ಓದಿಲ್ಲ ಎಂದು ಮನೆಯಲ್ಲಿ ಕುಳಿತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ; ಮನೆಗೆ ಹುಡುಕಿಕೊಂಡು ಬಂದ ಕ್ಷೇತ್ರ ಶಿಕ್ಷಣಾಧಿಕಾರಿ

TV9 Digital Desk

| Edited By: preethi shettigar

Updated on: Jul 19, 2021 | 2:31 PM

ಇನ್ನೇನು ಒಂದು ಗಂಟೆಯಲ್ಲಿ ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಶಿಕ್ಷಣಾಧಿಕಾರಿ ಮಂಜುನಾಥ ಅವರು, ಬೇಡ ಸರ್ ನಾನು ಓದಿಲ್ಲ ಎಂದು ಹೇಳುತ್ತಿದ್ದ ಸಂತೆ ಬೆನ್ನೂರು ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿನಿಯ ಮನವೊಲಿಸಿ, ನಿನಗೆ ಗೊತ್ತಿರುವಷ್ಟು ಬರೆಯಮ್ಮ, ಕಡಿಮೆ ಅಂಕ ಬಂದರೆ ಮತ್ತೆ ಅವಕಾಶ ಇರುತ್ತದೆ ಎಂದು ಮನವರಿಕೆ ಮಾಡಿದ್ದಾರೆ.

ಓದಿಲ್ಲ ಎಂದು ಮನೆಯಲ್ಲಿ ಕುಳಿತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ;  ಮನೆಗೆ ಹುಡುಕಿಕೊಂಡು ಬಂದ ಕ್ಷೇತ್ರ ಶಿಕ್ಷಣಾಧಿಕಾರಿ
ಓದಿಲ್ಲ ಎಂದು ಮನೆಯಲ್ಲಿ ಕುಳಿತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ

ದಾವಣಗೆರೆ: ಕೊವಿಡ್ ಸಂಕಷ್ಟದಿಂದ ಶಾಲೆಗಳಿಗೆ ರಜೆ ಇದೆ. ಸರ್ಕಾರ ಆನ್​ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ಅಥವಾ ಮೊಬೈಲ್ ಇಲ್ಲದೆ ಎಷ್ಟೋ ಮಕ್ಕಳು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಂದಿನಿಂದ ( ಜುಲೈ 19) ಎಸ್​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿದೆ. ಅದರಂತೆ ಎಲ್ಲಾ ಮಕ್ಕಳು ಪರೀಕ್ಷೆ ಬರೆಯಲು ಉತ್ಸಾಹಕರಾಗಿದ್ದಾರೆ. ಆದರೆ ದಾವಣಗೆರೆಯ ವಿದ್ಯಾರ್ಥಿನಿ ಒಬ್ಬಳು ಸರಿಯಾಗಿ ಓದಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಆರಂಭವಾದರೂ ಸುಮ್ಮನೆ ಮನೆಯಲ್ಲಿಯೇ ಇದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಕ್ಷೇತ್ರದ ಶಿಕ್ಷಣಾಧಿಕಾರಿ ಮನೆಗೆ ಬಂದಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ರಜಿನಾಭಾನು ಎಂಬ ವಿದ್ಯಾರ್ಥಿನಿ, ಕ್ಲಾಸ್​ಗಳು ಸರಿಯಾಗಿ ನಡೆದಿಲ್ಲ. ಆನ್​ಲೈನ್ ಕ್ಲಾಸ್​ಗಳು ಅಷ್ಟಕಷ್ಟೆ. ಹೀಗೆ ಓದದೇ ಇದ್ದ ನಾನು ಪರೀಕ್ಷೆ ಬರೆಯುವುದು ಬೇಡ ಎಂದು ನಿರ್ಧರಿಸಿದ್ದೇನೆ ಎಂದು ವಿದ್ಯಾರ್ಥಿ ತನ್ನ ಪಾಲಕರಿಗೆ ತಿಳಿಸಿದ್ದಾಳೆ. ಇದರಿಂದ ಪಾಲಕರು ಸುಮ್ಮನಾಗಿದ್ದಾರೆ. ಈ ವಿಷಯ ಶಾಲೆಯ ಶಿಕ್ಷಕರಿಗೆ ತಿಳಿದಿದ್ದು, ಅವರು ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಅವರಿಗೆ ಹೇಳಿದ್ದಾರೆ. ಈ ವಿಚಾರ ಗೊತ್ತಾಗಿದ್ದೇ ತಡ, ಸ್ವತಃ ತಾವೇ ಸ್ಥಳೀಯರ ಸಹಾಯದಿಂದ ರಜಿನಾಭಾನು ಅವರ ಮನೆಗೆ ಹೋಗಿದ್ದಾರೆ.

ಇನ್ನೇನು ಒಂದು ಗಂಟೆಯಲ್ಲಿ ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಶಿಕ್ಷಣಾಧಿಕಾರಿ ಮಂಜುನಾಥ ಅವರು, ಬೇಡ ಸರ್ ನಾನು ಓದಿಲ್ಲ ಎಂದು ಹೇಳುತ್ತಿದ್ದ ಸಂತೆ ಬೆನ್ನೂರು ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿನಿಯ ಮನವೊಲಿಸಿ, ನಿನಗೆ ಗೊತ್ತಿರುವಷ್ಟು ಬರೆಯಮ್ಮ, ಕಡಿಮೆ ಅಂಕ ಬಂದರೆ ಮತ್ತೆ ಅವಕಾಶ ಇರುತ್ತದೆ ಎಂದು ಮನವರಿಕೆ ಮಾಡಿದ್ದಾರೆ. ಹೀಗೆ ಅಧಿಕಾರಿ ಜೊತೆಗಿದ್ದ ಶಿಕ್ಷಕರು ಹಾಗೂ ಪಾಲಕರು ಹೇಳಿದ ಮಾತು ಕೇಳಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಒಪ್ಪಿದ್ದಾಳೆ. ಒಟ್ಟಾರೆ ಅಧಿಕಾರಿಗಳ ಕಾಳಜಿಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಯಿಂದ ವಂಚಿತಳಾಗುತ್ತಿದ್ದ ವಿದ್ಯಾರ್ಥಿನಿ ಪರೀಕ್ಷೆ ಬರೆಯುವಂತಾಗಿದೆ.

ಇದನ್ನೂ ಓದಿ: SSLC Exam 2021: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದ ಲ್ಯಾಬ್​ನಲ್ಲಿ ಅಗ್ನಿ ಅವಗಢ; ಪರೀಕ್ಷೆ ಆರಂಭದ ಅರ್ಧ ಗಂಟೆಯಲ್ಲೇ ಏಕಾಏಕಿ ಬೆಂಕಿ

SSLC Exam 2021; ಪರೀಕ್ಷಾ ಕೇಂದ್ರ ಕನ್​ಫ್ಯೂಸ್​​ ಮಾಡ್ಕೊಂಡಿದ್ದ ವಿದ್ಯಾರ್ಥಿನಿಗೆ ಖಾಕಿ ಹೆಲ್ಪ್, ಮತ್ತೊಂದೆಡೆ ಕೊವಿಡ್ ಸೆಂಟರ್​​ನಲ್ಲೇ ವಿದ್ಯಾರ್ಥಿಗೆ ಪರೀಕ್ಷೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada