ತೆರಿಗೆ ಹಂಚಿಕೆ ಅಸಮತೋಲನ ಪರಿಶೀಲಿಸುವ ಭರವಸೆ ದೊರೆತಿದೆ: ನಿರ್ಮಲಾ ಸೀತಾರಾಮನ್ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಸಮರ್ಪಕ ತೆರಿಗೆ ಹಂಚಿಕೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು, ಜೂನ್ 25: ತೆರಿಗೆ ಹಂಚಿಕೆ ಕುರಿತು ಕರ್ನಾಟಕದ ಪ್ರಸ್ತಾವನೆಗಳನ್ನು ಪರಿಶೀಲಿಸುವುದಾಗಿ ಮತ್ತು 15 ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪರಿಶೀಲಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಅವರು ಮಂಗಳವಾರ ನಿರ್ಮಲಾ ಸೀತಾರಾಮನ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ತೆರಿಗೆ ಹಂಚಿಕೆ, ಮಸೂದೆಗಳಿಗೆ ಅನುಮೋದನೆ ಪಡೆಯುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು.
16 ನೇ ಹಣಕಾಸು ಆಯೋದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ. ಅಲ್ಲದೇ 14 ನೇ ಹಣಕಾಸು ಆಯೋಗದಲ್ಲಿ 4.7% ರಷ್ಟು ಅನುದಾನ ಬಂದಿದ್ದು, 15 ನೇ ಹಣಕಾಸು ಆಯೋಗದಲ್ಲಿ ಕೂಡ ಕಡಿಮೆ ಬಂದಿದೆ. 14-15 ನೇ ಹಣಕಾಸು ಆಯೋಗದ ವಿಶೇಷ ಅನುದಾನ ಒಟ್ಟು 91 ಸಾವಿರ ಕೋಟಿ ರೂ. ಬರಬೇಕಿದ್ದು, ಇನ್ನುಳಿದ ತಿಂಗಳುಗಳಲ್ಲಿ ಈ ಹಣ ಬಿಡುಗಡೆ ಮಾಡಿ. ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದ್ದು ಅದನ್ನು ಸರಿದೂಗಿಸಿ ಎಂದು ಮನವಿ ಮಾಡಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಸಿದ್ದರಾಮಯ್ಯ, ರಾಜ್ಯಪಾಲರಿಂದ ಕಳುಹಿಸಲ್ಪಟ್ಟಿರುವ ಮಸೂದೆಗಳಿಗೆ ಅನುಮೋದನೆ ನೀಡಿ ಎಂದು ಮನವಿ ಮಾಡಿದ್ದಾರೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಮಸೂದೆ, ಕರ್ನಾಟಕ ತೆರಿಗೆ ಮಸೂದೆ-2024, ನೊಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ-2024, ನೋಟರಿಗಳು (ಕರ್ನಾಟಕ ತಿದ್ದುಪಡಿ) ಮಸೂದೆ 2025, ನೊಂದಣಿ (ಕರ್ನಾಟಕ ತಿದ್ದುಪಡಿ ) ಮಸೂದೆ 2025, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಕಾಯ್ದೆ ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ (ತಿದ್ದುಪಡಿ) ಕಾಯ್ದೆಗೆ ಅನುಮೋದನೆ ನೀಡುವಂತೆ ರಾಷ್ಟ್ರಪತಿಗಳಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿಗಳ ಭೇಟಿಗೆ ದೆಹಲಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೋರಿದ್ದೇನೆ: ಸಿದ್ದರಾಮಯ್ಯ
ರಾಷ್ಟ್ರಪತಿ ಭೇಟಿಗೆ ತೆರಳಿದ ಸಂದರ್ಭದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಸಿಎಂ ಸಿದ್ದರಾಮಯ್ಯ ಮುಖಾಮುಖಿ ಯಾಗಿದ್ದು, ಪರಸ್ಪರ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದಾರೆ. ಅಮೀರ್ ಖಾನ್ಗೆ ಸಿದ್ದರಾಮಯ್ಯ ಶುಭಹಾರೈಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಜತೆ ಸಚಿವರಾದ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೆಜೆ ಜಾರ್ಜ್ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಇದ್ದರು.








