ಕೊಪ್ಪಳ, ಆಗಸ್ಟ್ 4: ಯಾದಗಿರಿ ಪಿಎಸ್ಐ ಪರಶುರಾಮ (PSI Parasurama) ನಿಗೂಢ ಸಾವಿನ ಒಂದೊಂದೇ ರಹಸ್ಯಗಳೇ ಬಯಲಾಗುತ್ತಿದೆ. ಒಂದು ಕಡೆ ಪಿಎಸ್ಐ ಸಾವಿಗೆ ಕಾಂಗ್ರೆಸ್ ಶಾಸಕರೇ ಕಾರಣ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಪ್ರಕರಣ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಫೀಲ್ಡ್‌ಗಿಳಿದಿದೆ. ಈ ಮಧ್ಯೆ ಇಂದು ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಪರಶುರಾಮನ ಸ್ನೇಹಿತರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್ ಜೊತೆ ಮಾತನಾಡಿದ ಪರಶುರಾಮನ ಸ್ನೇಹಿತರು ಪೋಸ್ಟ್ ಮಾರ್ಟಮ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಮಾರ್ಟಮ್ ಪ್ರಕ್ರಿಯೆ ಫಾಲೋ ಮಾಡಿಲ್ಲ ಎಂಬ ಸಂಗತಿ ತಿಳಿಸಿದ್ದಾರೆ.
ಸಾಂತ್ವಾನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.ಅಶೋಕ್, ಪರಶುರಾಮ ಕುಟುಂಬದ ಜೊತೆ ಮಾತನಾಡಿ ಮಾಹಿತಿ ಪಡೆದಿರುವೆ. ಈ ಸರ್ಕಾರ ಪೊಲೀಸರ ಜೊತೆ ನಡೆದುಕೊಳ್ತಿರುವ ರೀತಿ ನೋವಾಗಿದೆ. ದಲಿತ ಕುಟುಂಬದ ಹೆಣ್ಣು ಮಗಳು ನ್ಯಾಯಕ್ಕಾಗಿ ಅಂಗಲಾಚುವಂತಾಗಿದೆ. ನಾವು ಇನ್ನೂ ಯಾವ ಯುಗದಲ್ಲಿ ಇದ್ದೇವೆ ಅನ್ನೋದು ಗೊತ್ತಾಗುತ್ತಿಲ್ಲ. ನಮ್ಮ ಏರಿಯಾದಲ್ಲಿ ದಲಿತರು ಇರಬಾರದು ಅಂತಾ ಶಾಸಕರು ಹೇಳಿದ್ರಂತೆ. ಹೀಗಂತ ಕುಟುಂಬದವರು ನಮಗೆ ಮಾಹಿತಿ ನೀಡಿದ್ದಾರೆ. ಅಂಬೇಡ್ಕರ್ ಬರೆದ ಸಂವಿಧಾನದಡಿ ನಾವೆಲ್ಲಾ ಇರೋದು. ಇಂತಹ ನೀಚತನವನ್ನು ಯಾರೂ ಸಹಿಸಿಕೊಳ್ಳಲು ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಪಿಎಸ್ಐ ಪರಶುರಾಮ ಸಾವಿನ ಬಗ್ಗೆ ವರದಿಯೇ ಬಂದಿಲ್ಲ, ಆದರೆ ಗೃಹ ಸಚಿವರು ಹೃದಯಾಘಾತದಿಂದ ಸಾವಾಗಿದೆ ಅಂತಾರೆ. ಪ್ರಕರಣವನ್ನು ಸಿಬಿಐಗೆ ನೀಡಬೇಕು. ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಿ ಅಂತ ಯಾರು ಅರ್ಜಿ ನೀಡಿದ್ರು ಪೊಲೀಸ್ ಇಲಾಖೆ ಸತ್ತುಹೋಗಿದೆ ಅಂತ ಎನ್ನಿಸುತ್ತೆ. ಪ್ರಕರಣ ದಾಖಲಿಸಿಕೊಳ್ಳಲು 14 ಗಂಟೆ ತೆಗೆದುಕೊಂಡಿದ್ದಾರೆ, ಆದರೆ ಒಂದೇ ಗಂಟೆಯಲ್ಲಿ ಸಿಐಡಿ ತನಿಖೆಗೆ ನೀಡಿದ್ದಾರೆ. ಸರ್ಕಾರ ಎಲ್ಲಾ ಪ್ರಕರಣಗಳನ್ನು ಸಿಐಡಿ ಕೊಡ್ತಿದ್ದಾರೆ. ಕೊಟ್ಟಿರುವ ಯಾವುದಾದರೂ ಪ್ರಕರಣದಲ್ಲಿ ಸತ್ಯ ಹೊರಬಂದಿದೆಯಾ? ಪರಮೇಶ್ವರ್ ಸಿಎಂ ಜೊತೆ ಮಾತಾಡಿದ್ದೇನೆ ಅಂತ ಹೇಳಿದ್ರು ಆದರೆ ಈ ಪ್ರಕರಣದ ಪ್ರಭಾವ ಸಿಎಂವರೆಗೆ ಹೋಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಪರಶುರಾಮ ಸಾವು ಪ್ರಕರಣ: ಶಾಸಕ ಸ್ಥಾನದಿಂದ ಚೆನ್ನಾರೆಡ್ಡಿಯನ್ನು ವಜಾಗೊಳಿಸುವಂತೆ ಸ್ಪೀಕರ್ಗೆ ಪತ್ರ
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಎಂ ಹೆಸರು ಕೇಳಿ ಬಂದಿದೆ. ನಾವು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ 2 ವರ್ಷ ಮಾಡಿದ್ದೆವು. ಈ ಮನೆಹಾಳರು ಬಂದ ಮೇಲೆ ಅದನ್ನು 1 ವರ್ಷಕ್ಕೆ ಇಳಿಸಿದ್ದರು. ಈಗ 2 ವರ್ಷ ವರ್ಗಾವಣೆ ಮಾಡಲ್ಲಾ ಅಂತಾ ಕಾನೂನು ಮಾಡಿದ್ದೀರಿ. ಆದರೆ ಪರಶುರಾಮರನ್ನು ಹೇಗೆ ವರ್ಗಾವಣೆ ಮಾಡಿದ್ರಿ. ಸಹಿ ಮಾಡಿದ ಅಧಿಕಾರಿ ಯಾರು? ಈ ಬಗ್ಗೆ ಕ್ರಮಜರುಗಿಸಬೇಕು ಎಂದಿದ್ದಾರೆ.
ಪಿಎಸ್ಐ ಪರಶುರಾಮ ಸ್ನೇಹಿತ ಯರಿಸ್ವಾಮಿ ಪ್ರತಿಕ್ರಿಯಿಸಿದ್ದು, ಪರಶುರಾಮ ಹಣ ಹೊಂದಿಸಲು ಪತ್ನಿ ಬಂಗಾರ ಅಡವಿಟ್ಟಿದ್ದ. ಬ್ಯಾಂಕ್ನಿಂದ ಪರ್ಸನಲ್ ಲೋನ್ ಕೂಡ ತಗೆದುಕೊಂಡಿದ್ದ. ಶಾಸಕರಿಗೆ ನೀಡಲು ಹಣ ಹೊಂದಿಸುತ್ತಿದ್ದ. ಆದರೆ ಅವರು ಕೇಳಿದಷ್ಟು ಕೊಡಲು ಆಗಲ್ಲ ಅಂತ ಹೇಳಿದ್ದ. ಪೊಲೀಸ್ ಇಲಾಖೆಯಲ್ಲಿ ಇದೆಲ್ಲಾ ಸಹಜ ಅಂತ ಕೂಡ ಹೇಳಿದ್ದ. ವರ್ಗಾವಣೆ ಆದ ದಿನ ಕೂಡ ಕರೆ ಮಾಡಿ ತನ್ನ ನೋವು ತೋಡಿಕೊಂಡಿದ್ದ. ಆತ ನನ್ನ ಜೊತೆ ಮಾತನಾಡಿರುವ ಆಡಿಯೋ ಇದೆ. ಅವುಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ಅಶೋಕ್ ಬಳಿ ಮೃತ PSI ಪರಶುರಾಮ ಸಹೋದರ ಹನುಮಂತಪ್ಪ ತೋಡಿಕೊಂಡಿದ್ದು, ಯಾದಗಿರಿ ಕಾಂಗ್ರೆಸ್ ಶಾಸಕ ಹಾಗೂ ಶಾಸಕರ ಪುತ್ರ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ. ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ನನ್ನ ಸಹೋದರನಿಗೆ ತಮ್ಮ ಕ್ಷೇತ್ರದಲ್ಲಿ ಎಸ್ಸಿಯವರು ಬೇಡ ಅಂದರು. ಪರಶುರಾಮ ಜಾತಿ ಮೀರಿ ಬೆಳೆದಿದ್ದ. ಕಾಂಗ್ರೆಸ್ ಶಾಸಕ ಒತ್ತಡ ಹಿನ್ನೆಲೆ ಮೊದಲಿಗೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು. ಪರಶುರಾಮ ಪತ್ನಿಯ ಮುಖ ನೋಡಿಯೂ ಎಫ್ಐಆರ್ ದಾಖಲಿಸಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.