Electricity Bill: ವಿದ್ಯುತ್ ದರ ಏರಿಕೆಗೆ ಪರಿಹಾರ ಸೂತ್ರ, ಸಿದ್ದರಾಮಯ್ಯ ನೇತೃತ್ವದಲ್ಲಿಂದು ಮಹತ್ವದ ಸಭೆ
ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ವಿದ್ಯುತ್ ದರ ಏರಿಕೆಗೆ ಪರಿಹಾರ ಸೂತ್ರಕ್ಕೆ ಮುಂದಾಗಿದ್ದಾರೆ.
ಬೆಂಗಳೂರು: ಕರೆಂಟ್ ಮುಟ್ಟಿದ್ರೆ ಶಾಕ್ ಹೊಡೆಯುತ್ತೆ ನಿಜ.. ಆದ್ರೆ ಈ ತಿಂಗಳ ವಿದ್ಯುತ್ ಬಿಲ್(Electricity Bill) ನೋಡಿ ಅದೆಷ್ಟೋ ಜನ ಶಾಕ್ ಆಗಿದ್ದಾರೆ. ಅದರಲ್ಲೂ ಉದ್ಯಮಿಗಳು, ವ್ಯಾಪಾರಿಗಳು ವಿದ್ಯುತ್ ದರ ಏರಿಕೆಯಿಂದ ಕಂಗಾಲಾಗಿದ್ದು, ಆಕ್ರೋಶ ಭುಗಿಲೆದ್ದಿದೆ. ವಿದ್ಯುತ್ ಬಿಲ್ ದುಪ್ಪಟ್ಟು ಬಂದಿದ್ದರಿಂದ ಜನರಿಂದ ರಾಜ್ಯವ್ಯಾಪಿ ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇದರಿಂದ ಎಚ್ಚೆತ್ತುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ವಿದ್ಯುತ್ ದರ ಏರಿಕೆಯಾಗಿರುವ ಬಗ್ಗೆ ಚರ್ಚಿಸಲು ಇಂದು (ಜೂನ್ 23) ಮಧ್ಯಾಹ್ನ 12.30ಕ್ಕೆ ಗೃಹ ಕಚೇರಿ ಕೃಷ್ಣದಲ್ಲಿ ಅಧಿಕಾರಿಗಳ ಮಹತ್ವದ ಸಭೆ ಕರೆದಿದ್ದಾರೆ. ಇದರೊಂದಿಗೆ ವಿದ್ಯುತ್ ದರ ಏರಿಕೆಗೆ ಪರಿಹಾರಕ್ಕೆ ಮುಂದಾಗಿದ್ದಾರೆ.
ಹೌದು…. ರಾಜ್ಯದೆಲ್ಲೆಡೆ ವಿದ್ಯುತ್ ದರ ಹೆಚ್ಚಳ ಖಂಡಿಸಿ ಸರಣಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ಇಂಧನ ಇಲಾಖೆ ಅಧಿಕಾರಿಗಳು, ಕೈಗಾರಿಕೆಗಳೋದ್ಯಮಿಗಳು ಭಾಗಿಯಾಗಲಿದ್ದಾರೆ. ಇನ್ನು ಸಭೆಯಲ್ಲಿ ದರ ಏರಿಕೆಗೆ ಪರಿಹಾರ ಸೂತ್ರ ಹೆಣೆಯುವ ಸಾಧ್ಯತೆಗಳಿವೆ. ದರ ಏರಿಕೆ ತಗ್ಗಿಸಲು ಏನೆಲ್ಲಾ ಸಾಧ್ಯತೆಗಳಿವೆ ಎನ್ನುವ ಕುರಿತು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೆಇಆರ್ಸಿಯ ವಿದ್ಯುತ್ ದರ ಏರಿಕೆ ಆದೇಶವನ್ನು ವಾಪಸ್ ಪಡೆದರೂ ಅಚ್ಚರಿಪಡಬೇಕಿಲ್ಲ. ಹೀಗಾಗಿ ಇಂದಿನ ಸಭೆ ಭಾರೀ ಮಹತ್ವ ಪಡೆದುಕೊಂಡಿದ್ದು, ಜನರು ಸಹ ವಿದ್ಯುತ್ ದರ ಕಡಿಮೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದ ಎಚ್ಚರ ಚಿತ್ತ ಸಿದ್ದರಾಂಯ್ಯನವರ ಸಭೆಯತ್ತ ನೆಟ್ಟಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿದ್ಯುತ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ ಆ ವೇಳೆ ವಿಧಾನಸಭಾ ಚುನಾವಣೆ ಎದುರಾಗಿದ್ದರಿಂದ ವಿದ್ಯುತ್ ದರ ಹೆಚ್ಚಿಸಿ ಹೊರಡಿಸಿದ್ದ ಆದೇಶವನ್ನು ತಡೆಹಿಡಿಯಲಾಗಿತ್ತು. ಆದ್ರೆ, ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ KERC ಹೊರಡಿಸಿದ್ದ ವಿದ್ಯುತ್ ದರ ಏರಿಕೆ ಆದೇಶ ಜಾರಿಗೆ ಬಂದಿದೆ.
ಒಂದೆಡೆ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಪ್ರತಿಭಟನೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ಬಿಲ್ ಹೆಚ್ಚಳದ ಎಫೆಕ್ಟ್ ಬೇರೆ ವಲಯಕ್ಕೂ ತಟ್ಟಿದೆ. ಆ ವಲಯಗಳು ತಮಗೆ ತಟ್ಟಿರೋ ಬಿಸಿಯನ್ನ, ಜನರಿಗೆ ವರ್ಗಾಯಿಸೋಕೆ ಮುಂದಾಗಿವೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಜೊತೆ ಜನರಿಗೆ ಇತರೆ ಬೇರೆ ಬೇರೆ ದರ ಏರಿಕೆ ಬಿಸಿ ತಟ್ಟಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ಇದಕ್ಕೆ ಪರಿಹಾರ ಹುಡುಕಲು ಮುಂದಾಗಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:48 am, Fri, 23 June 23