ಕೃಷ್ಣಾ ಮೇಲ್ದಂಡೆ ಯೋಜನೆಗೆ ತೆಲಂಗಾಣದಿಂದ ಹೊಸ ಕ್ಯಾತೆ: ಎದುರಾಗುತ್ತಿರುವ ಸಮಸ್ಯೆಗಳೇನು?
ರಾಯಚೂರು: ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ರಾಜ್ಯದ ಮೂರು ಮಹತ್ವದ ನೀರಾವರಿ ಯೋಜನೆಗಳ ಬಗ್ಗೆ ನಾಳೆ ನವ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ನೀರು ಬಳಕೆ ವಿಚಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಪ್ರಮುಖ ಯೋಜನೆಗಳಲ್ಲಿ ಒಂದಾದ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಇಂದಿಗೂ ಕುಂಟುತ್ತ ಸಾಗಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸದ್ಬಳಕೆಯಾಗದೇ ವ್ಯರ್ಥವಾಗಿ ಆಂಧ್ರ -ತೆಲಂಗಾಣಕ್ಕೆ ಹರಿದು ಹೋಗ್ತಿದೆ. ಕೃಷ್ಣಾ ನದಿ ನೀರನ್ನ […]

ರಾಯಚೂರು: ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿ ರಾಜ್ಯದ ಮೂರು ಮಹತ್ವದ ನೀರಾವರಿ ಯೋಜನೆಗಳ ಬಗ್ಗೆ ನಾಳೆ ನವ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ನೀರು ಬಳಕೆ ವಿಚಾರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಪ್ರಮುಖ ಯೋಜನೆಗಳಲ್ಲಿ ಒಂದಾದ ಕೃಷ್ಣ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಇಂದಿಗೂ ಕುಂಟುತ್ತ ಸಾಗಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಸದ್ಬಳಕೆಯಾಗದೇ ವ್ಯರ್ಥವಾಗಿ ಆಂಧ್ರ -ತೆಲಂಗಾಣಕ್ಕೆ ಹರಿದು ಹೋಗ್ತಿದೆ.
ಕೃಷ್ಣಾ ನದಿ ನೀರನ್ನ 3 ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ
ಮೈದುಂಬಿ ಹರಿಯುವ ಕೃಷ್ಣಾ ನದಿ 3 ರಾಜ್ಯಗಳಲ್ಲಿ ಹರಿಯುತ್ತೆ. ಹೀಗಾಗಿ, ಈ ನದಿ ನೀರನ್ನ ಮೂರು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಇದೊಂದು ಅಂತಾರಾಜ್ಯ ನೀರಾವರಿ ಯೋಜನೆಯಾಗಿದ್ದು, ಕೃಷ್ಣಾ ನ್ಯಾಯಾಧೀಕರಣದ ಮೊದಲನೇ ತೀರ್ಪಿನ ಪ್ರಕಾರ ನದಿ ನೀರನ್ನ ಕರ್ನಾಟಕಕ್ಕೆ 700 ಟಿಎಂಸಿ, ಆಂಧ್ರಪ್ರದೇಶಕ್ಕೆ 800 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 560 ಟಿಎಂಸಿ ಹಂಚಿಕೆ ಮಾಡಲಾಗಿದೆ. ಅದೇ ರೀತಿ, ಕೃಷ್ಣಾ ನ್ಯಾಯಾಧೀಕರಣದ ಎರಡನೇ ತೀರ್ಪಿನ ಪ್ರಕಾರ ಕರ್ನಾಟಕ ರಾಜ್ಯಕ್ಕೆ 177 ಟಿಎಂಸಿ, ಮಹಾರಾಷ್ಟ್ರಕ್ಕೆ 81 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 190 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.
ಆದರೆ, ಇದೆಲ್ಲದರ ಮಧ್ಯೆ ಆಂಧ್ರಪ್ರದೇಶ ರಾಜ್ಯ ವಿಭಜನೆಯಾದ ನಂತರ ಹೊಸದಾಗಿ ತೆಲಂಗಾಣ ರಾಜ್ಯ ಉದಯಿಸಿದೆ. ಹೀಗಾಗಿ, ಕೃಷ್ಣಾ ನದಿ ನೀರು ಬಳಕೆ ವಿಚಾರದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ. ಈಗಾಗಲೇ ಈ ಮೊದಲೇ ಆಂಧ್ರಪ್ರದೇಶಕ್ಕೆ ಹಂಚಿಕೆಯಾದ ನೀರನ್ನೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಸಮನಾಗಿ ಹಂಚಿಕೊಳ್ಳಬೇಕಿತ್ತು. ಆದರೆ ತೆಲಂಗಾಣ ಹೊಸ ತಗಾದೆ ತೆಗೆಯುವ ಮೂಲಕ ತನ್ನ ರಾಜ್ಯಕ್ಕೆ ಪ್ರತ್ಯೇಕವಾಗಿ ಕೃಷ್ಣಾ ನ್ಯಾಯಾಧೀಕರಣ ನೀರು ಹಂಚಿಕೆ ಮಾಡಬೇಕೆಂದು ಆಕ್ಷೇಪ ಎತ್ತಿದೆ.
ತೆಲಂಗಾಣದ ಹೊಸ ವಿವಾದದಿಂದ ಕರ್ನಾಟಕಕ್ಕೆ ಗಂಡಾಂತರ ಎದುರಾಗಿದೆ ಈ ಬಗ್ಗೆ ಕೃಷ್ಣಾ ನ್ಯಾಯಾಧೀಕರಣದಲ್ಲಿ ತನ್ನ ಆಕ್ಷೇಪ ದಾಖಲಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೀಗಾಗಿ, ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರು ಬಳಕೆಗೆ ತೆಲಂಗಾಣ ಸೃಷ್ಟಿಸಿರುವ ಹೊಸ ವಿವಾದದಿಂದ ಕರ್ನಾಟಕಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ. ಈ ರೀತಿ ಹತ್ತಾರು ವಿವಾದಗಳ ಸುಳಿಗೆ ಸಿಲುಕಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಇಂದಿಗೂ ಕುಂಟುತ್ತ ಸಾಗಿದೆ. ಇನ್ನು ಕಳೆದ 30 ವರ್ಷದಿಂದಲೂ ಬರದ ನಾಡಿನ ರೈತರು ನೀರಾವರಿಯಿಂದ ವಂಚಿತರಾಗುತ್ತಲೇ ಇದ್ಧಾರೆ.
ಇನ್ನು 7 ಜಿಲ್ಲೆಗಳಲ್ಲಿ ಆಮೆಗತಿಯಲ್ಲಿ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ವಿವರಗಳು ಹೀಗಿವೆ. -1.54.43 ಟಿಎಂಸಿ ನೀರು ಬಳಕೆಯ ಉದ್ದೇಶಿತ ಮುಳವಾಡ ಏತ ನೀರಾವರಿ ಯೋಜನೆ – 20.78 ಟಿಎಂಸಿ ನೀರು ಬಳಸಲು ಉದ್ದೇಶಿಸಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆ – 18.95 ಟಿಎಂಸಿ ನೀರು ಬಳಸಲು ಉದ್ದೇಶಿತ ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ – 4.94 ಟಿಎಂಸಿ ನೀರು ಬಳಕೆಯ ಉದ್ದೇಶಿತ ಇಂಡಿ ಏತ ನೀರಾವರಿ ಯೋಜನೆ – 3.32 ಟಿಎಂಸಿ ನೀರು ಬಳಸಲು ಉದ್ದೇಶಿಸಿರುವ ರಾಂಪುರ ಏತ ನೀರಾವರಿ ಯೋಜನೆ – 8.05 ಟಿಎಂಸಿ ನೀರು ಬಳಸಲು ಉದ್ದೇಶಿತ ಮಲ್ಲಾಬಾತ ಏತ ನೀರಾವರಿ ಯೋಜನೆ – 11.56 ಟಿಎಂಸಿ ನೀರು ಬಳಸಲು ಉದ್ದೇಶಿಸಿರುವ ಕೊಪ್ಪಳ ಏತ ನೀರಾವರಿ ಯೋಜನೆ – 3.66 ಟಿಎಂಸಿ ನೀರು ಬಳಸಲು ಉದ್ದೇಶಿಸಿರುವ ಹೇರಕಲ್ ಏತ ನೀರಾವರಿ ಯೋಜನೆ – 5.15 ಟಿಎಂಸಿ ನೀರು ಬಳಸಲು ಉದ್ದೇಶಿತ ಭೀಮಾ ಫ್ಲ್ಯಾಂಕ್ ಯೋಜನೆ
ಇದೆಲ್ಲದರ, ಮಧ್ಯೆಯೂ ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಕೃಷ್ಣಾ ನ್ಯಾಯಾಧೀಕರಣದ ಎರಡನೇ ಐತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಕೈಗೆತ್ತಿಕೊಂಡಿರುವ ಬಹುತೇಕ ಯೋಜನೆಗಳ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ತನ್ನ 5 ವರ್ಷದ ಅವಧಿ ಪೂರ್ಣಗೊಳ್ಳುವುದರೊಳಗೆ ಎಲ್ಲಾ ಯೋಜನೆಗಳನ್ನ ಕಾಮಗಾರಿ ಮುಗಿಸಿ ಕೃಷ್ಣಾ ಕೊಳ್ಳದ ರೈತರ ಜಮೀನಿಗೆ ನೀರು ಹರಿಸುವುದಾಗಿ ನೀಡಿದ್ದ ಭರವಸೆ ಇಂದಿಗೂ ಹುಸಿಯಾಗಿಯೇ ಉಳಿದಿದೆ.
ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಿಡಿಸಬೇಕಿದೆ
ಇನ್ನು, ಎಲ್ಲಾ ಯೋಜನೆಗಳಿಗೆ ಕೇವಲ ಮುಖ್ಯ ಕಾಲುವೆಗಳ ನಿರ್ಮಾಣಕ್ಕೆ ಮಾತ್ರ ಸರ್ಕಾರ ಅಧಿಕೃತವಾಗಿ ಆದೇಶಿಸಿದ್ದು ವಿತರಣ ಕಾಲುವೆಗಳು ಅದ್ಯಾವಾಗ ನಿರ್ಮಿಸಲಾಗುತ್ತೊ ಅನ್ನೋದು ಗೊತ್ತಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ಈ ಎಲ್ಲಾ ಯೋಜನೆಗಳಿಗೆ ಕೃಷ್ಣಾ ನದಿ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಿಡಿಸಬೇಕಿದೆ. ಆದ್ರೆ ಈ ಬಗ್ಗೆ ಇಂದಿಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ರಾಜ್ಯ ಸರ್ಕಾರ ನದಿ ಬಳಕೆಗೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಮುಂದಾಗುತ್ತಿಲ್ಲ.
ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಸಭೆ ಇಂದು ನವ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ರಾಜ್ಯದ ಕೃಷ್ಣಾ ಮೇಲ್ದಂಡೆ ಸೇರಿ ಮೂರು ನೀರಾವರಿ ಯೋಜನೆಗಳ ಬಗ್ಗೆ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ರಾಜ್ಯ ನೀರಾವರಿ ಸಚಿವ ರಮೇಶ್ ಜಾರಕಿಹೊಳೆ ಭಾಗಿಯಾಗಲಿದ್ಧಾರೆ. ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಇದುವರೆಗೂ ಗೆಜೆಟ್ ನೋಟಿಫಿಕೇಷನ್ ಆಗದೆ ಇರೋದ್ರಿಂದ ರಾಜ್ಯದ ಪಾಲಿನ ಕೃಷ್ಣಾ ನದಿ ನೀರು ಬಳಕೆಗೆ ಬ್ರೇಕ್ ಬಿದ್ದಿದೆ.
ಇನ್ನು ಈ ಎಲ್ಲಾ ಕಾಮಗಾರಿಗಳಿಗೆ ನೀರು ಹರಿಸಬೇಕಾದ್ರೆ ಬಹು ಮುಖ್ಯವಾಗಿ ಆಲಮಟ್ಟಿ ಜಲಾಶಯದಲ್ಲಿ 519 ಮೀಟರ್ನಿಂದ 524 ಮೀಟರ್ವರೆಗೆ ನೀರು ಸಂಗ್ರಹಿಸುವ ಅಗತ್ಯವಿದೆ. ಹೀಗಾಗಿ 524 ಮೀಟರ್ವರೆಗೆ ನೀರು ಸಂಗ್ರಹವಾದ್ರೆ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಮಹತ್ವದ ಜವಾಬ್ದಾರಿ ಸದ್ಯದ ಬಿಜೆಪಿ ಸರ್ಕಾರದ ಮೇಲಿದೆ.
ಬರಪೀಡಿತ ಜಿಲ್ಲೆಗಳ ಅನ್ನದಾತರ ಕನಸು ನುಚ್ಚು ನೂರಾಗಲಿದೆ ಇನ್ನು ಕಾಲಮಿತಿಯೊಳಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯದೆ ಇದ್ರೆ ಈಗಾಗಲೇ ಕೈಗೆತ್ತಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಹನಿ ನೀರು ಸಹ ಹರಿಸಲು ಸಾಧ್ಯವಾಗದೆ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಅನ್ನದಾತರ ಕನಸು ನುಚ್ಚು ನೂರಾಗಲಿದೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ. ಅದರಲ್ಲೂ ಸಾವಿರಾರು ಕೋಟಿ ಖರ್ಚು ಮಾಡಿ ಕೈಗೆತ್ತಿಕೊಳ್ಳಲಾದ ನೀರಾವರಿ ಯೋಜನೆಗಳೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಲಿವೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಎಲ್ಲದಕ್ಕೂ ಹೆಚ್ಚಾಗಿ ಈ ನೀರು ಬಳಕೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಆಸಕ್ತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಉತ್ತರ ಕರ್ನಾಟಕ ಭಾಗದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವ ಅವಶ್ಯಕತೆ ಇದೆ. ಇದೆಲ್ಲದರ ಮಧ್ಯೆಯೂ ತೆಲಂಗಾಣ ತೆಗೆದಿರುವ ಹೊಸ ತಗಾದೆಯನ್ನ ಸೂಕ್ತವಾಗಿ ನಿಭಾಯಿಸಿ ರಾಜ್ಯದ ಪಾಲಿನ ನೀರನ್ನ ನ್ಯಾಯಬದ್ಧವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೃಷ್ಣ ನ್ಯಾಯಾಧೀಕರಣದ ಮುಂದೆ ಸಮರ್ಥ ವಾದ ಮಂಡಿಸುವ ಮಹತ್ವದ ಜವಾಬ್ದಾರಿ ಸರ್ಕಾರದ ಮೇಲಿದೆ.
ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕ ಭಾಗದ ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಾವ ರೀತಿಯ ಹೆಜ್ಜೆ ಇಡುತ್ತೆ ಅನ್ನೋದನ್ನ ಕಾದು ನೋಡಬೇಕಷ್ಟೆ. -ಸಿದ್ದು ಬಿರಾದಾರ್