ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ ಖರೀದಿ: ಬಾಣಂತಿಯರ ಸಾವಿಗೆ ಇದೇ ಕಾರಣ, ಜೋಶಿ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2024 | 7:15 PM

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಕರ್ನಾಟಕ ಸರ್ಕಾರದ ವಿರುದ್ಧ ಆರ್ಥಿಕ ಮತ್ತು ಬೌದ್ಧಿಕ ದಿವಾಳಿಯ ಆರೋಪ ಮಾಡಿದ್ದಾರೆ. ಗುಣಮಟ್ಟದ ಔಷಧಿಗಳ ಕೊರತೆ ಮತ್ತು ಕಳಪೆ ಗುಣಮಟ್ಟದ ಔಷಧಿ ಪೂರೈಕೆಯಿಂದ ಬಳ್ಳಾರಿಯಲ್ಲಿ ಹಲವು ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದಿದ್ದಾರೆ.

ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ ಖರೀದಿ: ಬಾಣಂತಿಯರ ಸಾವಿಗೆ ಇದೇ ಕಾರಣ, ಜೋಶಿ ಆರೋಪ
ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ ಖರೀದಿ: ಬಾಣಂತಿಯರ ಸಾವಿಗೆ ಇದೇ ಕಾರಣ, ಜೋಶಿ ಆರೋಪ
Follow us on

ಹುಬ್ಬಳ್ಳಿ, ಡಿಸೆಂಬರ್​ 08: ರಾಜ್ಯ ಸರ್ಕಾರ ಆರ್ಥಿಕ, ಬೌದ್ಧಿಕವಾಗಿ ದಿವಾಳಿಯಾಗಿದೆ. ಸರ್ಕಾರದ ಬೊಕ್ಕಸ ಬರಿದಾಗಿದೆ. ಗುಣಮಟ್ಟದ ಔಷಧಿ ಖರೀದಿ ಮಾಡಲೂ ದುಡ್ಡಿಲ್ಲ. ಕಳಪೆ ಔಷಧಿ ಪೂರೈಕೆ ಕಂಪನಿಗಳಿಂದ ಖರೀದಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯೇ ಲಭ್ಯವಿಲ್ಲ. ವೈದ್ಯರು ಹೊರಗಡೆ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ರಾಜ್ಯವನ್ನು ಇಂಥ ಅವಸ್ಥೆಗೆ ತಂದಿಟ್ಟಿದೆ ಈ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಔಷಧಿ ಖರೀದಿಸಲು ಹಣವಿಲ್ಲ

ಗುಣಮಟ್ಟದ ಕಂಪನಿಗಳಿಂದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸಿಕ್ಕ ಸಿಕ್ಕ ಕಂಪನಿಗಳಿಂದ ಔಷಧಿ ಖರೀದಿಸುತ್ತಿದ್ದಾರೆ. ಅದರ ಪರಿಣಾಮದಿಂದಲೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದೆ. ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಕೆಟ್ಟ ಮೇಲೆ ಬುದ್ಧಿ ಬಂದಂತಿದೆ. ಈಗ ಪ್ರಕರಣದ ಗಂಭೀರತೆ, ಸೂಕ್ಷ್ಮತೆ ಅರಿತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಕಳಪೆ ಗುಣಮಟ್ಟದ ಐವಿ ದ್ರಾವಣ ಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ: ಪ್ರಲ್ಹಾದ್​ ಜೋಶಿ

ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು. ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎಂದಿದ್ದಾರೆ. ಆದರೆ, ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ್ದನ್ನು ಪೂರೈಸಿದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದ ಮೇಲೆ ಗೂಬೆ ಸರಿಯಲ್ಲ

ರಾಜ್ಯದಲ್ಲಿ ಐವರು ಬಾಣಂತಿಯರ ಸಾವಿಗೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮಳೆಯಾದರೂ ಕೇಂದ್ರ, ಜನಸಂಖ್ಯೆ ಜಾಸ್ತಿ ಆದ್ರೂ ಕೇಂದ್ರ ಕಾರಣ ಎನ್ನುವಂತಿದೆ ಇವರ ಮನಸ್ಥಿತಿ. ಇದು ಸರಿಯಲ್ಲ ಎಂದು ಖಂಡಿಸಿದ್ದಾರೆ. 21ನೇ ಶತಮಾನದ ಮುಂದುವರಿದ ಮೆಡಿಕಲ್ ಸೈನ್ಸ್ ಯುಗದಲ್ಲಿ ಬಾಣಂತಿಯರ ಸಾವು ಎಂದರೆ ನಾಚಿಕೆಗೇಡಿನ ಸಂಗತಿ. ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.