ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ಭರ್ತಿ
ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಶೇಕಡಾ 60 ರಷ್ಟು ಬೋಧಕ ಮತ್ತು ಶೇಕಡಾ 80 ರಷ್ಟು ಬೋಧಕೇತರ ಹುದ್ದೆಗಳು ಖಾಲಿ ಇವೆ ಎಂದು ವಿಧಾನ್ ಪರಿಷತ್ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿದರು. ಸರ್ಕಾರ ಶೀರ್ಘದಲ್ಲೇ ಭರ್ತಿ ಮಾಡುವುದಾಗಿ ಭರವಸೆ ನೀಡಿದೆ. ಹಾಗೇ ವಿಶ್ವವಿದ್ಯಾಲಯದಿಂದ ನಿವೃತ್ತಿಯಾದ ಸಿಬಂದಿಗೆ ಪಿಂಚಣಿ ನೀಡುವುದರ ಬಗ್ಗೆಯೂ ಚರ್ಚೆ ನಡೆದಿದೆ.

ಬೆಂಗಳೂರು, ಮಾರ್ಚ್ 17: ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ (Karnataka Legislature Session) 11ನೇ ದಿನದ ಕಲಾಪ ನಡೆಯುತ್ತಿದೆ. ವಿಧಾನ ಪರಿಷತ್ನಲ್ಲಿ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ (Karnataka Universities) ಬೋಧಕ ಸಿಬ್ಬಂದಿ ನೇಮಕ ಕುರಿತು ಎಂಎಲ್ಸಿ ಎಸ್ವಿ ಸಂಕನೂರ (SV Sankanur) ಪ್ರಶ್ನೆ ಕೇಳಿದರು. ಬೋಧಕ, ಬೋಧಕೇತರ ಸಿಬ್ಬಂದಿ ಯಾವಾಗ ನೇಮಕ ಮಾಡಿಕೊಳ್ಳುತ್ತೀರಿ? ರಾಜ್ಯದ ವಿವಿಗಳಲ್ಲಿ ಶೇ 60 ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಬೋಧಕೇತರ ಸಿಬ್ಬಂದಿ ಶೇ 80 ರಷ್ಟು ಹುದ್ದೆಗಳು ಖಾಲಿ ಇವೆ. ಬೋಧಕ ಸಿಬ್ಬಂದಿ ಇಲ್ಲದಿದ್ದರೆ ಉತ್ತಮ ಶಿಕ್ಷಣ ಸಿಗುವುದಿಲ್ಲ. ಅತಿಥಿ ಉಪನ್ಯಾಸಕರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಯಾವ ಕಾಲಮಿತಿಯಲ್ಲಿ ಬೋಧಕ ಸಿಬ್ಬಂದಿ ಭರ್ತಿ ಮಾಡುತ್ತೀರಿ ಎಂದು ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಪ್ರಶ್ನಿಸಿದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಉತ್ತರ ನೀಡಿದರು. “ಬೋಧಕ, ಬೋಧಕೇತರ ಸಿಬ್ಬಂದಿ ಹಿಂದಿನಿಂದಲೂ ಖಾಲಿ ಇದೆ. 2,800 ಬೋಧಕ ಸಿಬ್ಬಂದಿ ಹೆದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರ ಬಂದಾಗಿನಿಂದ ಅನೇಕ ಹುದ್ದೆಗಳನ್ನು ತುಂಬಿದ್ದೇವೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಹಗರಣ ಆಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಕೆಇಎ ಮೂಲಕ ಪರೀಕ್ಷೆ ನಡೆದಿದೆ. ಸಚಿವ ಸಂಪುಟದ ಉಪಸಮಿತಿಯನ್ನೂ ಕೂಡ ಮಾಡಲಾಗಿದೆ. ಕೆಲವೆಡೆ ಅವೈಜ್ಞಾನಿಕವಾಗಿ ಹುದ್ದೆ ಸೃಷ್ಟಿ ಮಾಡಲಾಗಿದೆ. ಪರಿಶೀಲನೆಗಾಗಿ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗಿದೆ” ಎಂದು ಹೇಳಿದರು.
“ವಿಶ್ವವಿದ್ಯಾಲಯಗಳಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ ಇವೆ. ಯಾವಾಗ, ಎಷ್ಟು ಹುದ್ದೆ ಭರ್ತಿ ಅಂತ ಸ್ಪಷ್ಟವಾಗಿ ಹೇಳಿ. ವಿಶ್ವವಿದ್ಯಾಲಯಗಳು ಮುಚ್ಚುವ ಹಂತಕ್ಕೆ ಬಂದಿವೆ” ಎಂದು ಎಂದು ಎಸ್.ವಿ.ಸಂಕನೂರು ಮರು ಪ್ರಶ್ನೆ ಕೇಳಿದರು.
“ಶೀಘ್ರದಲ್ಲೇ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ” ಎಂದು ಸಚಿವರು ಉತ್ತರ ನೀಡಿದರು. ನಿವೃತ್ತಿಯಾದವರಿಗೆ ಪೆನ್ಷನ್ ಕೊಡಬೇಕಿದೆ. ಆದರೆ, ವಿಶ್ವವಿದ್ಯಾಲಯಗಳ ಖಾತೆಯಲ್ಲಿರುವ ಹಣ ಖಾಲಿಯಾಗಿದೆ.
“ಕುಲಪತಿ, ಕುಲಸಚಿವರು ಸುದ್ದಿಗೋಷ್ಠಿ ಮಾಡಿ ಹೇಳುತ್ತಿದ್ದಾರೆ. ಪೆನ್ಷನ್ ಸಿಗದೆ ಹೋರಾಟ ಮಾಡುವ ಹಂತಕ್ಕೆ ಬಂದಿದ್ದಾರೆ” ಎಂಎಲ್ಸಿ ಎಸ್.ವಿ ಸಂಕನೂರು ಪ್ರಶ್ನೆ ಕೇಳಿದರು.
“ವಿವಿಗಳ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹೊಸ ವಿವಿ ತೆರೆಯುವಾಗ ಹೊಣೆಗಾರಿಕೆ ಬಗ್ಗೆ ಯೋಚನೆ ಮಾಡಿಲ್ಲ. ಪಿಂಚಣಿ ಯೋಜನೆ ಹೊಸ ವಿವಿಗಳಿಗೂ ಸಿಗಬೇಕಿತ್ತು, ಆದರೆ ಆಗಿಲ್ಲ. 70 ಕೋಟಿವರೆಗೂ ಹೊಣೆಗಾರಿಕೆ ಕೊಡಲಾಗಿದೆ. ಪದವೀಧರ ಮತ್ತು ಶಿಕ್ಷಣ ಕ್ಷೇತ್ರದವರ ಜೊತೆ ಚರ್ಚೆ ಮಾಡಿದ್ದೇವೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಹಣಕಾಸು ಇಲಾಖೆ ಕೂಡ ತನ್ನದೇ ಆದ ಜವಾಬ್ದಾರಿ ಹೊಂದಿದೆ” ಎಂದರು.
ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ 500 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ; ಮಾರ್ಚ್ 21 ಕೊನೆಯ ದಿನಾಂಕ
ಚರ್ಚೆಗೆ ಬಂದ ಯುವನಿಧಿ
“ಯುವನಿಧಿಗೆ ಸರ್ಕಾರ 450 ಕೋಟಿ ರೂ. ಕೊಡುತ್ತೇವೆ ಎಂದಿತ್ತು. ಶೇ.35ರಷ್ಟು ಯುವಕರಿಗೂ ಕೂಡ ‘ಯುವನಿಧಿ’ ತಲುಪುತ್ತಿಲ್ಲ. ಬೇರೆ ಬೇರೆ ಕಾರಣಕ್ಕೆ ‘ಯುವನಿಧಿ’ ರಿಜೆಕ್ಟ್ ಆಗುತ್ತಿದೆ. ಯುವನಿಧಿ ಯೋಜನೆಯ ಮೌಲ್ಯಮಾಪನ ಇದುವರೆಗೆ ಆಗಿಲ್ಲ” ಎಂದು ವಿಧಾನಪರಿಷತ್ನಲ್ಲಿ ಬಿಜೆಪಿ ಎಂಎಲ್ಸಿ ಡಿ.ಸಿ.ಅರುಣ್ ಎಂದು ಪ್ರಶ್ನಿಸಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉತ್ತರ ನೀಡಿದರು. “ಯುವನಿಧಿಯಲ್ಲಿ ಟಾರ್ಗೆಟ್ ಇಲ್ಲ, ಅದು ಅನ್ಲಿಮಿಟೆಡ್. ಯುವನಿಧಿಗೆ ಅರ್ಜಿ ಸಲ್ಲಿಸಲು ಯುವಕರಿಗೆ ಮುಕ್ತ ಅವಕಾಶವಿದೆ. ಪ್ರತಿ ವರ್ಷ ಡಿಪ್ಲೊಮಾ, ಪದವಿಯವರು 5 ಲಕ್ಷ ಹೊರ ಬರುತ್ತಾರೆ. 10 ಲಕ್ಷದವರೆಗೆ ಯುವನಿಧಿ ಯೋಜನೆಗೆ ಅರ್ಜಿ ಸ್ವೀಕಾರ ಆಗಬಹುದು. 2,62,207 ಪೈಕಿ 1,74,170 ವಿದ್ಯಾರ್ಥಿಗಳಿಗೆ ಯುವನಿಧಿ ತಲುಪಿದೆ. 180 ದಿನಗಳ ಒಳಗೆ ಕೆಲಸ ಸಿಗಲಿಲ್ಲ ಅಂದ್ರೆ ಮಾತ್ರೆ ಯುವನಿಧಿ ಸಿಗುತ್ತೆ. ಉದ್ಯೋಗ ಸಿಕ್ಕಿದೆಯಾ ಸಿಕ್ಕಿಲ್ವಾ ಎಂಬುದರ ಮೌಲ್ಯ ಮಾಪನ ಆಗುತ್ತಿದೆ. ಅವರಿಗೆ ಉದ್ಯೋಗ ದೊರೆತ ತಕ್ಷಣ ಯುವನಿಧಿ ಕಡಿತವಾಗುತ್ತೆ. ಡಿಡಿಪಿಐ ಮಟ್ಟದಲ್ಲಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪೆಂಡಿಂಗ್ ಇದೆ.” ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Mon, 17 March 25








