ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?

ಕರ್ನಾಟಕ ಕಾಂಗ್ರೆಸ್​​ನ ನಾಯಕತ್ವ ಬದಲಾವಣೆ ಗೊಂದಲ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ನಿನ್ನೆ (ಮೇ 26) ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ಜೊತೆ ಸರಣಿ ಮೀಟಿಂಗ್ ಮಾಡಿ ವಾಪಸ್ ಬಂದಿರುವ ಸಿದ್ದರಾಮಯ್ಯ, ನಾಳೆ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಂದಿದೆ. ಈ ನಡುವೆ ಸಿದ್ದರಾಮಯ್ಯ ಟ್ವೀಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷಿ ಯೋಜನೆ ನೆನೆದ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ?
Siddaramaiah

Updated on: May 27, 2026 | 3:02 PM

ಬೆಂಗಳೂರು, (ಮೇ 27): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಮಹತ್ವದ ರಾಜಕೀಯ ಬೆಳೆವಣಿಗೆಗಳು ಗರಿಗೆದರಿದ್ದು, ನಾಯಕತ್ವ ಬದಲಾವಣೆ ಖಚಿತವಾಗಿದೆ. ನಿನ್ನೆ (ಮೇ 26) ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜತೆ ಸರಣಿ ಸಭೆ ಬಳಿಕ ಸಿದ್ದರಾಮಯ್ಯನವರು (Siddaramaiah) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು, ಇದಕ್ಕೆ ಪೂರಕವೆಂಬಂತೆ ಬೇರೆ ಬೇರೆ ವಿದ್ಯಮಾನಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುದ್ದಿಗಳ ನಡುವೆಯೇ ಸಿದ್ದರಾಮಯ್ಯ ತಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ತೀವ್ರ ಕುತುಹಲಕ ಮೂಡಿಸಿದೆ. ಈ ಮೂಲಕ ಸಿದ್ದರಾಮಯ್ಯ ತಮ್ಮ ಮಹತ್ವಕಾಂಕ್ಷೆಯ ಯೋಜನೆ ಬಗ್ಗೆ ಬರೆದುಕೊಂಡಿರುವುದು ಸಾರ್ಥಕ ಆಡಳಿತ ನಡೆಸಿದ್ದೇನೆ ಎನ್ನುವ ವಿದಾಯದ ಸುಳಿವು ನೀಡಿದ್ರಾ ಅನ್ನೋ ಚರ್ಚೆಗಳು ಶುರುವಾಗಿವೆ.

ಮುಖ್ಯಾಂಶಗಳು

  • ಕರ್ನಾಟಕ ಕಾಂಗ್ರೆಸ್​​ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು
  • ನಾಯಕತ್ವ ಬದಲಾವಣೆ ಗೊಂದಲ ಕ್ಲೈಮ್ಯಾಕ್ಸ್ ಹಂತಕ್ಕೆ
  • ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ
  • ಇದರ ಬೆನ್ನಲ್ಲೇ ತಮ್ಮ ಮಹತ್ವಕಾಂಕ್ಷೆ ಯೋಜನೆ ಬಗ್ಗೆ ಬರೆದು ವಿದಾಯದ ಸುಳಿವು ನೀಡಿದ್ರಾ ಸಿದ್ದರಾಮಯ್ಯ?.

ಸಿದ್ದರಾಮಯ್ಯ ಟ್ವೀಟ್

ರಾಜೀನಾಮೆ ಚರ್ಚೆಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯ ಯೋಜನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ. ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಇದನ್ನೂ ಓದಿ: ಕರ್ನಾಟಕ ಅಧಿಕಾರ ಹಂಚಿಕೆ: ಕಾಂಗ್ರೆಸ್ ಹೈಕಮಾಂಡ್ ಜತೆಗಿನ ಮಾತುಕತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್


ಯಾರೂ ಹಸಿವಿನಿಂದ ಮಲಗಬಾರದು ಎಂಬ ಸಂಕಲ್ಪದೊಂದಿಗೆ ಜಾರಿಗೊಂಡ ಅನ್ನಭಾಗ್ಯ ಯೋಜನೆಯು ಕೋಟ್ಯಂತರ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಭದ್ರತೆ ನೀಡುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಆಧಾರವಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಿಸಲು ಈವರೆಗೆ 18,897 ಕೋಟಿ ರೂ. ವ್ಯಯಿಸಲಾಗಿದ್ದು, 4.26 ಕೋಟಿ ಪಡಿತರದಾರರು ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದು ತಮ್ಮ ವಿದಾಯದ ಮುನ್ಸೂಚನೆಯ ಧನ್ಯವಾದದ ಪೋಸ್ಟ್‌ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಅನ್ನಭಾಗ್ಯ ಸಿದ್ದರಾಮಯ್ಯನವರ ಮಹತ್ವಕಾಂಕ್ಷಿ ಯೋಜನೆ

ಹೌದು…ಇದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರ ಯೋಜನೆಗಳಲ್ಲಿ ಮಹತ್ವಕಾಂಕ್ಷಿ ಯೋಜನೆ ಅಂದರೆ ಅದು ಅನ್ನಭಾಗ್ಯ. ಈ ಹಿಂದೆ 2013ರಲ್ಲಿ ಸಿಎಂ ಆಗಿದ್ದ ವೇಳೆಯಲ್ಲೇ ಸಿದ್ದರಾಮಯ್ಯ ಈ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದರು. ಬಳಿಕ ಈ ಯೋಜನೆಯನ್ನು ತಮ್ಮ ಎರಡನೇ ಅವಧಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು, ಯಾರೊಬ್ಬರೂ ಹಸಿದು ಮಲಗಬಾರದು, ಜನಸಾಮಾನ್ಯರ ಬದುಕು ಹಸನಾಗಬೇಕು ಎಂಬ ಆಶಯವನ್ನು ಸಾಕಾರಗೊಳಿಸಲು ‘ಅನ್ನಭಾಗ್ಯ’ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆಜಿ ಆಹಾರ ಧ್ಯಾನದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧ್ಯಾನವನ್ನು ಸೇರಿಸಿ ಪ್ರತಿ ತಿಂಗಳೂ ತಲಾ 10 ಕೆಜಿ ಆಹಾರ ಧ್ಯಾನವನ್ನು ಉಚಿತವಾಗಿ ವಿತರಿಸಲಾಗುತ್ತೆ.

ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇಕೆ?

ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಜಾರಿ ಮಾಡೋಕೆ ಕಾರಣ ಏನು ಎನ್ನುವ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದರು. ಫ್ರೀ ಅಕ್ಕಿ ಯಾಕೆ ಕೊಟ್ಟೆ ಎನ್ನುವ ಬಗ್ಗೆ ಬಾಲ್ಯದಲ್ಲಿ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಉಚಿತ ಅಕ್ಕಿ ಯಾಕೆ ಕೊಟ್ಟೆ ಅಂದರೆ ನಮ್ಮ ಮನೆಯ ಪಕ್ಕದಲ್ಲಿ ಸವಿತಾ ಸಮಾಜ ಕುಟುಂಬ ಇತ್ತು. ಅವರು ಒಂದು ತುತ್ತು ಅನ್ನಕ್ಕೆ ನಮ್ಮ ಮನೆ ಬಳಿಗೆ ಬಂದು ನಿಲ್ಲೋರು. ನಮ್ಮ ಅವ್ವ ಗೊಣಕಿಕೊಂಡು ಕೊಡೋರು. ಯಾರು ಕೂಡ ಯಾರ ಮನೆ ಬಾಗಿಲಿಗೆ ಅನ್ನಕ್ಕಾಗಿ ನಿಲ್ಲಬಾರದು ಅಂತ ಅನಿಸಿತು ಅಂತ ಸಿದ್ದರಾಮಯ್ಯ ಬಾಲ್ಯದ ಆ ನೆನಪು ಬಿಚ್ಚಿಟ್ಟಿದ್ದರು.

ಇದು ವಿದಾಯದ ಸುಳಿವೇ?

ರಾಜೀನಾಮೆ ಚರ್ಚೆ ನಡುವೆ ತಮ್ಮ 3 ವರ್ಷಗಳ ಅಧಿಕಾರವಧಿಯ ಸಾಧನೆಯ ಪೋಸ್ಟ್‌ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, ಇದು ವಿದಾಯದ ಸುಳಿವೇ? ಎಂದು ಪ್ರಶ್ನೆ, ಚರ್ಚೆಗಳು ಶುರುವಾಗಿವೆ. ಹೌದು…ಸಿಎಂ ಸಿದ್ದರಾಮಯ್ಯ ಅವರು ಗುರುವಾರ(ಮೇ.28ರಂದು) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿದೆ. ಸದ್ಯ ಇದಕ್ಕೆ ಪೂರಕವೆಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ X ಖಾತೆಯ ಮೂಲಕ ತಮ್ಮ 3 ವರ್ಷಗಳ ಸಾಧನೆಯ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ತಮ್ಮ ಮಹತ್ವಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯದ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ಸಾರ್ಥಕ ಆಡಳಿತ ನಡೆಸಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿದಂತಿದೆ.

ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಇಂದು (ಮೇ 27) ಬೆಳಗ್ಗೆ ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗಿದ್ದ ದಿವಂಗತ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು,ಜವಾಹರಲಾಲ್ ನೆಹರೂ ಅವರ ಬಗ್ಗೆ ಒಂದಿಷ್ಟು ಮಾತುಳನ್ನಾಡಿದರು. ಇದೇ ವೇಳೆ ರಾಜೀನಾಮೆ ವಿಷಯದ ಕುರಿತು ಮಾಧ್ಯಮಗಳ ಪ್ರಶ್ನೆಗೆ ನಾಳೆ ಮಾತನಾಡುವುದಾಗಿ ಅಲ್ಲಿಂದ ತೆರಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us