1 ತಿಂಗಳು ಕಾಲ ಶಿವಮೊಗ್ಗ ಜಿಲ್ಲೆಗೆ ಬಾರದಂತೆ ಪ್ರಮೋದ ಮುತಾಲಿಕ್ಗೆ ನಿರ್ಬಂಧ: ಭುಗಿಲೆದ್ದ ಆಕ್ರೋಶ
ಇತ್ತೀಚೆಗೆ ಗಲಾಟೆ ನಡೆದ ಶಿವಮೊಗ್ಗದ ರಾಗಿಗುಡ್ಡ ಭೇಟಿ ನೀಡಲು ಮಂಗಳೂರಿನಿಂದ ಹೊರಟ್ಟಿದ್ದೆ. ಆದರೆ ಪೊಲೀಸರು ಮಾಸ್ತಿಕಟ್ಟೆ ಬಳಿ ತಡೆದು, ನನ್ನನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆಗೆ ತಂದು ಬಿಟ್ಟಿದ್ದಾರೆ ಎಂದು ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ/ಶಿವಮೊಗ್ಗ ಅ.18: ಶಿವಮೊಗ್ಗಕ್ಕೆ (Shivamogga) ಅಕ್ಟೋಬರ್ 17 ರಿಂದ 30 ದಿನಗಳ ಕಾಲ ಭೇಟಿ ನೀಡದಂತೆ ಪ್ರಮೋದ ಮುತಾಲಿಕ್ (Pramod Mutalik) ಅವರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ನಿನ್ನೆ (ಅ.17)ರ ರಾತ್ರಿ ಪ್ರಮೋದ ಮುತಾಲಿಕ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ್ಟಿದ್ದರು. ಆದರೆ ದಾರಿ ಮಧ್ಯೆ ಪೊಲೀಸರು ತಡೆದು, ನಿರ್ಬಂಧಿಸಿದ ನೋಟಿಸ್ ನೀಡಿದರು. ಈ ಬಗ್ಗೆ ಪ್ರಮೋದ ಮುತಾಲಿಕ್ ಮಾತನಾಡಿ ಇತ್ತೀಚೆಗೆ ಗಲಾಟೆ ನಡೆದ ಶಿವಮೊಗ್ಗದ ರಾಗಿಗುಡ್ಡ ಭೇಟಿ ನೀಡಲು ಮಂಗಳೂರಿನಿಂದ ಹೊರಟ್ಟಿದ್ದೆ. ಆದರೆ ಪೊಲೀಸರು ಮಾಸ್ತಿಕಟ್ಟೆ ಬಳಿ ತಡೆದು, ನನ್ನನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆಗೆ ತಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಭೇಟಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಕೋರ್ಟ್ ಮೊರೆ ಹೋಗುವೆ. ರಾಗಿಗುಡ್ಡದ ಸಂತ್ರಸ್ತ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮದ ವಿರೋಧಿ. ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಕಿಡಿಕಾರಿದರು.
ಇತ್ತೀಚಿನ ಗಣೇಶ ವಿಜರ್ಜನೆ ವೇಳೆ ನಡೆದ ಶೋಭಾಯಾತ್ರೆ ವೇಳೆ ಕೆಲವರು ಗೊಡ್ಸೆ ಪೋಟೋ ಪ್ರದರ್ಶನ ಮಾಡಿತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಅದು ನನಗೆ ಗೊತ್ತಿಲ್ಲ. ನಾಥುರಾಮ್ ಗೊಡ್ಸೆ ದೇಶ ದ್ರೋಹಿ ಅಲ್ಲ, ದೇಶ ಭಕ್ತ. ಯಾರಿಂದಲೋ ಸುಫಾರಿ ತೆಗೆದುಕೊಂಡು ಗೊಡ್ಸೆ ಗಾಂಧಿಯನ್ನ ಹತ್ಯೆ ಮಾಡಿಲ್ಲ. ದೇಶದ ಹಿತಕ್ಕಾಗಿ ಗಾಂಧಿಹತ್ಯೆ ಮಾಡಿದರು. ಹಾಗಂತ ಗಾಂಧಿ ಹತ್ಯೆಯನ್ನ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಗೊಡ್ಸೆ ದೇಶ ದ್ರೋಹಿ ಆಗಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
2-3 ದಿನಗಳಲ್ಲಿ ಶಿವಮೊಗ್ಗ ಚಲೋ ಹೋರಾಟ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ
ಈ ಬಗ್ಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಪೊಲೀಸರು ರಾತ್ರಿ 2:00ಗೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕರನ್ನು ತಡೆದಿದ್ದಾರೆ . 70 ವರ್ಷ ವಯಸ್ಸಿನ ವ್ಯಕ್ತಿಯನ್ನು ರಾತ್ರಿ ವಾಪಸ್ ಕಳಿಸುತ್ತಾರೆ. ಪ್ರಮೋದ್ ಮುತಾಲಿಕ್ ಏನಾದ್ರೂ ದರೋಡೆಕೋರರಾ?ರಾಜ್ಯ ಸರ್ಕಾರದ ಈ ಸವಾಲನ್ನು ಸ್ವೀಕರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಶಿವಮೊಗ್ಗಕ್ಕೆ ಮತ್ತೆ ಬಂದೇ ಬರುತ್ತೇವೆ. ಶಿವಮೊಗ್ಗದ ರಾಗಿಗುಡ್ಡ ಏನಾದರೂ ಪಾಕಿಸ್ತಾನದಲ್ಲಿ ಇದೆಯಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಗೋಪೂಜೆ ನಡೆಯುವ ದೇವಸ್ಥಾನದಲ್ಲಿ ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ: ಪ್ರಮೋದ್ ಮುತಾಲಿಕ್
ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಶ್ರೀರಾಮ ಸೇನೆ ಬಿಡುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮಾಡಿದ್ದೆ ಆಟ ಏಂಬತಾಗಿದೆ. ಶಿವಮೊಗ್ಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವವರಿಗೆ ನಿರ್ಬಂಧ ಇಲ್ಲ. ಕೊಲೆ ಮಾಡುವವರಿಗೆ ನಿರ್ಬಂಧ ಇಲ್ಲ. ಹಿಂದುಗಳ ಮನೆ ಮೇಲೆ ಕಲ್ಲು ಎಸೆಯುವವರಿಗೆ ನಿರ್ಬಂಧ ಇಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವವರಿಗೆ ನಿರ್ಬಂಧ ಇಲ್ಲ. ಪ್ರಮೋದ್ ಮುತಾಲಿಕ್ ಹಾಗೂ ಶ್ರೀರಾಮ ಸೇನೆಯವರಿಗೆ ಮಾತ್ರ ನಿರ್ಬಂಧನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಲವಾರು ತೋರಿಸ್ತೀರಾ? ಕಲ್ಲಿನ ಹೆದರಿಕೆ ತೋರಿಸ್ತೀರಾ? ನಿಮ್ಮ ತಲ್ವಾರ್ ಹಾಗೂ ಕಲ್ಲಿನ ಹೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ನಿಮ್ಮಲ್ಲಿ ಎಷ್ಟು ತಲವಾರ್ ಇದೆ ತೆಗೆದುಕೊಂಡು ಬನ್ನಿ ಉತ್ತರ ಕೊಡಲು ನಮಗೆ ತಾಕತ್ತಿದೆ. ಪ್ರಮೋದ್ ಮುತಾಲಿಕರನ್ನು ತಡೆದು ನಿಲ್ಲಿಸುವಂತಹ ನೀಚ ಕೆಲಸವನ್ನು ಸರ್ಕಾರ ನಿಲ್ಲಿಸಬೇಕು. ಮಧ್ಯರಾತ್ರಿ ಎರಡು ಗಂಟೆ ವೇಳೆ ಪ್ರಮೋದ್ ಮುತಾಲಿಕ್ರನ್ನು ತಡೆದು ನಿಲ್ಲಿಸಲು ಆಗುತ್ತದೆ, ಪ್ರಚೋದನಕಾರಿ ಕಟೌಟ್ಗಳನ್ನು ಹಾಕುವ ಸಂದರ್ಭದಲ್ಲಿ ನೀವೇನು ಮಲಗಿದ್ರಾ? ಟಿಪ್ಪು ಸುಲ್ತಾನ್ ಔರಂಗಜೇಬನ ಕಟೌಟ್ ಹಾಕುವಾಗ ಏನು ಮಾಡುತ್ತಿದ್ರಿ? ಪೊಲೀಸರೇ ನಿಮಗೆ ದಮ್ಮು ಇಲ್ಲವಾ? ತಾಕತ್ತು ಇಲ್ಲವಾ? ಎಂದು ವಾಗ್ದಾಳಿ ಮಾಡಿದರು.
ಎರಡ್ಮೂರು ದಿನಗಳಲ್ಲಿ ಶಿವಮೊಗ್ಗ ಚಲೋ ಹೋರಾಟ ಶ್ರೀರಾಮ ಸೇನೆಯಿಂದ ನಡೆಯುತ್ತದೆ. ಯಾರು ತಡೆಯುತ್ತಾರೆ ನೋಡೋಣ. ಸಿಎಂ ಸಿದ್ದರಾಮಯ್ಯನವರೇ ಮುಸ್ಲಿಮರ ತುಷ್ಟೀಕರಣ ಸಾಕು. ಕಾಶ್ಮೀರದಲ್ಲಿ ಏನು ನಡೆದಿದೆ ನಿಮಗೆ ಗೊತ್ತಿದೆ ಶಿವಮೊಗ್ಗದಲ್ಲಿ ಸಾಕು ನಿಲ್ಲಿಸಿ ಎಂದು ಸವಾಲ್ ಎಸೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ