ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ: ಬಹುದೊಡ್ಡ ಹಗರಣ ಆರೋಪ ಮಾಡಿದ ಜ್ಞಾನೇಂದ್ರ

ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಕಾರ್ಮಿಕ ಇಲಾಖೆಯಲ್ಲಿ 800 ಕೋಟಿ ರೂ ಬೃಹತ್​​​ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಹಣ ದುರುಪಯೋಗವಾಗಿದೆ ಎಂದಿದ್ದಾರೆ. ಜೊತೆಗೆ ಸಚಿವ ಸಂತೋಷ್ ಲಾಡ್ ರಾಜೀನಾಮೆಗೆ ಅವರು ಒತ್ತಾಯಿಸಿದ್ದಾರೆ.​

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ: ಬಹುದೊಡ್ಡ ಹಗರಣ ಆರೋಪ ಮಾಡಿದ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Image Credit source: tv9 kannada
Edited By:

Updated on: Oct 07, 2026 | 4:30 PM

ಮುಖ್ಯಾಂಶಗಳು

  • ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಹಗರಣ
  • ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಆರೋಪ
  • 3 ವರ್ಷದಲ್ಲಿ 800 ಕೋಟಿ ರೂಪಾಯಿ ಹಣ ದುರ್ಬಳಕೆ

ಶಿವಮೊಗ್ಗ, ಅಕ್ಟೋಬರ್​​ 07: ‘ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ ಕಾರ್ಮಿಕ ಇಲಾಖೆಯಲ್ಲಿ ಬಹುದೊಡ್ಡ ಹಗರಣ ನಡೆದಿದೆ. 3 ವರ್ಷದಲ್ಲಿ 800 ಕೋಟಿ ರೂ ಹಣ ದುರ್ಬಳಕೆ ಆಗಿದೆ. ರಾಜ್ಯದ ನೂರಾರು ಕೋಟಿ ಹಣ ದೆಹಲಿ, ಕೇರಳಕ್ಕೆ ವರ್ಗಾವಣೆ ಆಗಿದೆ’ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಕೆ ಕೂಡ ನೀಡಿದ್ದಾರೆ.

3 ವರ್ಷದಲ್ಲಿ 800 ಕೋಟಿ ರೂ ಹಣ ಲೂಟಿ

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ‘ರಾಜ್ಯದಲ್ಲಿ 27,13,000 ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಒಬ್ಬ ಕಾರ್ಮಿಕನ ಆರೋಗ್ಯ ತಪಾಸಣೆಗೆ 2,950 ರೂಪಾಯಿ ವೆಚ್ಚವಾಗಿದೆ. ಆ ಮೂಲಕ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 3 ವರ್ಷದಲ್ಲಿ 800 ಕೋಟಿ ರೂ ಹಣ ಲೂಟಿ ಆಗಿದೆ. ಎಂಟು ಏಜೆನ್ಸಿಗಳ ಮೂಲಕ ಕಾರ್ಮಿಕ ಇಲಾಖೆಯಲ್ಲಿ ಹಗರಣವಾಗಿದೆ’ ಎಂದಿದ್ದಾರೆ.

ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ 

‘ಪ್ರಕರಣವನ್ನು ಸಿಬಿಐ ಅಥವಾ ಇ.ಡಿ ತನಿಖೆಗೆ ನೀಡಬೇಕು. ಹಗರಣದಲ್ಲಿ ಐಎಎಸ್​ ಅಧಿಕಾರಿಗಳು ಸೇರಿ ಎಲ್ಲರೂ ಭಾಗಿಯಾಗಿದ್ದಾರೆ. ಈ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹಗರಣದ ಬಗ್ಗೆ ಕಾರ್ಮಿಕ ಸಚಿವ ಸಂತೋಷ್​ ಲಾಡ್​ಗೆ ಈಗಾಗಲೇ ದೂರು ನೀಡಲಾಗಿದೆ’.

ಇದನ್ನೂ ಓದಿ: ಶಿವಮೊಗ್ಗ ಬೈಪಾಸ್, ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ​466.74 ಕೋಟಿ ಹಣ ರಿಲೀಸ್​​

ಆದರೆ ಸಚಿವರು ಮಾತ್ರ ಈ ಬಗ್ಗೆ ಯಾವುದೇ ಗಮನಹರಿಸಿಲ್ಲ. ಹೀಗಾಗಿ ನೈತಿಕ ಹೊಣೆಹೊತ್ತು ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು. ಜೊತೆಗೆ ಹಗರಣದ ತನಿಖೆಯನ್ನು ಎದುರಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಬಿಜೆಪಿ ದೊಡ್ಡ ಹೋರಾಟ ಮಾಡಲಿದೆ’ ಎಂದು ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದವಾಗಿದೆ: ಆರಗ ಜ್ಞಾನೇಂದ್ರ

ಸ್ಟಿಂಗ್ ಆಪರೇಷನ್​ ಬಗ್ಗೆ ಎಚ್ಚರವಹಿಸಲು ಸಿಎಂ ಡಿಕೆ ಶಿವಕುಮಾರ್​ ಸೂಚನೆ ವಿಚಾರವಾಗಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನಿರಂತರ ಭ್ರಷ್ಟಾಚಾರ ನಡೆಯುತ್ತಿದೆ. ಈ ಹಿನ್ನೆಲೆ ಭ್ರಷ್ಟಾಚಾರ ಹೊರಗೆ ಬರದಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಭಯದಲ್ಲಿದ್ದಾರೆ. ಈ ಹಿನ್ನೆಲೆ ಸ್ಟಿಂಗ್ ಆಪರೇಷನ್ ಕುರಿತು ಸರ್ಕಾರ ಅಲರ್ಟ್ ಆಗಿದೆ’ ಎಂದು ಹೇಳಿದ್ದಾರೆ.

Araga Jnanendra Alleges ₹800 Cr Scam In Karnataka Labour Department; Demands Santosh Lad Resignation
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Wed, 7 October 26

Basavaraj Yaraganavi
Loading...
Unable to load recommendations.
Follow Us