
ಬೆಂಗಳೂರು, (ಜುಲೈ 06): ಸಿಎಂ ಸಿದ್ದರಾಮಯ್ಯನವರನ್ನು (Siddaramaiah) ಎಐಸಿಸಿ ಓಬಿಸಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದೆ. ನಾಯಕತ್ವ ಬದಲಾವಣೆ ಚರ್ಚೆ ನಡುವೇ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರ ಮಟ್ಟದ ಹುದ್ದೆ ನೀಡಿದ್ದು, ಹೀಗಾಗಿ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯಲಾಗುತ್ತಿದೆ ಎನ್ನುವ ಚರ್ಚೆ ಜೋರಾಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಿದ್ದರಾಮಯ್ಯನವರು ಓಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಬಿದ್ದಿದೆ.
ಎಐಸಿಸಿಯ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಗೊಂಡಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಅಂತಹ ಯಾವುದೇ ನೇಮಕಾತಿಗೆ ಆಗಿಲ್ಲ. ಓಬಿಸಿ ಸಲಹಾ ಮಂಡಳಿಯ ಸದಸ್ಯರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಬ್ಬರಾಗಿದ್ದಾರೆ ಎಂದು ತಿಳಿಸಿದೆ.
ಸಿದ್ದರಾಮಯ್ಯನವರು ಓಬಿಸಿ ಸಲಹಾ ಮಂಡಳಿಯ ಸದಸ್ಯರು. ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯ ಆತಿಥ್ಯವನ್ನು ಮುಖ್ಯಮಂತ್ರಿಗಳು ವಹಿಸಿಕೊಂಡಿದ್ದಾರೆ. ಸಭೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಿದ್ದರಾಮಯ್ಯನವರನ್ನ ಓಬಿಸಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯನವರನ್ನ ರಾಷ್ಟ್ರಮಟ್ಟಕ್ಕೆ ಕರೆದೊಯ್ಯಲಾಗುತ್ತಿದೆ. ನಾಯಕತ್ವ ಬದಲಾವಣೆ ಗಲಾಟೆಗೆ ಬ್ರೇಕ್ ಹಾಕಲು ಹೈಕಮಾಂಡ್ ಮಹತ್ವದ ಹುದ್ದೆ ನೀಡಿ ಸಿಎಂ ಕುರ್ಚಿ ಬಿಡಿಸುವ ಪ್ಲ್ಯಾನ್ ಮಾಡಿದೆ ಅಂತೆಲ್ಲಾ ಅಂತೆ ಕಂತೆಗಳು ಶುರುವಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ, ವಿಮರ್ಶೆ, ವಿಶ್ಲೇಷಣೆಗಳು ನಡೆಯುತ್ತಿದ್ದವು.
ಇನ್ನು ವಿಪಕ್ಷ ಬಿಜೆಪಿ ಮಾತ್ರ ಬೇರೆಯದೇ ರಾಜಕೀಯ ರೂಪ ನೀಡಿತ್ತು. ಸಿಎಂ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಎಳೆದು ಸಿಎಂ ಸ್ಥಾನದಿಂದ ದೂರ ಸರಿಸುವ ಪ್ಲ್ಯಾನ್ ಅಂತ ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಸಿಎಂ ಕಚೇರಿ ಸ್ಪಷ್ಟನೆ ನೀಡಿದ್ದು, ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಓಬಿಸಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ, ಸಿಎಂ ಸ್ಥಾನದಿಂದ ಅವರನ್ನು ಕೆಳಗಿಳಿಸಲು ಹಾಗೆ ಮಾಡಲಾಯ್ತೇ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಸಿದ್ದರಾಮಯ್ಯಗೆ ಸಿಎಂ ಸ್ಥಾನ ತ್ಯಜಿಸಿ ದೆಹಲಿಗೆ ಬನ್ನಿ ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವ್ಯಾಖ್ಯಾನಿಸಿದ್ದರು. ಸಿಎಂ ಸಿದ್ದರಾಮಯ್ಯ ನಿವೃತ್ತಿ ಸಮಯ ಹತ್ತಿರ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದರು. ನಂತರ, ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ಅವರಿಗೆ ಪಕ್ಷದ ಓಬಿಸಿ ಸಲಹಾ ಮಂಡಳಿ ಜವಾಬ್ದಾರಿ ನೀಡಿದ್ದಾರೆ ಎನ್ನುವ ಬಿಜೆಪಿ ಟೀಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ತಿರುಗೇಟು ನೀಡಿದ್ದರು. ಒಕ್ಕಲಿಗರು ಹಾಗೂ ಲಿಂಗಾಯತರು ಕೂಡ ರಾಷ್ಟ್ರಮಟ್ಟದಲ್ಲಿ ಓಬಿಸಿಗಳು ಎಂದು ಅವರು ಹೇಳಿದ್ದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಯ್ಯ, ಎಐಸಿಸಿಯ ಒಬಿಸಿ ಸಲಹಾ ಮಂಡಳಿಯ ಸದಸ್ಯನಾಗಿ ನೇಮಕಗೊಂಡಿದ್ದೇನಷ್ಟೆ. ಜುಲೈ 15ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಈ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದಿದ್ದಾರೆ.
Published On - 5:51 pm, Sun, 6 July 25