ಬೆಂಗಳೂರು: ಮರಾಠ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವಿಚಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಯಾವುದೇ ರೀತಿಯ ವೈಜ್ಞಾನಿಕ ಅಧ್ಯಯನ ಮಾಡದೆ ಜಾತಿ ಆಧಾರಿತ ನಿಗಮ ಸ್ಥಾಪಿಸುವುದು ಸಮಾಜ ವಿರೋಧಿ ಕೆಲಸವಾಗಿದೆ. ಹಾಗಾಗಿ, ಇದು ಪ್ರಜಾಪ್ರಭುತ್ವ ವಿರೋಧಿ ತೀರ್ಮಾನವೆಂದು ಟೀಕೆ ಮಾಡಿದ್ದಾರೆ. ಚುನಾವಣೆಯನ್ನು ಸಾಧನೆಯ ಬಲದಿಂದ ಗೆಲ್ಲಲು ಆಗಿಲ್ಲ. ಹೀಗಾಗಿ ಮತಿಹೀನ ಬಿಜೆಪಿ ಇಂತಹ ತಂತ್ರ ಮಾಡುತ್ತಿದೆ. ತಂತ್ರ-ಕುತಂತ್ರಗಳಿಂದ ಸಮಾಜ ಒಡೆಯಲು ಹೊರಟಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ BSYಗೆ ಬಡತನ ನಿರ್ಮೂಲನೆಯ ಕಾಳಜಿ ಇದ್ದರೆ, ಸಾಮಾಜಿಕ, ಶೈಕ್ಷಣಿಕ ಸಮಿತಿ ವರದಿ ಆಧರಿಸಿ ಕಾರ್ಯಕ್ರಮ ಮಾಡಲಿ ಎಂದು ಸಹ ಹೇಳಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವಿಚಾರ ಲಿಂಗಾಯತ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಆದರೆ ಬಡತನ ಎಂಬುದು ಜಾತಿ-ಧರ್ಮಗಳನ್ನು ಮೀರಿದ್ದು. ತಳ ಸಮುದಾಯಗಳಲ್ಲಿ ಮಾತ್ರ ಬಡವರು ಇರುವುದಿಲ್ಲ. ಮೇಲ್ಜಾತಿಗಳಲ್ಲಿಯೂ ಬಡವರು ಇರುತ್ತಾರೆ. ಹೀಗಾಗಿ, ಎಲ್ಲಾ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸಬೇಕು. ಅಂತಹ ಕಾರ್ಯಕ್ರಮಗಳನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಕೇವಲ ರಾಜಕೀಯ ಲಾಭಕ್ಕೆ ಇಂತಹ ಕಸರತ್ತು ಮಾಡಬೇಡಿ. ಇಂತಹ ಕ್ಷುಲ್ಲಕ ಬುದ್ಧಿಯ ಕಸರತ್ತುಗಳನ್ನು ಖಂಡಿಸುತ್ತೇನೆ ಎಂದು ಸರ್ಕಾರವನ್ನು ಸಿದ್ದರಾಮಯ್ಯ ಟೀಕಿಸಿದರು.
ಮರಾಠ ಅಭಿವೃದ್ಧಿ ನಿಗಮ ವಿಚಾರ ಕನ್ನಡಿಗರು, ಮರಾಠಿಗರ ಮಧ್ಯೆ ಆಗಾಗ ಸಂಘರ್ಷವಾಗುತ್ತಿತ್ತು. ಆದ್ರೂ ಅವರು ಪರಸ್ಪರ ಸೌಹಾರ್ದತೆಯಿಂದ ಬದುಕುತ್ತಿದ್ದರು. ಈಗ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮುಖಾಂತರ ರಾಜ್ಯ ಸರ್ಕಾರ ಮೂರ್ಖತನದ ಕೆಲಸವನ್ನು ಮಾಡಿದೆ. ಇದರಿಂದ ರಾಜ್ಯದ ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಸಿಎಂ ಹೊಣೆ ಎಂದು ಹೇಳಿದರು.
ನನ್ನ ಸರ್ಕಾರದ ಅವಧಿಯಲ್ಲಿ ಹಲವು ಯೋಜನೆಗಳನ್ನು ಕೊಟ್ಟಿದ್ದೆ. ಎಲ್ಲ ಸಮುದಾಯದ ಬಡವರಿಗಾಗಿ ಯೋಜನೆಗಳನ್ನು ಮಾಡಿದ್ದೆ. ಆದ್ರೆ ಆ ಕಾರ್ಯಕ್ರಮಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ರಾಜಕೀಯ ದ್ವೇಷದಿಂದ ಸರ್ಕಾರ ಈ ಕೆಲಸವನ್ನು ಮಾಡ್ತಿದೆ. ಅಲ್ಲದೆ ಬಜೆಟ್ ಬೆಂಬಲವಿಲ್ಲದ ಯೋಜನೆ ಘೋಷಿಸಿ ಗಿಮಿಕ್ ಮಾಡ್ತಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ’ ಮೀಸಲಾತಿ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾತನಾಡಿದಾಗ ನಮ್ಮನ್ನು ಜಾತಿವಾದಿಗಳೆಂದು ಟೀಕಿಸುವ, ಹಂಗಿಸುವ ಬಿಜೆಪಿ ಈಗ ಮಾಡುತ್ತಿರುವುದೇನು? ಜಾತಿ-ಜಾತಿ ನಡುವೆ ಮಾತ್ರವಲ್ಲ ಭಾಷೆ-ಭಾಷೆ ನಡುವೆ ಕೂಡಾ ಜಗಳ ಹುಟ್ಟುಹಾಕುತ್ತಿದೆ. ಇಂತಹ ತುಘಲಕ್ ನಿರ್ಧಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.
ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಗ್ಯತೆ ಇಲ್ಲ. ವೃದ್ಧಾಪ್ಯವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕೆ ದುಡ್ಡಿಲ್ಲ, ಅತಿವೃಷ್ಟಿಯಿಂದ ಕಷ್ಟನಷ್ಟಕ್ಕೀಡಾಗಿರುವ ಜನ ಬೀದಿಯಲ್ಲಿದ್ದಾರೆ. ಕೊರೊನಾ ಸೋಂಕಿನಿಂದ ಜನ ಸಾಯುತ್ತಿದ್ದಾರೆ. ಇವೆಲ್ಲದ್ದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಜಾತಿ ನಿಗಮ-ಪ್ರಾಧಿಕಾರಕ್ಕೆ ನೂರಾರು ಕೋಟಿ ಎಲ್ಲಿಂದ ಬಂತು? ಎಂದು ಸಿದ್ದರಾಮಯ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.