ಬೆಂಗಳೂರು, (ಆಗಸ್ಟ್ 22): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಗುರುವಾರ) ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಇಂದಿನ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್ ಮನವಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.ಬಾಕಿ ಇರುವ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೌದು…ಬಾಕಿ ಇರುವ ಅಂದರೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡದ ವಿಚಾರಕ್ಕೆ ಸಿದ್ದರಾಮಯ್ಯ ಸರ್ಕಾರ ಇಂದಿನ ಸಚಿವ ಸಂಪುಟದಲ್ಲಿ ನೆರವು ಮತ್ತು ಸಲಹೆ ನೀಡುವ ನಿರ್ಣಯ ಕೈಗೊಂಡಿದೆ. ಈ ಮೂಲಕ ರಾಜ್ಯ ಸರ್ಕಾರ, ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣ ಬಗ್ಗೆ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಅವರಿಗೆ ಸಲಹೆ ನೀಡಲು ಮುಂದಾಗಿದೆ.
ಇನ್ನು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಸಿಎಂ ನೇತೃತ್ವದ ಸಭೆಯಲ್ಲಿ 35 ವಿಷಯಗಳ ಕುರಿತು ಚರ್ಚಿಸಿದ್ದೇವೆ. ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ಗೆ ಇರುವ ಹಲವು ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ಕೆಲವು ಪ್ರಕರಣ ಲೋಕಾಯುಕ್ತದಿಂದ ರಾಜ್ಯಪಾಲರಿಗೆ ಹೋಗಿದೆ. ಕೆಲವು ತನಿಖಾ ಸಂಸ್ಥೆಗಳ ವರದಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ. ಅನೇಕ ಅನುಮೋದನೆ ಅರ್ಜಿಗಳು ರಾಜ್ಯಪಾಲರ ಸಮಕ್ಷಮದಲ್ಲಿ ಬಾಕಿ ಇವೆ. ಈ ಅರ್ಜಿಗಳಲ್ಲಿ ಕೆಲವು ಚಾರ್ಜ್ಶೀಟ್ ಸಲ್ಲಿಕೆಗೆ ಒಪ್ಪಿಗೆ ಬಾಕಿ ಇವೆ. ಭ್ರಷ್ಟಾಚಾರ ತಡೆಕಾಯ್ದೆ ಸೆಕ್ಷನ್ 19ರಡಿ ಅನುಮೋದನೆಗೆ ಬಾಕಿ ಇದೆ. 17ಎ ಅಡಿಯಲ್ಲೂ ರಾಜ್ಯಪಾಲರ ಪೂರ್ವಾನುಮತಿಗೆ ಬಾಕಿ ಇದೆ. ಆ ಎಲ್ಲಾ ಪ್ರಕರಣಗಳ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವಂತೆ 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಣಯಿಸಿದ ಎಂದು ತಿಳಿಸಿದರು.
ಅಗಸ್ಟ್ 1 ರಂದು ಕ್ಯಾಬಿನೆಟ್ ಸಭೆ ನಡದಿತ್ತು. ಸಿಎಂ ಅವತ್ತು ಡಿಸಿಎಂಗೆ ಸಭೆ ನಡೆಸಲು ಸೂಚಿಸಿದ್ದರು. ಆರ್ಟಿಕಲ್ 163ರ ಅನ್ವಯ ಏಡ್ ಆ್ಯಂಡ್ ಅಡ್ವೈಸ್ ರಾಜ್ಯಪಾಲರಿಗೆ ನೀಡಿದ್ದೆವು. ಆ ಸಭೆ ಆದಮೇಲೆ ಕ್ಯಾಬಿನೆಟ್ ನಿರ್ಣಯವನ್ನು ದೃಢೀಕರಿಸಲು ಇಂದು ಸಭೆ ನಡೆಯಿತು. ದೃಢೀಕರಣ ಸಂದರ್ಭದಲ್ಲಿ ಸಿಎಂ ತಾವಿರುವುದು ಸೂಕ್ತ ಅಲ್ಲ ಎಂದು ಸಭೆಯಿಂದ ಹೊರಗೆ ಇದ್ದರು ಡಿಸಿಎಂ ನೇತೃತ್ವದಲ್ಲಿ ಮೀಟಿಂಗ್ ಆಗಿ ಆಗಸ್ಟ್ 1ರ ನಿರ್ಣಯವನ್ನು ಇಂದು ದೃಢೀಕರಿಸಿಸದ್ದೇವೆ ಎಂದು ಸ್ಪಷ್ಟಪಡಿಸಿದರು.
2021ರ ಡಿ.9ರಂದು ಜೊಲ್ಲೆ ವಿರುದ್ಧ ರಾಜ್ಯಪಾಲರಿಗೆ ಅರ್ಜಿ ಸಲ್ಲಿಕೆಯಾಗಿದೆ. 2024ರ ಫೆಬ್ರವರಿ 26ರಂದು ನಿರಾಣಿ ವಿರುದ್ಧ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿದೆ. 2023ರ ನವೆಂಬರ್ 21ರಂದು ಹೆಚ್ಡಿ ಕುಮಾರಸ್ವಾಮಿ ವಿರುದ್ಧವೂ ಸಹ ಅರ್ಜಿ ಸಲ್ಲಿಕೆಯಾಗಿದೆ. ಅಲ್ಲದೇ ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಕೆಗೆ ಲೋಕಾಯುಕ್ತ ಎಸ್ಐಟಿ ಅನುಮತಿ ಕೇಳಿತ್ತು. ಇದಕ್ಕೆ 2024ರ ಜುಲೈ 29ರಂದು ರಾಜ್ಯಪಾಲರು ಹೆಚ್ಚಿನ ವಿವರ ಕೇಳಿದ್ದರು. ಅದರಂತೆ ಇದೀಗ ರಾಜ್ಯಪಾಲರಿಗೆ ಲೋಕಾಯುಕ್ತ ಎಸ್ಐಟಿ ಹೆಚ್ಚಿನ ವಿವರಣೆ ಕಳುಹಿಸಿದೆ. ರೆಡ್ಡಿ ಪ್ರಕರಣದಲ್ಲಿ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಈ ಪ್ರಕರಣಗಳ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲು 163ರ ಅನ್ವಯ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಇಂದಿನ ಕ್ಯಾಬಿನೆಟ್ ನಲ್ಲಿ ಈ ನಾಲ್ಕು ಪ್ರಕರಣದ ಬಗ್ಗೆ ರಾಜ್ಯಪಾಲರಿಗೆ ಕಳುಹಿಸುತ್ತೇವೆ. ಶೀಘ್ರವಾಗಿ ಇದನ್ನು ಮಾಡಿ ಎಂದು ರಾಜ್ಯಪಾಲರಿಗೆ ಹೇಳುತ್ತೇವೆ ಎಂದು ಹೇಳಿದರು. ಈ ಮೂಲಕ ರಾಜ ಭವನ ವರ್ಸಸ್ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಸಮರ ನಡೆಯುವುದು ನಿಶ್ಚಿತವಾಗಿದೆ.
ಹೌದು…ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಯಾವಾಗ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟರೋ ಇತ್ತ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮೇಲಿರುವ ಹಳೇ ಪ್ರಕರಣಗಳಿಗೆ ಮರುಜೀವ ನೀಡಿದೆ. ಶಾಸಕ ಜನಾರ್ಧನ ರೆಡ್ಡಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರಕರಣಗಳನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಗಣಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿದ್ದರಾಮಯ್ಯ ಪ್ರಕರಣದಲ್ಲಿ ಹೇಗೆ ರಾಜ್ಯಪಾಲರು ಒಂದೇ ದಿನದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೋ ಹಾಗೇ ಎಚ್ಡಿಕೆ ಕೇಸ್ನಲ್ಲೂ ಪ್ರಾಸಿಕ್ಯೂಷನ್ಗೆ ನೀಡಬೇಕೆಂದು ಒತ್ತಾಯಿಸುತ್ತಿದೆ.
ಈ ಸಂಬಂಧ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿವಂತೆ ಈಗಾಗಲೇ ಲೋಕಾಯಕ್ತ ಎಸ್ಐಟಿ ರಾಜ್ಯಪಾಲರಿಗೆ ಮನವಿ ಮಾಡಿದೆ. ಇದೀಗ ಸಚಿವ ಸಂಪುಟ ಸಹ ಬಾಕಿ ಇರುವ ಪ್ರಕರಣಗಳನ್ನು ಶೀರ್ಘದಲ್ಲೇ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಿದೆ.
ಒಟ್ಟಿನಲ್ಲಿ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹಿಂದೆ ಬಿದ್ದಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ರಾಜ್ಯ ಸರ್ಕಾರ ಶಾಕ್ ಕೊಡಲು ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ