ತಾಂತ್ರಿಕ ಸಮಸ್ಯೆ ನೆಪ: ಶಿವಮೊಗ್ಗದಿಂದ ಗೋವಾಕ್ಕೆ ಹಾರದ ವಿಮಾನ, ಪ್ರಯಾಣಿಕರು ಪರದಾಟ
shivamogga airport: ಸ್ಟಾರ್ ಏರ್ಲೈನ್ಸ್ನಿಂದ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನ ಕೊನೆ ಹಂತದಲ್ಲಿ ರದ್ದಾಗಿದೆ. ಹೀಗಾಗಿ 50 ಕ್ಕೂ ಹೆಚ್ಚು ಪ್ರಯಾಣಿಕರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ. ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್ ಏರ್ಲೈನ್ಸ್ ಸಂಸ್ಥೆ ವಿಮಾನವನ್ನು ರದ್ದು ಮಾಡಿದೆ. ಹೀಗಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ, ಡಿಸೆಂಬರ್ 20: ತಾಂತ್ರಿಕ ಸಮಸ್ಯೆ ನೆಪ ಹೇಳಿ ಇಂದು ಸ್ಟಾರ್ ಏರ್ಲೈನ್ಸ್ (Star Airlines) ನಿಂದ ಶಿವಮೊಗ್ಗದಿಂದ ಗೋವಾಕ್ಕೆ ತೆರಳಬೇಕಿದ್ದ ವಿಮಾನವನ್ನು ರದ್ದು ಮಾಡಲಾಗಿದೆ. ಹಾಗಾಗಿ 50ಕ್ಕೂ ಹೆಚ್ಚು ಪ್ರಯಾಣಿಕರು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪರದಾಡಿರುವಂತಹ ಘಟನೆ ನಡೆದಿದೆ. ನಿನ್ನೆ ಕೂಡಾ ಶಿವಮೊಗ್ಗದಿಂದ ಗೋವಾಕ್ಕೆ ವಿಮಾನ ಹಾರಾಟ ರದ್ದು ಮಾಡಲಾಗಿತ್ತು. ಹೀಗಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಬೆಳಗ್ಗೆ 11ಕ್ಕೆ ವಿಮಾನ ತೆರಳಬೇಕಿತ್ತು. ಗೋವಾ ಪ್ರವಾಸಕ್ಕೆ ತೆರಳುತ್ತಿರುವ ಪ್ರಯಾಣಿಕರಿಂದ ಸಂಸ್ಥೆಯ ಅಧಿಕಾರಗಳ ಜೊತೆ ಮಾತಿನ ಚಕಮಕಿ ಉಂಟಾಗಿದ್ದು, ಪ್ರಯಾಣಿಕರ ಸಮಸ್ಯೆಗೆ ಸ್ಟಾರ್ ಏರ್ ಲೈನ್ಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ: ಮೊದಲ ಫ್ಲೈಟ್ ಬರಮಾಡಿಕೊಂಡ ರಾಘವೇಂದ್ರ
ಇತ್ತೀಚೆಗೆ ಹವಾಮಾನ ವೈಪರೀತ್ಯ ಹಿನ್ನೆಲೆ ಜಿಲ್ಲೆಯಿಂದ ಹೈದರಾಬಾದ್ಗೆ ತೆರಳಬೇಕಿದ್ದ ಸ್ಟಾರ್ ಏರ್ಲೈನ್ಸ್ ವಿಮಾನ ಹಾರಾಟ ರದ್ದುಗೊಳಿಸಲಾಗಿತ್ತು. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್ಗೆ ಈ ವಿಮಾನ ತೆರಳಬೇಕಿತ್ತು.
ಶಿವಮೊಗ್ಗದಿಂದ ಹೈದರಾಬಾದ್ಗೆ ಸ್ಟಾರ್ ಏರ್ಲೈನ್ಸ್ ವಿಮಾನದಲ್ಲಿ ಸುಮಾರು 70 ಪ್ರಯಾಣಿಕರು ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟ ರದ್ದುಗೊಂಡ ಹಿನ್ನೆಲೆ 3 ಗಂಟೆ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಡಿದ್ದರು. ವಿಮಾನ ಹಾರಾಟಕ್ಕಾಗಿ ಕಾದು ಸುಸ್ತಾಗಿದ್ದರು.
ಸ್ಟಾರ್ ಏರ್ ಲೈನ್ಸ್ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ವಾಪಸ್ ಆಗಿದ್ದರು. ಅಲ್ಲದೆ, ಯಾವುದೇ ವ್ಯವಸ್ಥೆ ಮಾಡದ ವಿಮಾನ ಸಂಸ್ಥೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು.
ಶಿವಮೊಗ್ಗ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗದ ವಿಮಾನ
ಇತ್ತೀಚೆಗಷ್ಟೇ ಬೆಂಗಳೂರಿನಿಂದ ಶಿವಮೊಗ್ಗ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗದೇ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.