ಸಿದ್ದರಾಮಯ್ಯ ಸಚಿವ ಸಂಪುಟ ಸಭೆ: ಬರ, ಆರೋಗ್ಯ ಸೇರಿ ಮಹತ್ವದ ನಿರ್ಣಯಗಳಿಗೆ ಅನುಮೋದನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ರಾಜ್ಯದ 5 ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರು, ಮಾ.1: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ನಿನ್ನೆ ಸಚಿವ ಸಂಪುಟ ಸಭೆ (Cabinet Meeting) ನಡೆದಿದೆ. ಅದರಂತೆ, ರಾಜ್ಯದ ಐದು ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಹಾಗೂ ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯದ 5 ಜಿಲ್ಲಾಸ್ಪತ್ರೆಗಳಲ್ಲಿ 50 ಹಾಸಿಗೆಯ ತೀವ್ರ ನಿಗಾ ಆರೈಕೆ ಘಟಕಗಳ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಅನುಮೋದನೆಗೊಂಡ ಕ್ರಿಟಿಕಲ್ ಕೇರ್ ಗಳಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ 5 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 6 ಆಸ್ಪತ್ರೆಗಳು ಸೇರಿದಂತೆ ಒಟ್ಟು 11 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿತ್ತು.
ಒಟ್ಟು 137.75 ಕೋಟಿ ವೆಚ್ವದಲ್ಲಿ 50 ಬೆಡ್ ಕ್ರಿಟಿಕಲ್ ಕೇರ್ಗಳ ಸ್ಥಾಪನೆಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಂಗಳೂರು ನಗರ ಜಿಲ್ಲೆಯ ಸಿ.ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಹಾಸಿಗೆಯ ತೀವ್ರ ನಿಗಾ ಆರೈಕೆ ಘಟಕವನ್ನ 45 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಉಳಿದಂತೆ ನಾಲ್ಕು ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ಕ್ರಿಟಿಕಲ್ ಕೇರ್ ಘಟಕಗಳ ನಿರ್ಮಾಣವನ್ನ ತಲಾ 24 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸಂಪುಟ ಅನುಮೋದನೆ ದೊರೆತಿದೆ.
ಇದನ್ನೂ ಓದಿ: ಜಾತಿ ಗಣತಿ ವರದಿಗೆ ಬಾರಿ ಅಪಸ್ವರ: ಸಿದ್ದರಾಮಯ್ಯ ನಡೆಗೆ ಸ್ವಪಕ್ಷದ ಕೆಲ ನಾಯಕರು ಅಸಮಾಧಾನ
ದಕ್ಷಿಣ ಕನ್ನಡ ಜಿಲ್ಲೆಯ ವೆನ್ ಲಾಕ್ ಆಸ್ಪತ್ರೆ, ವಿಜಯನಗರ ಜಿಲ್ಲಾಸ್ಪತ್ರೆ, ದೊಡ್ಡಬಳ್ಳಾಪುರ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗಳಲ್ಲಿ ತಲಾ 50 ಬೆಡ್ ಗಳ ತೀವ್ರ ನಿಗಾ ಆರೈಕೆ ಘಟಕಗಳ ಸ್ಥಾಪನೆಗೆ ಸಂಪುಟದಿಂದ ಅನುಮೋದನೆ ದೊರೆತಿದೆ. ಈ 5 ತೀವ್ರ ನಿಗಾ ಆರೈಕೆ ಘಟಕಗಳ ನಿರ್ಮಾಣ ಕಾಮಗಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಯೋಜನೆ PM-ABHIM ಅಡಿ ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ವೆಚ್ಚವನ್ನ ಭರಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ
ಬರಗಾಲ ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಹುಲ್ಲು ಖರೀದಿಗೆ SDRF ಫಂಡ್ನಲ್ಲಿ 20 ಕೋಟಿ ಕೊಡಲು ತೀರ್ಮಾನಿಸಲಾಗಿದ್ದು, ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲು ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಪ್ರತಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 25 ಕೋಟಿ
ಬಿಜೆಪಿ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡದ ಹಿನ್ನೆಲೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ಕೊಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಬೆಂಗಳೂರು ಸೆಂಟ್ರಲ್ ಕಾಲೇಜು ಹಾಗೂ ಪ್ರಸನ್ನಕುಮಾರ್ ಬ್ಲಾಕ್ನಲ್ಲಿ ಬೆಂಗಳೂರು ಕೇಂದ್ರ ವಿವಿ ಕಟ್ಟಡ ಕಟ್ಟಲು 163 ಕೋಟಿ ಕೊಡಲು ಒಪ್ಪಿಗೆ ಸೂಚಿಸಲಾಗಿದೆ.
ಕೃಷಿ ಭಾಗ್ಯ ಯೋಜನೆ ಜಾರಿ
ಕೃಷಿ ಭಾಗ್ಯ ಯೋಜನೆ ಜಾರಿ ಮತ್ತು ಕೃಷಿ ಟ್ಯಾಂಕ್ಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ಬಿಡುಗಡೆ, 20 ಹವಾ ನಿಯಂತ್ರಿತ ಹಾಗೂ 20 ಹವ ನಿಯಂತ್ರಣ ರಹಿತ ಬಸ್ಗಳ ಖರೀದಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಒಟ್ಟು 119 ಕೋಟಿ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ