ಧಾರವಾಡದಲ್ಲಿ ಅರಳಿದ ಥಂಡರ್ ಲಿಲ್ಲಿ; ಕಣ್ಣಿಗೆ ಮುದ ನೀಡುತ್ತಿರುವ ಕೆಂಪು ಬಣ್ಣದ ದುಂಡು ಹೂವುಗಳು
ಥಂಡರ್ ಲಿಲ್ಲಿ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿರದಿದ್ದರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿದೆ. ಇದಕ್ಕೆ ಕಾರಣ ಗುಡುಗಿನಿಂದ ಕೂಡಿದ ಮಳೆ.
ಧಾರವಾಡ: ಇದೀಗ ಎಲ್ಲ ಕಡೆಗೂ ಕೊರೊನಾದ್ದೇ ಮಾತು. ಕೊರೊನಾ ವೈರಸ್ನ ಚಿತ್ರಗಳನ್ನು ನೋಡಿ ನೋಡಿ ಸಾಕಾಗಿರುವ ಜನರಿಗೆ ಧಾರವಾಡದಲ್ಲಿನ ಹೂವೊಂದು ಖುಷಿ ನೀಡುತ್ತಿದೆ. ಕೊರೊನಾ ವೈರಸ್ ಥರಾನೇ ಇರುವ ಹೂವಿನ ಬಣ್ಣ ಮಾತ್ರ ಕೆಂಪು. ಅದುವರೆಗೂ ಯಾರಿಗೂ ಕಾಣದೇ ಭೂಮಿಯ ಒಡಲಲ್ಲಿ ಬಚ್ಚಿಕೊಂಡಿದ್ದ ಎಲೆ ಒಮ್ಮಿಂದೊಮ್ಮೆಲೇ ಹೊರ ಬಂದು ಇದೀಗ ಕೆಂಪು ಬಣ್ಣದ ಹೂವುಗಳು ಅಂಗಳವನ್ನೆಲ್ಲಾ ಸುಂದರವಾಗಿ ಮಾಡಿವೆ. ಆ ಸುಂದರ ಹೂವುಗಳ ಹೆಸರು ಥಂಡರ್ ಲಿಲ್ಲಿ.
ಥಂಡರ್ ಲಿಲ್ಲಿ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿರದಿದ್ದರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿದೆ. ಇದಕ್ಕೆ ಕಾರಣ ಗುಡುಗಿನಿಂದ ಕೂಡಿದ ಮಳೆ. ಅದುವರೆಗೂ ಭೂಮಿಯ ಒಳಭಾಗದಲ್ಲಿ ಬಚ್ಚಿಟ್ಟುಕೊಂಡಿದ್ದ ಗಡ್ಡೆಗಳು, ಗುಡುಗು ಆರಂಭವಾಗುತ್ತಲೇ ಒಂದೊಂದಾಗಿ ಹೊರಗೆ ಬರುತ್ತವೆ. ಮೊದಲಿಗೆ ಹೂವು ಹೊರಗೆ ಬಂದು ಅಚ್ಚರಿ ಮೂಡಿಸುತ್ತವೆ. ಬಳಿಕವಷ್ಟೇ ಹಚ್ಚಹಸುರಿನ ಎಲೆಗಳು ಕಾಣಿಸಿಕೊಳ್ಳುತ್ತವೆ.
ದಕ್ಷಿಣ ಆಫ್ರಿಕಾ ಮೂಲದ ಸಸ್ಯ: ಭಾರತಕ್ಕೆ ಬಂದಿದ್ದೇ ಅಚ್ಚರಿಯ ಸಂಗತಿ ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯ ಭಾರತಕ್ಕೆ ಬಂದಿದ್ದೇ ಬಲು ಅಚ್ಚರಿಯ ಸಂಗತಿ. ಬ್ರಿಟಿಷರು ತಮ್ಮ ಮನೆಯ ಮುಂದಿನ ಉದ್ಯಾನವನಗಳಲ್ಲಿ ಬೆಳೆಸಲು ಈ ಅಲಂಕಾರಿಕ ಸಸ್ಯವನ್ನು ತರಿಸಿಕೊಂಡಿದ್ದರು ಎನ್ನಲಾಗಿದೆ. ಅದು ಹಾಗೆಯೇ ಮನೆಯಿಂದ ಮನೆಗೆ ಸಾಗಿ ಇವತ್ತು ಧಾರವಾಡದ ತುಂಬೆಲ್ಲಾ ತನ್ನ ಬೇರನ್ನು ಬಿಟ್ಟಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಳೆ ಆರಂಭವಾಗುವುದರಿಂದಾಗಿ ಈ ಹೂವು ಅವಾಗಲೇ ಬಿಡುತ್ತದೆ. ಇದೇ ಕಾರಣಕ್ಕೆ ಇದಕ್ಕೆ ಮೇ ಫ್ಲವರ್ ಅಂತಾನೂ ಕರೆಯುತ್ತಾರೆ. ಆದರೆ ವಿಚಿತ್ರವೆಂದರೆ ಮೊದಲ ಮಳೆ ಬಿದ್ದ ಮೇಲೆ, ಗುಡುಗಿನ ಶಬ್ದ ಕೇಳುತ್ತಲೇ ಇದು ಹೊರಗೆ ಬರುತ್ತದೆ. ಇದಕ್ಕೆ ಕಾರಣ ಈ ಸಸ್ಯ ಗುಡುಗು ಸಂವೇದಿಯಾಗಿರುವುದು. ಅದಾಗಿ ಕೊಂಚ ಮಳೆ ಬೀಳುತ್ತಿದ್ದಂತೆಯೇ ಚೆಂಡಿನಾಕಾರದ ಕೆಂಪು ಬಣ್ಣದ ಹೂವುಗಳನ್ನು ಧರೆಗೆ ಸಮರ್ಪಿಸುತ್ತದೆ.
ಒಂದು ವಾರದವರೆಗೆ ಇರುವ ಹೂವು ಸುಮಾರು ಒಂದು ವಾರದವರೆಗೆ ಇರುವ ಹೂವು ಬಳಿಕ ಒಣಗಿ ಹೋಗುತ್ತದೆ. ಆದರೆ ವನದ ತುಂಬೆಲ್ಲಾ ಹಸಿರೆಲೆಯನ್ನು ಉಳಿಸಿಕೊಂಡ ಗಡ್ಡೆ ಮಾತ್ರ ಡಿಸೆಂಬರ್ ವರೆಗೂ ಬದುಕಿರುತ್ತದೆ. ಬಳಿಕ ಈ ಸಸ್ಯ ಒಣಗಿ ಹೋಗುತ್ತದೆ. ಅಚ್ಚರಿಯ ವಿಷಯವೆಂದರೆ ಮೇಲ್ನೋಟಕ್ಕೆ ಒಣಗಿ ಹೋದಂತೆ ಕಾಣುವ ಸಸ್ಯ, ಭೂಮಿಯ ಒಳಗಡೆ ಗಡ್ಡೆಯ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ. ಮತ್ತೆ ಮುಂದಿನ ಮಳೆಗಾಲ ಬಂದು, ಗುಡುಗಿನ ಶಬ್ದ ಕೇಳುತ್ತಲೇ ಮತ್ತೆ ತನ್ನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿ ಬೀಗುತ್ತದೆ.
ಕೆಂಪು ಕೊರೊನಾ ನಮ್ಮ ಮನೆಯ ಅಂಗಳದಲ್ಲಿ ಈ ಹೂವು ಕಳೆದ ಮೂವತ್ತು ವರ್ಷಗಳಿಂದಲೂ ಇವೆ. ಮೊದಲ ಬಾರಿ ಸಿಡಿಲು ಬಂದ ಕೂಡಲೇ ಹೊರಗಡೆ ಬರುವ ಕೆಂಪು ಬಣ್ಣದ ಹೂವುಗಳು ನಮ್ಮನೆಯ ಅಂಗಳದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇವುಗಳನ್ನು ನೋಡಲು, ಫೋಟೋ ತೆಗೆದುಕೊಳ್ಳಲು ಜನರು ಬರುವುದು ನಮಗೆ ಖುಷಿ ನೀಡುತ್ತದೆ. ಕಳೆದ ವರ್ಷದಿಂದ ಈ ಹೂವನ್ನು ನೋಡಲು ಬರುವ ಜನರು ಇದನ್ನು ಕೆಂಪು ಕೊರೊನಾ ಅಂತಾ ತಮಾಷೆ ಮಾಡುತ್ತಿದ್ದಾರೆ ಎಂದು ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ಶ್ರೀಧರ ಕುಲಕರ್ಣಿ ತಿಳಿಸಿದರು.
ಇದನ್ನೂ ಓದಿ
ಹಾವೇರಿಯಲ್ಲಿ ಹೆತ್ತವ್ವಳ ನೆನಪಿಗೊಂದು ದೇವಾಲಯ; ತಾಯಿಯ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಮಕ್ಕಳು
Bigg Boss Kannada: ಬಿಗ್ ಬಾಸ್ ರದ್ದಾಗಿದ್ದು ಯಾಕೆ? ಟ್ರೋಲ್ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ
(Thunder Lily Flowers is looking beautiful and appealing in Dharwad)