Gold Chain Theft: ಮಕ್ಕಳಾಗುವ ಔಷಧ ಕೊಡ್ತೀವಿ ಎಂದು ಮಾಂಗಲ್ಯ ಸರ ಕದ್ದ ಖದೀಮರು
ವೆಂಕಟೇಶ ನಗರದ ಚಾನೆಲ್ನ 5 ನೇ ತಿರುವಿನ ಚಾನೆಲ್ ಏರಿಯಾದಲ್ಲಿ ಮನೆಯ ಮುಂದೆ ಸಾವಿತ್ರಿ ಎಂಬ ವಿವಾಹಿತ ಮಹಿಳೆ ನೀರು ಹಿಡಿಯುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಆಶಾ ಕಾರ್ಯಕರ್ತೆ ಪ್ರೇಮರವರು ನಿಮಗೆ ಮಕ್ಕಳಾಗಿಲ್ಲವೆಂದು ತಿಳಿಸಿದ್ದು ನಿಮಗೆ ಔಷಧಕೊಡುತ್ತೇವೆ ಮಕ್ಕಳಾಗುತ್ತದೆ ಎಂದು ನಂಬಿಸಿದ್ದಾರೆ.
ಶಿವಮೊಗ್ಗ: ಮಹಿಳೆಗೆ ಔಷಧ ನೀಡುವ ನೆಪದಲ್ಲಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್ ಆದ ಘಟನೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿ ನಡೆದಿದೆ. ಮಕ್ಕಳಾಗುವ ಔಷಧ ಕೊಡುತ್ತೇವೆಂದು ನಂಬಿಸಿ ವಿವಾಹಿತ ಮಹಿಳೆಯೋರ್ವರ 40 ಗ್ರಾಂನ ಮಾಂಗಲ್ಯ ಸರವನ್ನ ದೋಚಿಕೊಂಡು ಹೋಗಿದ್ದಾರೆ. ಮಾಂಗಲ್ಯಸರದ ಮೌಲ್ಯ ಸುಮಾರು 1 ಲಕ್ಷ 20 ಸಾವಿರ ರೂ ಎಂದು ಅಂದಾಜಿಸಲಾಗಿದೆ.
ವೆಂಕಟೇಶ ನಗರದ ಚಾನೆಲ್ನ 5 ನೇ ತಿರುವಿನ ಚಾನೆಲ್ ಏರಿಯಾದಲ್ಲಿ ಮನೆಯ ಮುಂದೆ ಸಾವಿತ್ರಿ ಎಂಬ ವಿವಾಹಿತ ಮಹಿಳೆ ನೀರು ಹಿಡಿಯುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಆಶಾ ಕಾರ್ಯಕರ್ತೆ ಪ್ರೇಮರವರು ನಿಮಗೆ ಮಕ್ಕಳಾಗಿಲ್ಲವೆಂದು ತಿಳಿಸಿದ್ದು ನಿಮಗೆ ಔಷಧಕೊಡುತ್ತೇವೆ ಮಕ್ಕಳಾಗುತ್ತದೆ ಎಂದು ನಂಬಿಸಿದ್ದಾರೆ.
ಸಾವಿತ್ರಿ ಮತ್ತು ಮಂಜುನಾಥ್ ಅವರಿಗೆ ಮದುವೆಯಾಗಿ ಅನೇಕ ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡು ಮನೆಯ ಬಳಿ ಬಂದ ಇಬ್ಬರು ಅಪರಿಚಿತರು ಮಹಿಳೆಗೆ ಮಕ್ಕಳಾಗುವ ಔಷಧ ಕೊಡಿಸುವುದಾಗಿ ನಂಬಿಸಿದ್ದಾರೆ. ಆದರೆ ಪತಿ ಮಂಜುನಾಥ್ ಇದನ್ನ ವಿರೋಧಿಸಿ ಅಪರಿಚಿತರನ್ನ ವಾಪಾಸ್ ಕಳುಹಿಸಿದ್ದಾರೆ. ಮಂಜುನಾಥ್ ಕೆಲಸಕ್ಕೆ ಹೋದ ಸಮಯವನ್ನ ಗಮನಿಸಿ ಮತ್ತೆ ಈ ಇಬ್ಬರು ಅಪರಿಚಿತರು ಆ ಮಹಿಳೆಯ ಮನೆಯ ಬಳಿ ಬಂದು ಔಷಧ ತೆಗೆದುಕೊಳ್ಳಿ ಯಾವುದೇ ಹಣವಿಲ್ಲವೆಂದು ಮನೆಯ ಹಾಲ್ ಗೆ ಬಂದು ನಿಂತಿದ್ದಾರೆ. ಮನೆಯ ಅಂಗಳದಲ್ಲಿ ಬಾಟಲ್ ತೆಗೆದು ಇದನ್ನ ಕುತ್ತಿಗೆಗೆ ಹಚ್ಚುತ್ತೇವೆ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರ ತೆಗೆದಿಡಿ ಎಂದಿದ್ದಾರೆ. ಮಹಿಳೆ ಫ್ರಿಡ್ಜ್ ಮೇಲೆ ಸರ ತೆಗೆದಿಟ್ಟಿದ್ದಾರೆ. ಬಿಸಿನೀರು ಬೇಕು ಅದರ ಜೊತೆ ಔಷಧಿ ಕುಡಿಯಬೇಕೆಂದು ಹೇಳಿದ್ದು ಮಹಿಳೆ ಅಡುಗೆ ಮನೆಗೆ ಹೋಗಿ ಬಿಸಿನೀರು ಕಾಯಿಸಿಕೊಂಡು ಬರುವ ವೇಳೆ ಫ್ರಿಡ್ಜ್ ಮೇಲಿನ ಮಾಂಗಲ್ಯ ಸರ ಮಂಗಮಾಯವಾಗಿದೆ.
ಈ ಬಗ್ಗೆ ಮಹಿಳೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಯನಗರ ಪೊಲೀಸರ ಕ್ರೈಂ ವಿಭಾಗದ ಆರೋಪಿಗಳ ಪತ್ತೆಗೆ ಬಲೆಬೀಸಿದೆ.
ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ
ಇದನ್ನೂ ಓದಿ: IRCTC: ಭಾರತೀಯ ರೈಲ್ವೆಯಿಂದ 385 ರೈಲುಗಳು ರದ್ದು; ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೀಗೆ ಪರಿಶೀಲಿಸಿ