ವಾಣಿವಿಲಾಸ ಸಾಗರಕ್ಕೆ ಭದ್ರ ಡ್ಯಾಂನಿಂದ ನೀರು ಹರಿಸುವುದನ್ನು ತಕ್ಷಣಕ್ಕೆ ನಿಲ್ಲಿಸಿ: ರೈತ ಮುಖಂಡ ತೇಜಸ್ವಿ ಪಟೇಲ್ ಆಗ್ರಹ
ಕಾಡಾ ಸಮಿತಿ ಪರವಾಣಿಗೆ ಇಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದು ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವುದು ಸೂಕ್ತವಲ್ಲ. ಈ ಬಗ್ಗೆ ಕಾಡಾ ಅಧ್ಯಕ್ಷರು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದು, ಇರುವ ಸ್ಥಿತಿಯನ್ನು ತಿಳಿಸಿದ್ದಾರೆ ಎಂದು ದಾವಣಗೆರೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ತಿಳಿಸಿದ್ದಾರೆ.
ದಾವಣಗೆರೆ: ವಾಣಿವಿಲಾಸ ಸಾಗರಕ್ಕೆ ಶಿವಮೊಗ್ಗದ ಭದ್ರ ಡ್ಯಾಂನಿಂದ ನೀರು ಹರಿಸುವುದನ್ನು ತಕ್ಷಣಕ್ಕೆ ನಿಲ್ಲಿಸುವಂತೆ ದಾವಣಗೆರೆ ಜಿಲ್ಲೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ಆಗ್ರಹಿಸಿದ್ದಾರೆ. ಭದ್ರಾ ಡ್ಯಾಂಗೆ ಒಳ ಹರಿವು ಹೆಚ್ಚಾದ ಬಳಿಕ ಭದ್ರಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಬಹುದು. ಅದನ್ನು ಬಿಟ್ಟು ಈಗಲೇ ನೀರು ಹರಿಸುವುದು ಸರಿಯಲ್ಲ. ಕಾಡಾ ಸಮಿತಿ ಅನುಮತಿ ಇಲ್ಲದೇ ಭದ್ರಾ ಡ್ಯಾಂನಿಂದ ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವುದು ಖಂಡನೀಯ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರೀಕ್ಷಿತ ಪ್ರಮಾಣದಲ್ಲಿ ಇನ್ನು ಕೂಡ ಮಳೆ ಆಗಿಲ್ಲ. ಹೀಗಾಗಿ ಭದ್ರಾ ಡ್ಯಾಂನಲ್ಲಿ ನೀರು ಸಹ ಸಂಗ್ರಹವಾಗಿಲ್ಲ. ಈಗಲೇ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆ ಆಗಲಿದೆ. ಹೀಗೆ ಕಾಡಾ ಸಮಿತಿ ಪರವಾಣಿಗೆ ಇಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದು ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವುದು ಸೂಕ್ತವಲ್ಲ. ಈ ಬಗ್ಗೆ ಕಾಡಾ ಅಧ್ಯಕ್ಷರು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದು, ಇರುವ ಸ್ಥಿತಿಯನ್ನು ತಿಳಿಸಿದ್ದಾರೆ ಎಂದು ದಾವಣಗೆರೆಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟ ರಾಜ್ಯದ ಹಾಗೂ ನೆರೆಯ ಆಂಧ್ರ ಪ್ರದೇಶದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಅವಧಿಗೆ ಮುನ್ನವೇ ನೀರು ಬರುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ತುಂಗಾಭಧ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ. ಆದರೆ ಜಲಾಶಯಕ್ಕೆ ನೀರು ಬರುತ್ತಿದ್ದರು, ಕಾಲುವೆಗಳಿಗೆ ಇದುವರೆಗೆ ನೀರು ಬಿಡುತ್ತಿಲ್ಲ. ಜತೆಗೆ ಕಾಲುವೆಗಳಿಗೆ ನೀರು ಬಿಡುವ ಸಂಬಂಧ ಇದುವರೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ಇದು ಸಹಜವಾಗಿಯೇ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ವ್ಯಾಪ್ತಿಯ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಈ ನಾಲ್ಕು ಜಿಲ್ಲೆ ಸೇರಿ ಆಂಧ್ರದ ಕೆಲ ಜಿಲ್ಲೆಗಳಿಗೂ ತುಂಗಭದ್ರಾ ಜಲಾಶಯ ಪ್ರಮುಖವಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯ ಕಾರಣದಿಂದ ತುಂಗಭದ್ರಾ ಜಲಾಶಯ ಮೈದುಂಬಿಕೊಳ್ಳುತ್ತಿದೆ. ಕಳೆದ ವರ್ಷ ಈ ವೇಳೆಯಲ್ಲಿ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೆ ಈಗ 35 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಜತೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಹೀಗಾಗಿ ಈ ವರ್ಷ ತುಂಗಭದ್ರಾ ಜಲಾಶಯ ಕಳೆದ ವರ್ಷಕ್ಕಿಂತಲೂ ಮೊದಲೇ ಭರ್ತಿಯಾಗುವ ಸಾಧ್ಯತೆ ಇದೆ. ಆದರೆ ಟಿಬಿ ಬೋರ್ಡ್ನ ನೀರಾವರಿ ಸಲಹಾ ಸಮಿತಿ ಸಭೆ ಇದುವರೆಗೆ ನಡೆದಿಲ್ಲ. ಹೀಗಾಗಿ ಕೂಡಲೇ ಸಭೆ ನಡೆಸಿ ಕಾಲುವೆಗಳಿಗೆ ನೀರು ಬಿಡಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರೋಷತ್ತಮ್ ಗೌಡ ಒತ್ತಾಯಿಸುತ್ತಿದ್ದಾರೆ.
ಕಾಲುವೆಗಳಿಗೆ ನೀರು ಬಿಟ್ಟರೆ ರೈತರು ಭತ್ತ ನಾಟಿ ಮಾಡಲು ಸಸಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಭತ್ತ ನಾಟಿ ಸಸಿಯನ್ನು ಖರೀದಿ ಮಾಡಿ ಭತ್ತ ನಾಟಿ ಮಾಡಬೇಕಾಗುತ್ತದೆ. ಜಲಾಶಯದಲ್ಲಿ ನೀರು ಇರುವಾಗ ಕಾಲುವೆಗಳಿಗೆ ನೀರು ಹರಿಸಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಏಕೆಂದರೆ ಜಲಾಶಯ ಭರ್ತಿಯಾದಾಗ ವ್ಯರ್ಥವಾಗಿ ಪ್ರತಿ ವರ್ಷ ನೂರಾರು ಟಿಎಂಸಿ ನೀರು ನದಿಗೆ ಹರಿದು ಆಂಧ್ರಕ್ಕೆ ಹೋಗುತ್ತದೆ. ಹೀಗಾಗಿ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Sand Mafia: ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟ; ಕಾಲುವೆಗಳಿಗೆ ನೀರು ಬಿಡಲು ಮೂರು ಜಿಲ್ಲೆಗಳ ರೈತರಿಂದ ಒತ್ತಾಯ