ನೆರೆಯ ಆಂಧ್ರಪ್ರದೇಶ ರಾಜ್ಯದ ವಿಜಯವಾಡ ನಗರದ ನಿವಾಸಿ ಮೊಹಮ್ಮದ್ ಮಸ್ತಾನ್ ಮಹಾಶಿವರಾತ್ರಿಯಂದೇ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ. ಸ್ವಾಮಿಜಿ ಅವರಲ್ಲಿ ನನಗೆ ಲಿಂಗದೀಕ್ಷೆ ಮಾಡಬೇಕೆಂದು ಪ್ರಾರ್ಥನೆ ಮಾಡಿಕೊಂಡಿದ್ದು, ದೀಕ್ಷೆಯ ನಂತರ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಲು ಮೊಹಮ್ಮದ್ ಮಸ್ತಾನ್ ಮಾನಸಿಕವಾಗಿ ಸಿದ್ಧನಾಗಿರುವುದನ್ನು ಜಗದ್ಗುರುಗಳು ಖಾತರಿ ಮಾಡಿಕೊಂಡಿದ್ದಾರೆ.
ಮೊಹಮ್ಮದ್ ಮಸ್ತಾನ್ ಲಿಂಗದೀಕ್ಷೆಯ ಉದ್ದೇಶಗಳನ್ನು ಪರಿಶೀಲಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಮುಸ್ಲಿಂ ಸಮುದಾಯದ ವ್ಯಕ್ತಿ ಮೊಹಮ್ಮದ್ ಮಸ್ತಾನ್ಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲಿಂಗದೀಕ್ಷೆ ಮಾಡಿದ್ದಾರೆ. ಲಿಂಗದೀಕ್ಷೆ ಮಾಡಿದ ಬಳಿಕ ಮಂತ್ರೋಪದೇಶ ಮಾಡಿದ್ದಾರೆ. ಲಿಂಗವನ್ನು ಸದಾ ಧರಿಸುಬೇಕು, ಪ್ರತಿನಿತ್ಯ ತಪ್ಪದೇ ಲಿಂಗ ಪೂಜೆಯನ್ನು ನೆರವೇರಿಸಬೇಕು. ನಿತ್ಯ ಪೂಜೆ ಮಾಡುವಾಗ ಕನಿಷ್ಠ 108 ಬಾರಿ ಪಂಚಾಕ್ಷರಿ ಮಂತ್ರವನ್ನು ಜಪಿಸುವಂತೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಯಾವುದೇ ದುಶ್ಚಟಗಳನ್ನು ಮಾಡದಿರುವಂತೆ ಪ್ರತಿಜ್ಞಾವಿಧಿ ಭೋಧಿಸಿದ್ದಾರೆ ಶ್ರೀಶೈಲ ಜಗದ್ಗುರುಗಳು.
ಮೊಹಮ್ಮದ್ ಮಸ್ತಾನ್ ಲಿಂಗದೀಕ್ಷೆ ಪಡೆದುಕೊಳ್ಳುತ್ತಿರುವ ದೃಶ್ಯ
ವಿಜಯವಾಡ ನಿವಾಸಿಯಾದರೂ ಮಹಾರಾಷ್ಟ್ರದ ಮುಂಬೈನಲ್ಲಿ ಹರ್ಬಲ್ ಉದ್ಯಮ ನಡೆಸುತ್ತಿದ್ದಾರೆ ಮೊಹಮ್ಮದ್ ಮಸ್ತಾನ್. ವೀರಶೈವ ಲಿಂಗಾಯತ ವಿಧಿ ವಿಧಾನಗಳಂತೆ ಲಿಂಗ ಪೂಜೆ ಮಾಡಿಕೊಳ್ಳಬೇಕೆಂದು ಹಂಬಲವಿದ್ದ ಮೊಹಮ್ಮದ್ ಮಸ್ತಾನ್ಗೆ ಮಹಾಶಿವರಾತ್ರಿಯಂದು ಲಿಂಗದೀಕ್ಷೆ ಲಭಿಸಿದಂತಾಗಿದೆ. ಲಿಂಗದೀಕ್ಷೆ ಪಡೆದ ಬಳಿಕ ಮೊಹಮ್ಮದ್ ಮಸ್ತಾನ್ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಭ್ರಮರಾಂಭಿಕಾ ದೇವರ ದರ್ಶನ ಮಾಡಿಕೊಂಡು ವಿಜಯವಾಡದತ್ತ ಪ್ರಯಾಣ ಬೆಳೆಸಿದ್ದಾರೆ.
ಲಿಂಗದೀಕ್ಷೆ ಪಡೆಯುತ್ತಿರುವ ಚಿತ್ರಣ
ಈ ಬಾರಿಯ ಶಿವರಾತ್ರಿ ಆಚರಣೆಗಾಗಿ ನಾವು ಶ್ರೀಶೈಲ ಪೀಠದಲ್ಲಿಯೇ ಇದ್ದೆವು. ವಿಯವಾಡದ ಮೊಹಮ್ಮದ್ ಮಸ್ತಾನ್ ನಮ್ಮನ್ನು ಭೇಟಿ ಮಾಡಿ ವ್ಯಾಪಾರ ವಹಿವಾಟಿನ ನಷ್ಟದ ಕುರಿತು ಮಾತನಾಡಿದ. ನಂತರ ನಮ್ಮ ಲಿಂಗಧಾರಿ ಶಿಷ್ಯರನ್ನು ನೋಡಿ ನನಗೂ ಲಿಂಗಬೇಕೆಂದು ಬೇಡಿಕೆ ಇಟ್ಟ. ಲಿಂಗ ಪಡೆಯಲು ನಿಯಮಗಳಿವೆ ಎಂದು ಹೇಳಿದೇವು. ಎಲ್ಲಾ ನಿಯಮ ಪಾಲನೆ ಮಾಡುವೆ ಎಂದು ಮೊಹಮ್ಮದ್ ಹೇಳಿದ. ಮೊದಲಿನಿಂದಲೂ ಶಿವನ ಕುರಿತು ನನಗೆ ಶ್ರದ್ಧೆ ಭಕ್ತಿಯಿದೆ. ನನಗೆ ಲಿಂಗಬೇಕೆಂದು ವಿನಂತಿಸಿಕೊಂಡ. ಲಿಂಗಧಾರಣೆ ನಂತರ ಪಾಲನೆ ಮಾಡಬೇಕಾದ ನಿಮಯ ಪಾಲಿಸೋದಾಗಿ ಹೇಳಿದ ಕಾರಣ ಹಾಗೂ ಆತನ ಇಚ್ಛಾಶಕ್ತಿ ಮತ್ತು ಅಪೇಕ್ಷೆಯನ್ನು ಪರಿಗಣಿಸಿ ಲಿಂಗದೀಕ್ಷೆ ಮಾಡಲಾಗಿದೆ. ಆತ ಶಿವ ಸಂಸ್ಕೃತಿಗೆ ಆಕರ್ಷಿತನಾದ ಕಾರಣ ಶಿವರಾತ್ರಿಯಂದು ಲಿಂಗದೀಕ್ಷೆ ಮಾಡಲಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶಿವರಾತ್ರಿಯಂದೇ ಲಿಂಗದೀಕ್ಷೆ ಪಡೆದ ಮುಸ್ಲಿಂ ವ್ಯಕ್ತಿ
ಇದನ್ನೂ ಓದಿ: ಆಹ್ವಾನ ಪತ್ರಿಕೆಯಲ್ಲಿ ಸ್ವಾಮೀಜಿ ಹೆಸರಿಲ್ಲ: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭುಗಿಲೆದ್ದ ಭಿನ್ನಮತ