ನಾಡೋಜ ಅನ್ನದಾನೇಶ್ವರ ಶ್ರೀಗಳನ್ನು ಆಹ್ವಾನಿಸದೇ ಇರುವುದಕ್ಕೆ ಸಾಹಿತ್ಯ ಬಳಗದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಾಹಿತ್ಯ ಪರಿಷತ್ತಿನ ಕೆಲ ಸದಸ್ಯರಿಂದ ರಾಜೀನಾಮೆ ಬೆದರಿಕೆ ಕೂಡ ಬಂದಿದೆ. ಆಗ ಎಚ್ಚೆತ್ತು ಮತ್ತೊಮ್ಮೆ ಆಹ್ವಾನ ಪತ್ರಿಕೆ ಮರು ಪ್ರಕಟಿಸಲಾಗಿತ್ತು. ಆದರೆ ಈ ಯಡವಟ್ಟಿನ ರಾಜಕೀಯವೇ ಬೇಡ ಎಂದು ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಇಂದು ಸಮ್ಮೇಳನದಲ್ಲಿ ಭಾಗಿಯಾಗಿಲ್ಲ. ಅಷ್ಟೇ ಅಲ್ಲ ಸಾಹಿತ್ಯ ಸಮ್ಮೇಳನದ ರಾಜಕೀಯ ರಾಡಿಯ ಗುದ್ದಾಟದಲ್ಲಿ ಜಿಲ್ಲೆಯ ಬಹುತೇಕ ಮಠಾಧೀಶರು ಭಾಗಿಯಾಗಿಲ್ಲ. ಇದು ಸಾಕಷ್ಟು ಸಾಹಿತ್ಯಾಸಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನೂರಾರು ಸಾಹಿತ್ಯ ಕೃತಿಗಳು ಹಾಗೂ ಗ್ರಂಥಗಳನ್ನು ರಚಿಸಿದ್ದಾರೆ. ಅಂಥವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸದಿರುವುದಕ್ಕೆ ಸಾಹಿತ್ಯ ಬಳಗದಲ್ಲಿ ಭಿನ್ನಮತ ಉಂಟಾಗಿದೆ. ಶ್ರೀಗಳಿಗೆ ಅವಮಾನಿಸಲಾಗಿದೆ ಎಂದು ಮುಂಡರಗಿ ಅನ್ನದಾನೀಶ್ವರ ಸಂಸ್ಥಾನ ಮಠದ ನರಸಾಪುರದ ಶಾಖಾ ಮಠದ ಶ್ರೀಗಳಾಗಿರುವ ಶ್ರೀ ವೀರೇಶ್ವರ ದೇವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಶ್ರೀಗಳು ಮುಂಡರಗಿ ತಾಲೂಕು ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ 6 ಗುಂಟೆ ಜಾಗ ದಾನವಾಗಿ ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿಯೇ ‘ನಾಡೋಜ’ ಬಿರುದನ್ನು ಪಡೆದಿರುವ ಏಕೈಕ ವ್ಯಕ್ತಿಯಾಗಿರುವ ಸ್ವಾಮೀಜಿಗಳಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಅವಮಾನ ಮಾಡಿದೆ. ಜೊತೆಗೆ ಸುಮಾರು 100 ಕ್ಕೂ ಹೆಚ್ಚು ಗ್ರಂಥಗಳನ್ನು ಶ್ರೀಗಳು ರಚಿಸಿದ್ದಾರೆ. ಶ್ರೀಗಳ ಕೆಲಸದ ಬಗ್ಗೆಯೇ ಅಧ್ಯಯನ ಮಾಡಿರುವ ಮೂವರು ಪಿಎಚ್ಡಿ ಪಡೆದಿದ್ದಾರೆ. ಇನ್ನು ಈ ಹಿಂದೆಯೂ ಸಹ ಕೊರೊನಾ ಸಮಯದಲ್ಲಿ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಆ ವೇಳೆಯೂ ಸಹ ಆಮಂತ್ರಣ ಪತ್ರಿಕೆಯಲ್ಲಿ ಶ್ರೀಗಳ ಹೆಸರು ಪ್ರಕಟಿಸರಲಿಲ್ಲ. ಎರಡನೇ ಬಾರಿಗೆ ಇದೇ ತಪ್ಪನ್ನ ಪುನಃ ಮಾಡಿ ಜಿಲ್ಲಾ ಸಾಹಿತ್ಯ ಪರಿಷತ್ತು ಶ್ರೀಗಳ ಘನತೆಗೆ ದಕ್ಕೆ ತಂದಿದೆ ಎಂದು ಅನ್ನದಾನೀಶ್ವರ ಶ್ರೀಗಳ ಶಿಷ್ಯರಾದ ವಿರೇಶ್ವರ ದೇವ್ರು ಅಸಮಾಧಾನ ಹೊರಹಾಕಿದ್ದಾರೆ.
ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಜಿ
ಸದ್ಯ ಆಮಂತ್ರಣ ಪತ್ರಿಕೆಯನ್ನ ಮರು ಪ್ರಕಟಿಸಿ ಶ್ರೀಗಳಿಗೆ ಆಹ್ವಾನ ನೀಡಲಾಗಿದೆ. ಸಮಾರೋಪ ಸಮಾರಂಭಕ್ಕೆ ಸಾನ್ನಿಧ್ಯ ವಹಿಸಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ. ಪೂಜ್ಯರಿಗೆ ಅವಮಾನಿಸುವುದು ನಮ್ಮ ಉದ್ದೇಶ ಆಗಿರಲಿಲ್ಲ ಆದರೆ ಕಣ್ತಪ್ಪಿನಿಂದಾಗಿ ಈ ರೀತಿ ಆಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣು ಗೋಗೇರಿ ಹೇಳಿದ್ದಾರೆ.
ಸದ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿರುಕು ಮೂಡಿದ್ದು, ಮುಂಬರುವ ಸಾಹಿತ್ಯ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿಯೇ ಸ್ವಹಿತಾಸಕ್ತಿ ಪ್ರದರ್ಶನ ನಡೆಯುತ್ತಿದೆ ಎನ್ನುವ ಬಲವಾದ ಆರೋಪ ಕೇಳಿಬರುತ್ತಿದೆ.ಒಟ್ಟಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿರುವ ಶ್ರೀಗಳಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಸರಿಯಾದ ಗೌರವ ನೀಡಿಲ್ಲ ಎನ್ನುವುದು ಸದ್ಯ ಸಾರ್ವಜನಿಕ ವಲಯದಲ್ಲಿ ಕೇಳಿವರುತ್ತಿರುವ ಮಾತು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ, ಮಾರ್ಚ್ 9ರ ಬಳಿಕ ಹೊಸ ದಿನಾಂಕ ನಿಗದಿ: ಅರವಿಂದ ಲಿಂಬಾವಳಿ