ದೇಶದಲ್ಲೇ ಮೊದಲ ಬಾರಿಗೆ ಮಸೀದಿಯಲ್ಲಿ ಸ್ಮಾರ್ಟ್ ಕ್ಲಾಸ್; ಮದರಸ ಶಿಕ್ಷಣ ವ್ಯವಸ್ಥೆಗೆ ಆಧುನಿಕ ಸ್ಪರ್ಶ
ಉದ್ದಬೆಟ್ಟು ಮಲ್ಲೂರು ಮದರಸ ನೂತನವಾಗಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಆರಂಭಿಸಲಾಗಿದೆ. ಇದು ರಾಜ್ಯದಲ್ಲೇ ಹಾಗೂ ಮಂಗಳೂರಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ. ಕೇರಳದಲ್ಲೂ ಇಂತಹ ನೂತನ ಶಿಕ್ಷಣ ಪದ್ಧತಿ ಇಲ್ಲ. ಮದರಸ ಆಡಳಿತ ಕಮಿಟಿಯ ಕಾರ್ಯಕ್ಕೆ ಮುಸ್ಲಿಂ ಧಾರ್ಮಿಕ ನಾಯಕರು ಬಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಾಗತೀಕರಣದ ಈ ಕಾಲಘಟ್ಟದಲ್ಲಿ ಹೊಸತನ, ಬದಲಾವಣೆ ಅನಿವಾರ್ಯ. ನಮ್ಮ ರಾಜ್ಯದಲ್ಲಿ ಮದರಸದಲ್ಲಿ ನೀಡುತ್ತಿರುವ ಧಾರ್ಮಿಕ ಶಿಕ್ಷಣದಲ್ಲಿ ಆಧುನೀಕರಣ ಇರಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಅದರ ಫಲವಾಗಿ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಈ ಹಳ್ಳಿಯ ಮದರಸ ಶಿಕ್ಷಣದಲ್ಲಿ ಹೊಸ ಆವಿಷ್ಕಾರ ನಡೆದಿದ್ದು, ದಿಲ್ಲಿ ಜನರು ಸಹ ಈ ಹಳ್ಳಿಯತ್ತ ತಿರುಗಿ ನೋಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉದ್ದಬೆಟ್ಟು ಮಲ್ಲೂರು ಗ್ರಾಮದಲ್ಲಿ ಸಯ್ಯಿದ್ ಹಸನ್ ಹೈದ್ರೋಸ್ ಜುಮ್ಮಾ ಮಸೀದಿ ಇದೆ. ಈ ಮಸೀದಿ ಈಗ ರಾಜ್ಯದ ಇತರ ಮಸೀದಿಗಳಿಗೆ ಮಾದರಿಯಾಗಿದೆ. ಇಲ್ಲಿನ ಮದರಸ ಶಿಕ್ಷಣದಲ್ಲಿ ಕರ್ನಾಟಕ ರಾಜ್ಯದಲ್ಲೇ ಹೊಸ ಆವಿಷ್ಕಾರ ಮಾಡಲಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆ, ಸಂಜೆ ಮಸೀದಿಯಲ್ಲಿ ಮದರಸ ಶಿಕ್ಷಣ ಕಲಿಸಲಾಗುತ್ತದೆ.
ಆದರೆ, ಇಲ್ಲಿನ ಆಡಳಿತ ಮಂಡಳಿಯಿಂದ ಆಧುನಿಕ ಶೈಲಿಯ ಯೋಜನೆ ಮೂಲಕ ವಿದ್ಯಾರ್ಥಿಗಳನ್ನುಮದರಸ ಶಿಕ್ಷಣದತ್ತ ಸೆಳೆಯಲು ಮತ್ತು ಕುಗ್ರಾಮದ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ನೀಡಲು ವಿನೂತನ ಪ್ರಯೋಗ ಮಾಡಲಾಗಿದೆ. ಹಿಂದೆ ಇದ್ದ ಗೋಡೆ ಮಾಯಾವಾಗಿ, ಸುತ್ತಲೂ ಕಲರ್ ಫುಲ್‌ಗೋಡೆ ಇದೆ. ಗೋಡೆ ಮೇಲೆ ಕುರಾನ್ ಬರಹಗಳು, ಕಲರ್ ಫುಲ್ ಬೆಂಚು, ಡೆಸ್ಕ್ಗಳು, ಎಸಿ ರೂಮ್, ಟಿವಿ ಮಾನಿಟರ್ ಮೂಲಕ ಪಾಠ ಪ್ರವಚನವನ್ನು ಮಾಡಲಾಗುತ್ತದೆ ಎನ್ನುವುದು ವಿಶೇಷ.
ಸ್ಮಾರ್ಟ್ ಮದರಸ ! ಸ್ಮಾರ್ಟ್ ಹೇಗೆ ಎಂದರೆ ಮದರಸದಲ್ಲಿ ಕುರಾನ್ ಕಲಿಸುವುದು ಮತ್ತು ಉರ್ದು ಕಲಿಕೆ ಇದೆ. ಕುರಾನ್ ಕಲಿಸುವುದಕ್ಕೆ ಹಿಂದೆಲ್ಲಾ ಪುಸ್ತಕಗಳನ್ನು ಇಟ್ಟುಕೊಂಡು ನೋಟ್ಸ್ ಮಾಡಿಸಿ ಹೇಳಿಕೊಡಲಾಗುತ್ತಿತ್ತು. ಕುರಾನ್ನ ಅಧ್ಯಾಯ ಬಂದಾಗ ಅದರ ಸನ್ನಿವೇಶವನ್ನು ಓದಿ ಹೇಳಲಾಗುತ್ತಿತ್ತು. ಆದರೆ ಈಗ ಮಾನಿಟರ್ ಮೇಲೆ ಉರ್ದು ವಾಕ್ಯಗಳನ್ನು ತೋರಿಸಿ ಕಲಿಸಲಾಗುತ್ತಿದೆ. ಅಲ್ಲದೆ ಕುರಾನ್ನ ಸನ್ನಿವೇಶಗಳನ್ನು ದೃಶ್ಯಗಳ ಮೂಲಕ ತೋರಿಸಿ ಕಲಿಸಲಾಗುತ್ತಿದೆ.
ಮದರಸಕ್ಕೆ ಮೊದಲೆಲ್ಲಾ ಹೋಗುವುದಕ್ಕೆ ಅಷ್ಟೊಂದು ಇಷ್ಟ ಆಗುತ್ತಾ ಇರಲಿಲ್ಲ. ಶಾಲೆ ಬಿಟ್ಟು ಮನೆಗೆ ಹೋಗಿ ತುಂಬಾ ಹೊತ್ತಾದ ಮೇಲೆ ಮದರಸಕ್ಕೆ ಹೋಗುತ್ತಿದ್ದೆವು. ಆದರೆ ಈಗ ಶಾಲೆಯಿಂದ ಮನೆಗೆ ಹೋಗಿ ಒಂದೈದು ನಿಮಿಷದಲ್ಲೇ ಮದರಸಕ್ಕೆ ಹೋಗುತ್ತೇವೆ. ಅಲ್ಲಿ ತುಂಬಾ ಹೊತ್ತು ಕಲಿಯಲು ಕುಳಿತುಕೊಳ್ಳುತ್ತೇವೆ. ಏಕೆಂದರೆ ಇಷ್ಟು ಫೆಸಿಲಿಟಿ ಇರುವುದರಿಂದ ಕಲಿಕೆಗೆ ಹೆಚ್ಚಿನ ಆಸಕ್ತಿ ಬಂದಿದೆ ಎಂದು ಇಲ್ಲಿನ ವಿದ್ಯಾರ್ಥಿ ಹೇಳಿದ್ದಾರೆ.
ಈ ಮೊದಲು ಮದರಸಕ್ಕೆ ಕಲಿಕೆಗೆ ಬರುವವರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಆದರೆ ಈಗ ಕಲಿಕೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಹೊಸ ಶೈಲಿ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸಿದೆ. ಇನ್ನು ಈ ಹೊಸತನಕ್ಕೆ ಆಕರ್ಶಿತರಾಗಿ ಮಕ್ಕಳು ಇಲ್ಲೇ ಇರೋದ್ರಿಂದ ಅವರ ಕಲಿಕೆಗೆ ಹೆಚ್ಚು ಸಮಯ ಸಿಗುತ್ತಿದೆ. ಇದರಿಂದ ಮದರಸದಲ್ಲಿ ಉತ್ಸಾಹದ ವಾತಾವರಣ ಉಂಟಾಗಿದೆ ಎಂದು ಬೋಧಕರಾದ ಅಬ್ದುಲ್ ಖಾದರ್ ಯಮಾನಿ ಹೇಳಿದ್ದಾರೆ.

ಸಯ್ಯದ್ ಹಸನ್ ಹೈದ್ರೋಸ್ ಜುಮ್ಮಾ ಮಸೀದಿ
ಈ ಮೂಲಕ ಉದ್ದಬೆಟ್ಟು ಮಲ್ಲೂರು ಮದರಸದಲ್ಲಿ ನೂತನವಾಗಿ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ಆರಂಭಿಸಲಾಗಿದೆ. ಇದು ರಾಜ್ಯದಲ್ಲೇ ಹಾಗೂ ಮಂಗಳೂರಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ. ಕೇರಳದಲ್ಲೂ ಇಂತಹ ನೂತನ ಶಿಕ್ಷಣ ಪದ್ಧತಿ ಇಲ್ಲ. ಮದರಸ ಆಡಳಿತ ಕಮಿಟಿಯ ಕಾರ್ಯಕ್ಕೆ ಮುಸ್ಲಿಂ ಧಾರ್ಮಿಕ ನಾಯಕರು ಬಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಉದ್ದಬೆಟ್ಟು ಮಲ್ಲೂರು ಮದರಸದಲ್ಲಿ ನೂತನ ಶೈಕ್ಷಣಿಕ ಪದ್ಧತಿ ಆಳವಡಿಸುವುದರ ಜೊತೆಗೆ ಹಳ್ಳಿ ಮಕ್ಕಳಿಗೆ ಆಧುನಿಕ, ಡಿಜಿಟಲ್ ಶಿಕ್ಷಣ ನೀಡುವ ಮೂಲಕ ಮಾದರಿಯಾಗಿದ್ದಾರೆ ಮತ್ತು ಈ ನೂತನ ಯೋಜನೆ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಹೆಚ್ಚಿಸಿದೆ.
(ವರದಿ: ಪೃಥ್ವಿರಾಜ್ ಬೊಮ್ಮನಕೆರೆ)
ಇದನ್ನೂ ಓದಿ:ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್ಸ್ಪೀಕರ್ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ
(Smart class at the mosque for the first time in the country in Mangalore)
Published On - 7:32 am, Sat, 3 April 21