ಬ್ರಾಹ್ಮಣರಿಂದ ಹಿಡಿದು ಕುರುಬರವರೆಗೆ ಮೀಸಲಾತಿ ಕೇಳ್ತಾರೆ, ದೊಡ್ಡ ಮೀನು ಸಣ್ಣ ಮೀನನ್ನು ನುಂಗಬಾರದು: ಸಿದ್ದರಾಮಯ್ಯ
ಲಿಂಗಾಯತರು, ಒಕ್ಕಲಿಗರು, ಕುರುಬರಿಗೆ ಮೀಸಲಾತಿ ಕೊಡಬೇಡಿ ಎಂದು ಹೇಳುವುದಿಲ್ಲ. ಅದನ್ನು ನಾನು ವಿರೋಧಿಸುತ್ತಿಲ್ಲ. ಆದರೆ, ಸಣ್ಣ ಜಾತಿಯವರ ಮೀಸಲಾತಿಯಲ್ಲಿ ದೊಡ್ಡ ಜಾತಿಯವರನ್ನು ಸೇರಿಸಬೇಡಿ. ಒಂದುವೇಳೆ ಹಾಗೆ ಮಾಡಿದರೆ ಆಗ ಸಣ್ಣ ಜಾತಿಯವರಿಗೆ ಇರೋ ಮೀಸಲಾತಿಯೂ ಸಿಗೋದಿಲ್ಲ.
ಬೆಂಗಳೂರು: ಮೀಸಲಾತಿ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬ್ರಾಹ್ಮಣರಿಂದ ಹಿಡಿದು ಕುರುಬರವರೆಗೆ ಮೀಸಲಾತಿ ಕೇಳುತ್ತಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಸಾರ ಹೆಚ್ಚು ಮಾಡಲು ಜಸ್ಟೀಸ್ ನಾಗಮೋಹನ ದಾಸ್ ವರದಿ ಶಿಫಾರಸು ಮಾಡಿದೆ. ಈ ವಿಚಾರದಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ತಿಂದ್ರೆ ಸಾಮಾಜಿಕ ನ್ಯಾಯ ಸಿಕ್ಕಂತಾಗಲ್ಲ. ಹೀಗಾಗಿ ಸಣ್ಣ ಮೀನುಗಳಿಗೆ ಪ್ರತ್ಯೇಕ ಮೀಸಲಾತಿ ಕೊಡಿ. ದೊಡ್ಡ ಮೀನು ಸಣ್ಣ ಮೀನನ್ನು ತಿನ್ನಬಾರದು ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ನಾನು ಲಿಂಗಾಯತರು, ಒಕ್ಕಲಿಗರು, ಕುರುಬರಿಗೆ ಮೀಸಲಾತಿ ಕೊಡಬೇಡಿ ಎಂದು ಹೇಳುವುದಿಲ್ಲ. ಅದನ್ನು ನಾನು ವಿರೋಧಿಸುತ್ತಿಲ್ಲ. ಆದರೆ, ಸಣ್ಣ ಜಾತಿಯವರ ಮೀಸಲಾತಿಯಲ್ಲಿ ದೊಡ್ಡ ಜಾತಿಯವರನ್ನು ಸೇರಿಸಬೇಡಿ. ಒಂದುವೇಳೆ ಹಾಗೆ ಮಾಡಿದರೆ ಆಗ ಸಣ್ಣ ಜಾತಿಯವರಿಗೆ ಇರೋ ಮೀಸಲಾತಿಯೂ ಸಿಗೋದಿಲ್ಲ. ಇದನ್ನು ತಪ್ಪಿಸಲಿಕ್ಕಾಗಿ ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಮೀಸಲಾತಿಯ ಕುರಿತು ದನಿ ಎತ್ತಿದ ಸಿದ್ದರಾಮಯ್ಯ, ನಾನು ಮೀಸಲಾತಿ ಪರ ಇದ್ದೇನೆ. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಇರಬೇಕು. ಈ ವರ್ಷ 1.5 ಲಕ್ಷ ಕೋಟಿ ರೂ. ಖಾಸಗಿ ವಲಯದಲ್ಲಿ ಹೂಡಿಕೆ ಆಗುತ್ತಿದೆ. ಅಲ್ಲದೇ ಬೇರೆ ಬೇರೆ ಕ್ಷೇತ್ರಗಳು ಖಾಸಗೀಕರಣ ಆಗುತ್ತಿವೆ. ಕೇಂದ್ರವೇ ಹಲವು ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಡುತ್ತಿದ್ದು, ಹೀಗೇ ಮುಂದುವರೆದರೆ ಮೀಸಲಾತಿ ಎನ್ನುವುದು ಕ್ರಮೇಣ ಮರೀಚಿಕೆ ಆಗುತ್ತದೆ. ಹೀಗಾಗಿ ಖಾಸಗಿ ವಲಯದಲ್ಲಿ ಮೀಸಲಾತಿ ಸಿಗಲು ಕೇಂದ್ರ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ತರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಈಗ ಮೀಸಲಾತಿಗೆ ಬೇಡಿಕೆ ಹೆಚ್ಚು ಕೇಳಿ ಬರುತ್ತಿದ್ದರೂ, ಖಾಸಗೀಕರಣ ಹೆಚ್ಚಾದ ಹಾಗೆ ಮೀಸಲಾತಿ ಕಡಿಮೆ ಆಗುತ್ತದೆ. ಕೇಂದ್ರ ಸರ್ಕಾರ ಹೀಗೆಯೇ ಖಾಸಗೀಕರಣಕ್ಕೆ ಮಹತ್ವ ನೀಡುತ್ತಾ ಹೋದರೆ ಕ್ರಮೇಣವಾಗಿ ಮೀಸಲಾತಿ ಮರೀಚಿಕೆಯಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಬೇಕೆಂದರೆ ಖಾಸಗಿ ವಲಯದಲ್ಲಿಯೂ ಮೀಸಲಾತಿ ತರಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ವಲಯದಲ್ಲೂ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಎನ್.ಮಹೇಶ್ ಆಗ್ರಹ
ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ