ಶಾಸಕ ಗೋಪಾಲಯ್ಯಗೆ ಬೆದರಿಕೆ ಕೇಸ್: ಪದ್ಮರಾಜ್ಗೆ ಜಾಮೀನು, ಅಶೋಕ್ ವಿರುದ್ಧ ಕೇಳಿಬಂತು ಗಂಭೀರ ಆರೋಪ
ಮಾಜಿ ಕಾರ್ಪೊರೇಟರ್ ಪದ್ಮರಾಜ್ರಿಂದ ಶಾಸಕ ಕೆ.ಗೋಪಾಲಯ್ಯಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 39ನೇ ಎಸಿಎಂಎಂ ಕೋರ್ಟ್ನಿಂದ ಪದ್ಮರಾಜ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ ಆರ್ ಅಶೋಕ್ ವಿರುದ್ಧ ಪದ್ಮರಾಜ್ ಗಂಭೀರ ಆರೋಪ ಮಾಡಿದ್ದಾರೆ. ಮೇಯರ್ ಮಾಡುತ್ತಾರೆ ಎಂದು 2010ರಲ್ಲಿ ಆರ್ ಅಶೋಕ್ ಅವರಿಗೆ 1 ಕೋಟಿ ರೂ. ಹಣ ಕೊಟ್ಟಿದ್ದೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಬಂದ ಮೇಲೆ ಒಂದು ಕೋಟಿ ರೂ. ಹಣ ವಸೂಲಿ ಮಾಡಿಕೊಂಡೆ ಎಂದಿದ್ದಾರೆ.
ಬೆಂಗಳೂರು, ಫೆಬ್ರವರಿ 14: ಮಾಜಿ ಕಾರ್ಪೊರೇಟರ್ ಪದ್ಮರಾಜ್ರಿಂದ ಶಾಸಕ ಕೆ.ಗೋಪಾಲಯ್ಯ (K Gopalaiah) ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 39ನೇ ಎಸಿಎಂಎಂ ಕೋರ್ಟ್ನಿಂದ ಪದ್ಮರಾಜ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಕುರಿತಾಗಿ ಮಾತನಾಡಿರುವ ಪದ್ಮರಾಜ್, 2010 ರಲ್ಲಿ ಬಿಜೆಪಿ ನಾಯಕರ ಆರ್. ಅಶೋಕ್, ನನ್ನ ಮೇಯರ್ ಮಾಡುತ್ತೇನೆ ಅಂತ ಒಂದು ಕೋಟಿ ರೂ. ಹಣ ತೆಗೆದುಕೊಂಡರು. ಇವತ್ತಿಗೂ ಮೇಯರ್ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ ವಾಪಸ್ ತೆಗೆದುಕೊಂಡೆ ಎಂದಿದ್ದಾರೆ. ಕೆ.ಗೋಪಾಲಯ್ಯಗೆ ಜೀವ ಬೆದರಿಕೆ ಸತ್ಯಕ್ಕೆ ದೂರುವಾದ ಮಾತು. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನು ಅಲ್ಲ. ಮಂಜುನಾಥ್ ಮೇಲೆ ಆಣೆ. ನಾನು ಬೆದರಿಕೆ ಹಾಕಿಲ್ಲ. ದೇವರು ಅವರಿಗೆ ಒಳ್ಳೆದು ಮಾಡಲಿ. ಗುತ್ತಿಗೆ ಕೊಡಿಸುವ ವಿಚಾರಕ್ಕೆ 15 ಲಕ್ಷ ರೂ. ಹಣ ಕೊಟ್ಟಿದ್ದೆ. ಕೆಲಸ ಕೊಡಿಸಲಿಲ್ಲ ಅದಕ್ಕೆ ಕರೆ ಮಾಡಿದೆ ಆಗ ಒಂದಷ್ಟು ಮಾತುಗಳಾದವು ಎಂದು ಹೇಳಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಪದ್ಮರಾಜು ವಿಚಾರಣೆ
ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯಗೆ ಕರೆ ಮಾಡಿದ್ದ ಪದ್ಮರಾಜು, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್ ಠಾಣೆಗೆ ಕೆ. ಗೋಪಾಲಯ್ಯ ದೂರು ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ, ದೂರು ದಾಖಲು
ಇಂದು ಬೆಳಿಗ್ಗೆ ಪದ್ಮರಾಜ್ರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದರು. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ವಿಚಾರಣೆ ಮಾಡಿದ್ದು, ಪದ್ಮರಾಜ್ ಬಳಿಯಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು.
ಪದ್ಮರಾಜ್ನನ್ನು ಗಡಿಪಾರು ಮಾಡಬೇಕು: ಗೋಪಾಲಯ್ಯ ಮನವಿ
ಈ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಪ್ರಸ್ತಾಪ ಮಾಡಿದ್ದು, ಪದ್ಮರಾಜ್ ನನಗೆ ಜೀವ ಬೆದರಿಕೆ ಹಾಕಿದ್ದಾನೆ. ಹಿಂದೆ ಶಾಸಕ ಸುರೇಶ್ ಕುಮಾರ್ಗೂ ಪದ್ಮರಾಜ್ ಬೆದರಿಕೆ ಹಾಕಿದ್ದಾನೆ. ಪದ್ಮರಾಜ್ ಅಂತಹವರು ಇದ್ದರೆ ಸಮಾಜ ಘಾತುಕ ಶಕ್ತಿಗಳು ಹೆಚ್ಚುತ್ತವೆ. ಅವನ್ನು ಗಡಿಪಾರು ಮಾಡಬೇಕು ಎಂದು ಗೋಪಾಲಯ್ಯ ಮನವಿ ಮಾಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗೋಪಾಲಯ್ಯಗೆ ಜೀವ ಬೆದರಿಕೆ ಪ್ರಕರಣ: ಶಾಸಕರಿಗೆ 15 ಲಕ್ಷ ರೂ. ಕೊಟ್ಟಿದ್ದೆ, ಹೀಗಾಗಿ ಕರೆ ಮಾಡಿದ್ದೇನೆಂದ ಆರೋಪಿ
ಬೆಂಗಳೂರಿನಲ್ಲಿರುವ ಕ್ಲಬ್ಗಳನ್ನು ಮುಚ್ಚಿಸಬೇಕು. ಇಂತಹವರು ರಾತ್ರಿ ಕುಡಿದ ನಶೆಯಲ್ಲಿ ನಮ್ಮಂಥವರಿಗೆ ಕರೆ ಮಾಡುತ್ತಾರೆ. ನಾನು ಕೂಡ ನನ್ನ ಸ್ಥಾನಕ್ಕೆ ಗೌರವ ಕೊಟ್ಟು ಸುಮ್ಮನಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:56 pm, Wed, 14 February 24