ಬೆಂಗಳೂರು: ಹಣಕ್ಕೆ ಒತ್ತಾಯಿಸಿ ಬೈಕ್ ಸವಾರನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ಆರೋಪ
ವಿಜಯನಗರದ ಟ್ರಾಫಿಕ್ ಪೊಲೀಸರು ಲಂಚಕ್ಕಾಗಿ ಒತ್ತಾಯಿಸಿ ಬೈಕ್ ಸವಾರ ಈಶ್ವರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮದ್ಯಪಾನದ ಆರೋಪದ ಮೇಲೆ 10,000 ರೂ. ದಂಡ ವಿಧಿಸಿದ ಪೊಲೀಸರು, 3,000 ರೂ. ಲಂಚಕ್ಕೆ ಒತ್ತಾಯಿಸಿದ್ದರು. ಈಶ್ವರ್ ಲಂಚ ನೀಡಲು ನಿರಾಕರಿಸಿದಾಗ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಬೆಂಗಳೂರು, ಮಾರ್ಚ್ 17: ಹಣ್ಣಕ್ಕೆ ಒತ್ತಾಯಿಸಿ ಬೈಕ್ ಸವಾರನ ಮೇಲೆ ವಿಜಯನಗರ ಟ್ರಾಫಿಕ್ ಪೊಲೀಸ್ (Traffic Police) ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈಶ್ವರ್ ಹಲ್ಲೆಗೊಳಗಾದ ಬೈಕ್ ಸವಾರ. “ಶುಕ್ರವಾರ ಮಾರ್ಚ್ 14ರಂದು ರಾತ್ರಿ ನಾನು (ಈಶ್ವರ್) ಜಿಟಿ ಮಾಲ್ ಬಳಿ ಆರ್ಎಕ್ಸ್ ಬೈಕ್ ಮೇಲೆ ಹೋಗುತ್ತಿದ್ದಾಗ, ವಿಜಯನಗರ ಟ್ರಾಫಿಕ್ ಪೊಲೀಸರು ನಿಲ್ಲಿಸಿ, ತಪಾಸಣೆ ನಡೆಸಿದರು. ಈಶ್ವರ್ ಅವರು ಮದ್ಯ ಸೇವಿಸಿರುವುದು ಧೃಡವಾಗಿದೆ. ಆಗ, ಟ್ರಾಫಿಕ್ ಪೊಲೀಸರು 10 ಸಾವಿರ ರೂ. ದಂಡ ಆಗುತ್ತೆ, ಅದರ ಬದಲಿಗೆ 3 ಸಾವಿರ ರೂ. ನೀಡಿದರೆ ಬಿಟ್ಟು ಕಳುಹಿಸುತ್ತೇವೆ ಎಂದರು. ಆಗ ನಾನು 3 ಸಾವಿರ ರೂಪಾಯಿ ಫೋನ್ ಪೇ ಮಾಡಲು ಮುಂದಾದೆ ಆದರೆ, ಟ್ರಾಫಿಕ್ ಪೊಲೀಸರು ಕ್ಯಾಶ್ ನೀಡುವಂತೆ ಹೇಳಿದರು. ಆಗ ನಾನು, ಕ್ಯಾಶ್ ಇಲ್ಲ, 10 ಸಾವಿರ ರೂ. ದಂಡವನ್ನು ಕೋರ್ಟ್ನಲ್ಲಿ ಕಟ್ಟುತ್ತೇನೆ ಎಂದೆ. ಅದಕ್ಕೆ ಟ್ರಾಫಿಕ್ ಪೊಲೀಸರು ನನ್ನ ಗಾಡಿ ಸೀಜ್ ಮಾಡಿದರು.”
“ನಂತರ, ಹೊಯ್ಸಳ ಕರೆಸಿ, ನನ್ನನ್ನು ಗೋವಿಂದರಾಜ ನಗರ ಠಾಣೆಗೆ ಕರೆದುಕೊಂಡು ಹೋದರು. ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತೀಯಾ ಅಂತ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದರು. ಬಳಿಕ ನಾನು, ಕೋರ್ಟ್ನಲ್ಲಿ ದಂಡ ಪಾವತಿ ಮಾಡುತ್ತೇನೆ ಅಂತ ಹೇಳಿ ಮನೆಗೆ ಹೋದೆ. ಮಾರ್ಚ್ 15ರಂದು ಕೋರ್ಟ್ ಹೋಗಿ ಬಾಕಿ ದಂಡ ಸೇರಿ 13 ಸಾವಿರ ಪಾವತಿ ಮಾಡಿದೆ. ದಂಡ ಪಾವತಿ ರಶೀದಿಯೊಂದಿಗೆ ಬೈಕ್ ಕೊಡುವಂತೆ ನನ್ನ ಸ್ನೇಹಿತ ಮಾರ್ಚ್ 16ರಂದು ಠಾಣೆಗೆ ಹೋಗಿದ್ದರು.”
“ಬಳಿಕ, ಪೊಲೀಸರು ನನ್ನನ್ನು ವಿಜಯನಗರ ಠಾಣೆಗೆ ಕರೆಸಿಕೊಂಡರು. ಠಾಣೆಯಲ್ಲಿ ಎಸ್ಐ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ಧಿಕ್ ನನ್ನ ಮೇಲೆ ಹಲ್ಲೆ ಮಾಡಿದರು. ನಮಗೆ 3 ಸಾವಿರ ಕೊಟ್ಟಿದ್ರೆ 10 ಸಾವಿರ ಉಳಿತಿತಲ್ವಾ ಅಂತ ಹೇಳಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೂಟ್ನಿಂದ ಒದ್ದು ಥಳಿಸಿದ್ದಾರೆ” ಎಂದು ಈಶ್ವರ್ ಆರೋಪ ಮಾಡಿದ್ದಾರೆ.”
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಫೇಕ್ ನ್ಯೂಸ್ ಹಾವಳಿ: ಬೆಂಗಳೂರು, ಉತ್ತರ ಕನ್ನಡ ಮುಂಚೂಣಿಯಲ್ಲಿ
ಹಲ್ಲೆ ಮಾಡುತ್ತಿದ್ದಂತೆ ಪೊಲೀಸ್ ಠಾಣೆಯಲ್ಲಿ ಮೂರ್ಚೆ ಹೋದೆ. ಬಳಿಕ, ಸ್ನೇಹಿತರು ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು ಎಂದು ಈಶ್ವರ್ ವಿಡಿಯೋದಲ್ಲಿ ಹೇಳಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Mon, 17 March 25