ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿದ ನೀರಿನ ಮಟ್ಟ; ಕಾಲುವೆಗಳಿಗೆ ನೀರು ಬಿಡಲು ಮೂರು ಜಿಲ್ಲೆಗಳ ರೈತರಿಂದ ಒತ್ತಾಯ
ಕಳೆದ ವರ್ಷ ಈ ವೇಳೆಯಲ್ಲಿ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೆ ಈಗ 35 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಜತೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಹೀಗಾಗಿ ಈ ವರ್ಷ ತುಂಗಭದ್ರಾ ಜಲಾಶಯ ಕಳೆದ ವರ್ಷಕ್ಕಿಂತಲೂ ಮೊದಲೇ ಭರ್ತಿಯಾಗುವ ಸಾಧ್ಯತೆ ಇದೆ. ಆದರೆ ಟಿಬಿ ಬೋರ್ಡ್ನ ನೀರಾವರಿ ಸಲಹಾ ಸಮಿತಿ ಸಭೆ ಇದುವರೆಗೆ ನಡೆದಿಲ್ಲ.
ಬಳ್ಳಾರಿ: ರಾಜ್ಯದ ಹಾಗೂ ನೆರೆಯ ಆಂಧ್ರ ಪ್ರದೇಶದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಅವಧಿಗೆ ಮುನ್ನವೇ ನೀರು ಬರುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ತುಂಗಾಭಧ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿದೆ. ಆದರೆ ಜಲಾಶಯಕ್ಕೆ ನೀರು ಬರುತ್ತಿದ್ದರು, ಕಾಲುವೆಗಳಿಗೆ ಇದುವರೆಗೆ ನೀರು ಬಿಡುತ್ತಿಲ್ಲ. ಜತೆಗೆ ಕಾಲುವೆಗಳಿಗೆ ನೀರು ಬಿಡುವ ಸಂಬಂಧ ಇದುವರೆಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆದಿಲ್ಲ. ಇದು ಸಹಜವಾಗಿಯೇ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯ ವ್ಯಾಪ್ತಿಯ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಈ ನಾಲ್ಕು ಜಿಲ್ಲೆ ಸೇರಿ ಆಂಧ್ರದ ಕೆಲ ಜಿಲ್ಲೆಗಳಿಗೂ ತುಂಗಭದ್ರಾ ಜಲಾಶಯ ಪ್ರಮುಖವಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯ ಕಾರಣದಿಂದ ತುಂಗಭದ್ರಾ ಜಲಾಶಯ ಮೈದುಂಬಿಕೊಳ್ಳುತ್ತಿದೆ. ಕಳೆದ ವರ್ಷ ಈ ವೇಳೆಯಲ್ಲಿ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಆದರೆ ಈಗ 35 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಜತೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯೂ ಆಗುತ್ತಿದೆ. ಹೀಗಾಗಿ ಈ ವರ್ಷ ತುಂಗಭದ್ರಾ ಜಲಾಶಯ ಕಳೆದ ವರ್ಷಕ್ಕಿಂತಲೂ ಮೊದಲೇ ಭರ್ತಿಯಾಗುವ ಸಾಧ್ಯತೆ ಇದೆ. ಆದರೆ ಟಿಬಿ ಬೋರ್ಡ್ನ ನೀರಾವರಿ ಸಲಹಾ ಸಮಿತಿ ಸಭೆ ಇದುವರೆಗೆ ನಡೆದಿಲ್ಲ. ಹೀಗಾಗಿ ಕೂಡಲೇ ಸಭೆ ನಡೆಸಿ ಕಾಲುವೆಗಳಿಗೆ ನೀರು ಬಿಡಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರೋಷತ್ತಮ್ ಗೌಡ ಒತ್ತಾಯಿಸುತ್ತಿದ್ದಾರೆ.
ಕಾಲುವೆಗಳಿಗೆ ನೀರು ಬಿಟ್ಟರೆ ರೈತರು ಭತ್ತ ನಾಟಿ ಮಾಡಲು ಸಸಿಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಭತ್ತ ನಾಟಿ ಸಸಿಯನ್ನು ಖರೀದಿ ಮಾಡಿ ಭತ್ತ ನಾಟಿ ಮಾಡಬೇಕಾಗುತ್ತದೆ. ಜಲಾಶಯದಲ್ಲಿ ನೀರು ಇರುವಾಗ ಕಾಲುವೆಗಳಿಗೆ ನೀರು ಹರಿಸಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಏಕೆಂದರೆ ಜಲಾಶಯ ಭರ್ತಿಯಾದಾಗ ವ್ಯರ್ಥವಾಗಿ ಪ್ರತಿ ವರ್ಷ ನೂರಾರು ಟಿಎಂಸಿ ನೀರು ನದಿಗೆ ಹರಿದು ಆಂಧ್ರಕ್ಕೆ ಹೋಗುತ್ತದೆ. ಹೀಗಾಗಿ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆ ಇದುವರೆಗೆ ಕರೆಯುತ್ತಿಲ್ಲ. ಜತೆಗೆ ಮೂರು ಜಿಲ್ಲೆಗಳ ಜನ ಪ್ರತಿನಿಧಿಗಳು ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನೂ ಕಾಲುವೆಗಳಿಗೆ ನೀರು ಬಿಡುವ ಸಂದರ್ಭದಲ್ಲಿ ಕಾಲುವೆಗಳ ದುರಸ್ಥಿ ಕಾಮಗಾರಿ ನಡೆಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಲುವೆಗಳಿಗೆ ನೀರು ಬಿಡುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆ ಕರೆಯದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿವೆ.
ಒಂದು ಕಡೆ ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿರುವುದು ರೈತರ ಸಂತಸಕ್ಕೆ ಕಾರಣವಾದರೆ, ಮತ್ತೊಂದೆಡೆ ಕಾಲುವೆಗಳಿಗೆ ನೀರು ಬಿಡುವ ಸಂದರ್ಭದಲ್ಲಿ ಕಾಲುವೆಗಳ ದುರಸ್ತಿ ಕಾಮಗಾರಿ ನಡೆಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:
ತುಂಗಭದ್ರೆಯಲ್ಲಿ ಶುರುವಾಗಲಿ ಗಂಗಾ ಆರತಿ ಮಾದರಿಯ ಉತ್ಸವ; ನದಿಯ ಸ್ವಚ್ಛತೆಗೆ ಮುಂದಾದ ಹರಿಹರದ ಜನತೆ
Karnataka Dams Water Level: ಮುಂಗಾರು ಒಂಚೂರು ಕ್ಷೀಣ, ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ