
ಬೆಂಗಳೂರು, ಸೆಪ್ಟೆಂಬರ್ 5: ಗೌರಿ ಗಣೇಶ ಹಬ್ಬ, ದಸರಾ ಹಾಗೂ ದೀಪಾವಳಿ ಹಬ್ಬಗಳು ಮತ್ತು ಸಾಲು ರಜೆಗಳನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಕರ್ನಾಟಕದಾದ್ಯಂತ 22 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ವಿಶೇಷ ರೈಲುಗಳ ವೇಳಾಪಟ್ಟಿ, ಪ್ರಯಾಣದ ಸಮಯ ಇತ್ಯಾದಿ ವಿವರಗಳನ್ನೂ ಹಂಚಿಕೊಂಡಿದೆ.
ಸೆಪ್ಟೆಂಬರ್ 5 ರಿಂದ 7 ರವರೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರ ನಡೆಸಲಿದೆ. ಬೆಂಗಳೂರು ಕಲಬುರಗಿ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:40 ಕ್ಕೆ ಕಲಬುರಗಿಗೆ ತಲುಪಲಿದೆ. ಅದೇ ರೀತಿ, ಸೆಪ್ಟೆಂಬರ್ 6 ರಿಂದ 8 ರವರೆಗೆ, ಕಲಬುರಗಿಯಿಂದ ಹಿಂತಿರುಗುವ ರೈಲು ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 8:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಪ್ರಯಾಣಿಕರ ವಿಶೇಷ ಗಮನಕ್ಕೆ; ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಇಪ್ಪತ್ತೆರಡು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಅವುಗಳು ಈ ಕೆಳಗಿನಂತಿವೆ ಎಂದು ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 30 ಮತ್ತು ನವೆಂಬರ್ 2 ರಂದು ಮೈಸೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ವಿಜಯಪುರದಿಂದ ಮೈಸೂರಿಗೆ ಹಿಂದಿರುಗುವ ರೈಲು ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಸಂಚರಿಸಲಿದೆ. ಜತೆಗೆ, ಅಕ್ಟೋಬರ್ 30 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ನವೆಂಬರ್ 1, ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಹಿಂದಿರುಗಲಿವೆ.
ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 9 ಮತ್ತು 12 ರಂದು ಎಸ್ಎಂವಿಟಿ ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲುಗಳು ಇರಲಿವೆ. ಅಕ್ಟೋಬರ್ 10 ಮತ್ತು 13 ರಂದು ರೈಲುಗಳು ಹಿಂತಿರುಗಲಿವೆ. ಅಕ್ಟೋಬರ್ 9 ಮತ್ತು 12 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿದ್ದು, ಅಕ್ಟೋಬರ್ 10 ಮತ್ತು 13 ರಂದು ಹಿಂದಿರುಗಲಿವೆ. ಇದಲ್ಲದೆ, ಅಕ್ಟೋಬರ್ 9 ರಿಂದ 13 ರವರೆಗೆ ಮೈಸೂರು-ಕೆಎಸ್ಆರ್ ಬೆಂಗಳೂರು ಮಾರ್ಗದಲ್ಲಿ ಮತ್ತು ಅಕ್ಟೋಬರ್ 10 ರಿಂದ 14 ರವರೆಗೆ ಕೆಎಸ್ಆರ್ ಬೆಂಗಳೂರು-ಮೈಸೂರು ವಿಶೇಷ ರೈಲುಗಳು ಚಲಿಸಲಿವೆ.
ಇದನ್ನೂ ಓದಿ: ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಸೇಫ್ಟಿ ಹಾರ್ನೆಸ್ ಬೆಲ್ಟ್ ಕಡ್ಡಾಯಗೊಳಿಸಲು ಮುಂದಾದ ಕರ್ನಾಟಕ ಸರ್ಕಾರ
ಇದೇ ಅವಧಿಯಲ್ಲಿ ಚಾಮರಾಜನಗರ ಮತ್ತು ಮೈಸೂರು ನಡುವೆ ಹೆಚ್ಚುವರಿ ಸೇವೆಗಳು ಲಭ್ಯವಿರುತ್ತವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Thu, 5 September 24