ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಸೇವೆ ಸ್ಥಗಿತ: ಪ್ರಯಾಣಿಕರಿಗೆ ತೀವ್ರ ಸಂಕಷ್ಟ!

ಮಲೆನಾಡಿನ ಸಂಪರ್ಕ ಕೊಂಡಿಯಾದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಇಂಡಿಗೋ ಹಾಗೂ ಸ್ಪೈಸ್‌ಜೆಟ್ ಬಳಿಕ ಕೊನೆಯ ಸಂಸ್ಥೆಯಾದ ‘ಸ್ಟಾರ್ ಏರ್’ ಕೂಡ ನವೆಂಬರ್ 21ರಿಂದ ಸೇವೆ ಬಂದ್ ಮಾಡಲಿದೆ. ಉಡಾನ್ ಸಬ್ಸಿಡಿ ಅಂತ್ಯ ಹಾಗೂ ನಿರ್ವಹಣಾ ಹೊರೆ ಇದಕ್ಕೆ ಕಾರಣವಾಗಿದೆ. ಆದರೆ ಈ ಅಮಾನತು ತಾತ್ಕಾಲಿಕವಾಗಿದ್ದು, ಶೀಘ್ರವೇ ಸೇವೆ ಪುನರಾರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಸೇವೆ ಸ್ಥಗಿತ: ಪ್ರಯಾಣಿಕರಿಗೆ ತೀವ್ರ ಸಂಕಷ್ಟ!
ಶಿವಮೊಗ್ಗ ಏರ್​ಪೋರ್ಟ್​

Updated on: Nov 06, 2026 | 1:08 PM

ಮುಖ್ಯಾಂಶಗಳು

  • ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವೆಂಬರ್ 21ರಿಂದ ಸಂಪೂರ್ಣ ಸೇವೆ ಸ್ಥಗಿತ.
  • ಇಂಡಿಗೋ, ಸ್ಪೈಸ್‌ಜೆಟ್ ಬಳಿಕ ‘ಸ್ಟಾರ್ ಏರ್’ ಬುಕಿಂಗ್‌ ಕೂಡ ಬಂದ್.
  • ಉಡಾನ್ ಸಬ್ಸಿಡಿ ಅಂತ್ಯ ಹಾಗೂ ಆರ್ಥಿಕ ಹೊರೆಯಿಂದ ಈ ಸಮಸ್ಯೆ.

ಶಿವಮೊಗ್ಗ, ನವೆಂಬರ್ 06: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರವು ಶೀಘ್ರದಲ್ಲೇ ತನ್ನ ವಿಮಾನ ಸಂಪರ್ಕವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸೇವೆ ಒದಗಿಸುತ್ತಿದ್ದ ಕೊನೆಯ ಸಂಸ್ಥೆಯಾದ ‘ಸ್ಟಾರ್ ಏರ್’ ತನ್ನ ಬುಕಿಂಗ್‌ಗಳನ್ನು ಸ್ಥಗಿತಗೊಳಿಸಿದ್ದು, ನವೆಂಬರ್ 21 ರಿಂದ ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರೀಕ್ಷೆಯಿದೆ.

ಸೇವೆ ಸ್ಥಗಿತಕ್ಕೆ ಪ್ರಮುಖ ಕಾರಣಗಳು:

  • ಸ್ಥಗಿತಗೊಂಡ ಇಂಡಿಗೋ ಮತ್ತು ಸ್ಪೈಸ್‌ಜೆಟ್: ಮೇ 1 ರಿಂದ ಇಂಡಿಗೋ ತನ್ನ ಶಿವಮೊಗ್ಗ-ಬೆಂಗಳೂರು ಮಾರ್ಗವನ್ನು ಬಂದ್ ಮಾಡಿದ್ದರೆ, ಜೂನ್ 9 ರಿಂದ ಸ್ಪೈಸ್‌ಜೆಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.
  • ಖಾಲಿಯಾಗುತ್ತಿರುವ ಪ್ರಯಾಣಿಕರ ಸಂಖ್ಯೆ: ಸೂಕ್ತ ಸರ್ಕಾರಿ ಬೆಂಬಲ ಹಾಗೂ ಪ್ರೋತ್ಸಾಹದ ಅಭಾವದ ಜೊತೆಗೆ ವಿಮಾನ ಪ್ರಯಾಣಿಕರ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ಸೇವೆ ಸ್ಥಗಿತಕ್ಕೆ ಮುಖ್ಯ ಕಾರಣವಾಗಿದೆ.
  • ಆರ್ಥಿಕ ಹೊರೆ: ಆರ್‌ಸಿಎಸ್-ಉಡಾನ್ (RCS-UDAN) ಯೋಜನೆಯಡಿಯ ಆರ್ಥಿಕ ಸಬ್ಸಿಡಿ ಅವಧಿ ಮುಕ್ತಾಯಗೊಂಡಿರುವುದು ಏರ್‌ಲೈನ್ ಸಂಸ್ಥೆಗಳಿಗೆ ಹೊರೆಯಾಗಿದೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಿಸುತ್ತಿದ್ದು, ತಿಂಗಳಿಗೆ ಬರೋಬರಿ 95 ಲಕ್ಷ ರೂ. ವೇತನ ಹಾಗೂ ನಿರ್ವಹಣಾ ವೆಚ್ಚ ಭರಿಸಲಾಗುತ್ತಿದೆ.

ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, “ವಾಣಿಜ್ಯ ವಿಮಾನ ಸೇವೆಗಳ ಈ ಅಮಾನತು ತಾತ್ಕಾಲಿಕವಾಗಿದೆ. ಕೇಂದ್ರ ಸರ್ಕಾರವು ಉಡಾನ್-6 ಯೋಜನೆಗೆ ಸಿದ್ಧತೆ ನಡೆಸುತ್ತಿದ್ದು, ರಾಜ್ಯ ಸರ್ಕಾರವೂ ಶಿವಮೊಗ್ಗದಿಂದ 10 ಹೊಸ ಮಾರ್ಗಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಮುಂದಿನ ಎರಡು ತಿಂಗಳಲ್ಲಿ ಮತ್ತೆ ವಿಮಾನ ಸೇವೆ ಪುನರಾರಂಭಗೊಳ್ಳುವ ಭರವಸೆಯಿದೆ” ಎಂದಿದ್ದಾರೆ.

Loading...

ಆದಾಗ್ಯೂ, ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನಿಲ್ದಾಣದಲ್ಲಿ ವಿಮಾನ ಸಂಚಾರ ಸ್ಥಗಿತಗೊಳ್ಳುತ್ತಿರುವುದು ಮಲೆನಾಡಿನ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us