ಹೊಳೆನರಸೀಪುರದ ಲಕ್ಷ್ಮೀನರಸಿಂಹ ರಥೋತ್ಸವ ವೇಳೆ ನೂಕುನುಗ್ಗಲು, ಕಾಲ್ತುಳಿತ
ಹಾಸನ ಜಿಲ್ಲೆಯ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ ವೇಳೆ ನೂಕುನುಗ್ಗಲು, ಕಾಲ್ತುಳಿತವಾಗಿದೆ. ರಥದ ಹಗ್ಗ ಎಳೆಯುವಾಗ ಕೆಲವರು ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಮಹಿಳೆಯರು ಸೇರಿದಂತೆ ಅನೇಕರ ಮೇಲೆ ಕಾಲ್ತುಳಿತವಾಗಿದೆ. ಇನ್ನು ಇದೇ ರಥೋತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಸೊಸೆ ಭವಾನಿರೇವಣ್ಣ ಅವರಿಗೆ ರಥಕ್ಕೆ ಎಸೆಯಲಾದ ಬಾಳೆಹಣ್ಣು ರಭಸವಾಗಿ ಬಂದು ತಗುಲಿದೆ.
ಹಾಸನ, ಮಾರ್ಚ್.24: ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ರಥೋತ್ಸವದ (Lakshmi Narasimha Swamy Rathotsava) ವೇಳೆ ನೂಕುನುಗ್ಗಲು ಉಂಟಾಗಿದ್ದು ಹತ್ತಾರು ಮಂದಿ ಕೆಳಗೆ ಬಿದ್ದ ಘಟನೆ ನಡೆದಿದೆ. ರಥದ ಹಗ್ಗ ಎಳೆಯುವಾಗ ಹತ್ತಾರು ಮಂದಿ ಆಯತಪ್ಪಿ ಬಿದ್ದಿದ್ದು ಕಾಲ್ತುಳಿತಕ್ಕೊಳಗಾಗಿದ್ದಾರೆ. ಗಾಬರಿಯಿಂದ ಜನರು ಒಬ್ಬರ ಮೇಲೆ ಒಬ್ಬರು ತುಳಿದುಕೊಂಡು ಓಡಿದ್ದಾರೆ. ಕೂಡಲೇ ಕೆಳಗೆ ಬಿದ್ದವರನ್ನು ಮೇಲೆತ್ತಲಾಗಿದ್ದು ರಥೋತ್ಸವದ ವೇಳೆ ಭಾರಿ ಅನಾಹುತ ತಪ್ಪಿದೆ. ಇನ್ನು ಇದೇ ರಥೋತ್ಸವದಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಸೊಸೆ ಭವಾನಿರೇವಣ್ಣ ಅವರಿಗೆ ರಥಕ್ಕೆ ಎಸೆಯಲಾದ ಬಾಳೆಹಣ್ಣು ರಭಸವಾಗಿ ಬಂದು ತಗುಲಿದೆ.
ರಥದ ಹಗ್ಗ ಎಳೆಯುವಾಗ ಕೆಲವರು ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಮಹಿಳೆಯರು ಸೇರಿದಂತೆ ಅನೇಕರ ಮೇಲೆ ಕಾಲ್ತುಳಿತವಾಗಿದೆ. ಇನ್ನು ಮತ್ತೊಂದೆಡೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬ ರಥದ ಮೇಲೆ ಏರಿ ಪೂಜೆ ಸಲ್ಲಿಸಿ ಕುಳಿತಿದ್ದ ವೇಳೆ ಭವಾನಿ ರೇವಣ್ಣ ಅವರ ಮೇಲೆ ಬಾಳೆಹಣ್ಣು ಬಿದ್ದಿದೆ. ರಥಕ್ಕೆ ಎಸೆದ ಬಾಳೆಹಣ್ಣು ರಭಸವಾಗಿ ಬಂದು ಭವಾನಿ ರೇವಣ್ಣಗೆ ತಗುಲಿದೆ.
ಇದನ್ನೂ ಓದಿ: Karaga: ಕರಗ ಹೊರಲು ಮೂರು ಗುಂಪುಗಳ ಕಿತ್ತಾಟ, ಐತಿಹಾಸಿಕ ಬೂದಿಗೆರೆ ದ್ರೌಪದಮ್ಮ ಕರಗ ರದ್ದು
ಕುಟುಂಬ ಸಮೇತ ದೇವಾಲಯದಕ್ಕೆ ಆಗಮಿಸಿದ ರೇವಣ್ಣ
ಇನ್ನು ರಥೋತ್ಸವಕ್ಕೆ ಕುಟುಂಬ ಸಮೇತರಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಗಮಿಸಿದ್ದರು. ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ರೇವಣ್ಣ ಕುಟುಂಬ ಪ್ರತಿ ವರ್ಷ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡುತ್ತಿದ್ದರು. ಅದರಂತೆ ಈ ಬಾರಿಯೂ ಪ್ರಸಾದ ವಿತರಿಸಿ ತೇರಿನ ಬಳಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದು ಶ್ರದ್ಧಾ ಭಕ್ತಿಯಿಂದ ತೇರನ್ನೆಳೆದು ಸಂಭ್ರಮಿಸಿದರು.
ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ
ಪೂಜೆ ಬಳಿಕ ಮಾತನಾಡಿದ H.D.ರೇವಣ್ಣ, ಪ್ರತಿ ವರ್ಷ ರಥೋತ್ಸವದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸುತ್ತೇವೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಒಳ್ಳೆಯ ಮಳೆ, ಬೆಳೆ ಆಗಲಿ, ರೈತರಿಗೆ ಆರೋಗ್ಯ ಕೊಡಲಿ, ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ಅವರಿಗೆ ಎಲ್ಲರೂ ಮತ ಕೊಡಲಿ ಎಂದು ಪ್ರಾರ್ಥಿಸಿದ್ದೇನೆ. ಚುನಾವಣೆ ಸಂದರ್ಭ ಒಳ್ಳೆಯ ಕೆಲಸ ಮಾಡುವ ಶಕ್ತಿ ಕೊಡಲಿ ಎಂದು ಬೇಡಿದ್ದೇನೆ. ಪ್ರಜ್ವಲ್ ಅವರಿಗೆ ಎಂಟು ವಿಧಾನಸಭಾ ಕ್ಷೇತ್ರದಿಂದ ಅದ್ಭುತವಾದ ಲೀಡ್ ಬಂದು ಅತಿ ಹೆಚ್ಚಿನ ಮತಗಳಿಂದ ಗೆಲ್ಲಬೇಕು. ಕುಮಾರಸ್ವಾಮಿ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ದೇವರಲ್ಲಿ ಕೇಳಿದ್ದೇನೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಕೊಡಲಿ. ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳು ಗೆಲ್ಲಬೇಕು. ನಮ್ಮವೂ ಮೂರು ಸೇರಿ 28 ಕ್ಕೆ 28 ಗೆದ್ದು ಮೋದಿಯವರು ಪ್ರಧಾನಮಂತ್ರಿ ಆಗಲಿ ಎಂದು ಲಕ್ಷ್ಮೀನರಸಿಂಹ ಸ್ವಾಮಿಯಲ್ಲಿ ಕೇಳಿದ್ದೇನೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:15 pm, Sun, 24 March 24