ ಶಿಕಾರಿಪುರದ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ನಿಂದ ಡಮ್ಮಿ ಅಭ್ಯರ್ಥಿ ಹಾಕಿದ್ದರು. ಅದರಂತೆ ಹೊಂದಾಣಿಕೆ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆಗೂ ಸಚಿವ ಮಧು ಬಂಗಾರಪ್ಪ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಆ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಹಾಕಲಾಗಿದೆ. ಆದರೆ, ಈ ಬಾರಿ ಹೊಂದಾಣಿಕೆ ರಾಜಕಾರಣ ಯಶ್ವಿಯಾಗುವುದಿಲ್ಲ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದರು.
ನಾನು ಜೀವನದಲ್ಲಿ ಪಕ್ಷಾಂತರ ಮಾಡಿಲ್ಲ. ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿ ಬಿಜೆಪಿಗೆ ಅನ್ಯಾಯ ಮಾಡಿದ್ದರು. ಪಕ್ಷಕ್ಕೆ ಚಾಕು ಹಾಕಿ ಹೋಗಿದ್ದರು. ಪಕ್ಷ ಕಟ್ಟಿ ಕೇಲವ ಆರು ಕ್ಷೇತ್ರಗಳನ್ನಷ್ಟೇ ಗೆದ್ದಿದ್ದರು. ಅಂದು ನಾವು (ಬಿಜೆಪಿ) 46 ಸ್ಥಾನ ಗೆದ್ದಿದ್ದೆವು ಎಂದರು.
ಇದನ್ನೂ ಓದಿ: ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ: ವಿಜಯೇಂದ್ರ ಕ್ಷೇತ್ರದಲ್ಲಿ ಗುಡುಗಿದ ಕೆಎಸ್ ಈಶ್ವರಪ್ಪ
ದುಡ್ಡು ಜಾತಿಯ ಆಟ ಚುನಾವಣೆಯಲ್ಲಿ ನಡೆಯುವುದಿಲ್ಲ. 60 ಸಾವಿರ ಲೀಡ್ ಕೊಡುತ್ತಿದ್ದ ಶಿಕಾರಿಪುರ ಕ್ಷೇತ್ರ ಈಗ 11 ಸಾವಿರಕ್ಕೆ ಕುಸಿದಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ತಿಣುಕಾಡಿ ಗೆದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಅಪ್ಪ ಮಕ್ಕಳದ್ದು ವಿಚಿತ್ರ ರಾಜಕಾರಣ. ಯಡಿಯೂರಪ್ಪ, ಮಕ್ಕಳು ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ ಎಂದು ಶಿಕಾರಿಪುರ ಕ್ಷೇತ್ರದ ಜನರು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ ಎಂದರು.
ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಬೈಂದೂರಿನ ಮುಖಂಡರು ನನಗೆ ಬೆಂಬಲ ನೀಡಲಿದ್ದಾರೆ. ಹಿಂದೂಗಳಿಗೆ ಸಂಸದರು ಸೂಕ್ತ ರೀತಿಯಲ್ಲಿ ಸ್ಪಂಧಿಸಿಲ್ಲ ಎಂದು ಆರೋಪಿಸಿದ ಈಶ್ವರಪ್ಪ ಅವರು, ಯಾರು ಕೂಡಾ ಹೆದರಬೇಡಿ. ಈಗ ತಾನೇ ನನಗೆ ದೆಹಲಿಯಿಂದ ಕರೆ ಬಂದಿದೆ. ಸ್ಪರ್ಧೆ ಮಾಡಬೇಡಿ ಅಂತಾ ಹೇಳಿದ್ದಾರೆ. ಯಾರು ಎನ್ನುವುದನ್ನು ನಂತರ ಹೇಳುತ್ತೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಹಿಂದುತ್ವದ ಪರ ಧ್ವನಿ ಎತ್ತುವವರನ್ನು ತುಳಿಯುತ್ತಿದ್ದಾರೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಅಂದ ಮೇಲೆ ಪೋನ್ ಬರುತ್ತಿದೆ. ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ
ಮೋದಿ ಮೋದಿ ಎಂದು ಹೇಳುವವರ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಆಕ್ರೋಶ ಹೊರಹಾಕಿದ ಈಶ್ವರಪ್ಪ, ಸಚಿವ ಶಿವರಾಜ್ ತಂಗಡಗಿ ಅಯೋಗ್ಯ. ಶಿವರಾಜ್ ತಂಗಡಗಿ ರಾಜೀನಾಮೆ ಕೊಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಡಗಿಯನ್ನು ಕಿತ್ತು ಬಿಸಾಕಲಿ ಎಂದರು. ಮೋದಿ ವಿಶ್ವ ನಾಯಕ, ಈಡಿ ದೇಶದ ಜನ ಮೋದಿ ಮೋದಿ ಅಂತಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪನವರ ಕುಟುಂಬ ರಾಜಕಾರಣದಿಂದ ರೋಸಿ ಹೋರಾಟಕ್ಕಿಳಿದಿದ್ದೇನೆ: ಕೆ ಎಸ್ ಈಶ್ವರಪ್ಪ
ರಾಜ್ಯದಲ್ಲಿ ಹಿಂದುತ್ವಕ್ಕೆ ಪೆಟ್ಟು ಬೀಳುತ್ತಿದೆ. ಅನೇಕ ಹಿಂದುತ್ವ ಬೆಂಬಲಿಗರಿಗೆ ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ. ಪಕ್ಷದಲ್ಲಿ ಅನೇಕ ಸಮಸ್ಯೆಗಳಿವೆ. ಈ ಹಿನ್ನೆಲೆಯಲ್ಲಿ ನಾನು ಚುನಾವಣೆ ಸ್ಪರ್ಧೆ ಮಾಡುತ್ತೇನೆ. ನನ್ನ ಬೆಂಬಲಿಗರಿಗೆ ಅನೇಕ ಬೆದರಿಕೆ ಬರುತ್ತಿವೆ. ಅನೇಕರು ಭಯದಿಂದ ಹೊರಗೆ ಬರುತ್ತಿಲ್ಲ. ಆದರೆ ಅವರೆಲ್ಲರೂ ಕರೆ ಮಾಡಿ ಗೆಲ್ಲಿಸುವ ಭರವಸೆ ನೀಡಿದ್ದಾರೆ ಎಂದರು.
ನನ್ನ ಪುತ್ರ ಕೆ.ಇ.ಕಾಂತೇಶ್ ಏನು ತಪ್ಪು ಮಾಡಿದ್ದಾನೆ? ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಮಾತ್ರ ಅಧಿಕಾರನಾ? ಈ ಹಿಂದೆ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ. ಆದರೂ ನನ್ನ ಮಗನಿಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲೆಗಳಲ್ಲಿ ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದ ನಾಯಕರು ನಮ್ಮ ಸಮಸ್ಯೆ ಆಲಿಸುತ್ತಿಲ್ಲವೆಂದು ಕಾರ್ಯಕರ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಾನಾ ಶಿಸ್ತಿನ ಸಾಪಾಯಿ ಆಗಿದ್ದು ತಪ್ಪಾ? ಆತ್ಮಹತ್ಯೆ, ಕಮಿಷನ್ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿತ್ತು. ಬಳಿಕ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಚಿವ ಸ್ಥಾನದ ಭರವಸೆ ನೀಡಿದ್ದರು. ಆ ದಿನ ವಿಜಯೇಂದ್ರಗೆ ಮಂತ್ರಿ ಮಾಡಲು ಹೊರಟಿದ್ದರು. ಅದಕ್ಕೆ ಕೇಂದ್ರ ವರಿಷ್ಠರು ಒಪ್ಪಲಿಲ್ಲ ಎಂಬ ಅಂಶವನ್ನು ಕಾರ್ಯಕರ್ತರ ಮುಂದೆ ಈಶ್ವರಪ್ಪ ಬಿಚ್ಚಿಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ