ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಕಡಿವಾಣಕ್ಕೆ ಖಾದರ್ ದಿಟ್ಟ ಹೆಜ್ಜೆ: ಇಲ್ಲಿದೆ ಸಭೆ ಮುಖ್ಯಾಂಶಗಳು

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ವಿಪರೀತ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದ್ದು, ಸಂಬಂಧ ಕೆಲ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (ಫನಾ) ಪದಾಧಿಕಾರಿಗಳೊಂದಿಗೆ ಸಚಿವ ಯುಟಿ ಖಾದರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದ್ದು, ಮಹತ್ವದ ಚರ್ಚೆಗಳುನ್ನ ಮಾಡಿದ್ದಾರೆ. ಇನ್ನು ಸಭೆಯಲ್ಲಿ ಏನೆಲ್ಲಾ ಆಯ್ತು ಎನ್ನುವ ಡಿಟೇಲ್ಸ್ ಇಲ್ಲಿದೆ.

ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಕಡಿವಾಣಕ್ಕೆ ಖಾದರ್ ದಿಟ್ಟ ಹೆಜ್ಜೆ: ಇಲ್ಲಿದೆ  ಸಭೆ ಮುಖ್ಯಾಂಶಗಳು
UT Khader
Edited By:

Updated on: Oct 22, 2026 | 8:32 PM

ಬೆಂಗಳೂರು, (ಅಕ್ಟೋಬರ್ 22): ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ಮಾತ್ರವಲ್ಲದೆ ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀಡಲಾಗದ ‘ಶೆಡ್ಯೂಲ್ಡ್ ಔಷಧ’ಗಳ ದರಪಟ್ಟಿಯನ್ನೂ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದ್ರೆ, ಇದಕ್ಕೆ ಖಾಸಗಿ ಆಸ್ಪತ್ರೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಸಂಬಂಧ ಇಂದು (ಅಕ್ಟೋಬರ್ 22) ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಅವರು ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದು, ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಚಿಕಿತ್ಸೆ ಜೊತೆಗೆ ಔಷಧ ದರಪಟ್ಟಿ ಬೋರ್ಡ್ ಹಾಕಬೇಕೆಂದು ತಾಕೀತು ಮಾಡಿದರು. ಆದ್ರೆ, ಇದಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (PHANA – ಫನಾ) 6 ತಿಂಗಳು ಸಮಯವಕಾಶ ಕೇಳಿದೆ.

6 ತಿಂಗಳು ಸಮಯ ಕೇಳಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟ

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (ಫನಾ) ಪದಾಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್, ಆಸ್ಪತ್ರೆಗಳ ಸುಲಿಗೆ ಪ್ರವೃತ್ತಿ ಮತ್ತು ಅತಿಯಾದ ದರ ವಸೂಲಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಎಲ್ಲಾ ದರವನ್ನೂ ಪ್ರದರ್ಶನ ಮಾಡಬೇಕೆಂದು ಖಡಕ್ ಆಗಿ ಹೇಳಿದ್ದಾರೆ. ಆದ್ರೆ, ಇದಕ್ಕೆ ಫನಾ ವಿರೋಧ ವ್ಯಕ್ತಪಡಿಸಿದ್ದು, ಏಕಾಏಕಿ ದರ ಪಟ್ಟಿ ಹಾಕುವಂತೆ ಹೇಳಿದ್ರೆ ಏನು ಮಾಡುವುದು. ಸದ್ಯಕ್ಕೆ ಆಗುವುದಿಲ್ಲ. ಕನಿಷ್ಠ ಆರು ತಿಂಗಳು ಸಮಯ ಬೇಕು ಎಂದಿವೆ. ಈ ಮನವಿಯನ್ನು ಖಾದರ್‌ ನೇರವಾಗಿ ನಿರಾಕರಿಸಿದ್ದಾರೆ. “ಆರು ತಿಂಗಳು ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಎಷ್ಟು ಸಮಯಾವಕಾಶ ನೀಡಬೇಕೆಂದು ತೀರ್ಮಾನಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಿಗೆ ಹೊಸ ರೂಲ್ಸ್​​: ಔಷಧ, MRP ಬೆಲೆ ನಮೂದು ಕಡ್ಡಾಯ; ನ.1ರಿಂದ ಜಾರಿ

ಸಭೆ ಬಳಿಕ ಯುಟಿ ಖಾದರ್ ಹೇಳಿದ್ದಿಷ್ಟು

ಏಕರೂಪದ ಚಿಕಿತ್ಸಾ ದರ ನಿಗದಿಗೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಏಕರೂಪದ ಚಿಕಿತ್ಸೆಗೆ ಏನಿದೆ ಮಾನದಂಡ ? ಯಾವ ಮಾನದಂಡದ ಮೇಲೆ ಚಿಕಿತ್ಸಾ ದರ ನಿಗದಿ ಮಾಡುತ್ತೀರಾ? ಔಷಧದ ಖರೀದಿ ಬೆಲೆ ಎಷ್ಟು? ರೋಗಿಗೆ ವಿಧಿಸಿದ ಬೆಲೆ ಎಷ್ಟು? ಎಂದು ಮಾಹಿತಿ ನೀಡಲು ಕಷ್ಟ. ಕೆಲವೊಮ್ಮೆ ಬಲ್ಕ್ ನಲ್ಲಿ ಔಷಧ ಖರೀದಿ ಮಾಡುತ್ತೇವೆ. ಇನ್ನು ಕೆಲವು ಸರಿ ಲಾಟ್ ಗಳಲ್ಲಿ ಬುಕ್ ಮಾಡುತ್ತೇವೆ. ಒಂದೊಂದಕ್ಕೆ ಒಂದೊಂದು ದರ ಅಳವಡಿಸಲು ಕಷ್ಟವಾಗುತ್ತೆ ಎಂದಿದೆ.

ಇನ್ನು ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್, ಬಿಲ್ ಕಡಿಮೆ ಮಾಡುವುದು ಸೇರಿದಂತೆ ಅನೇಕ ವಿಚಾರ ಚರ್ಚೆಯಾಗಿದ್ದು, ಸಭೆಯಲ್ಲಿ ಖಾಸಗಿ ಆಸ್ಪತ್ರೆಯವರು ಸಮಸ್ಯೆ ಹೇಳಿಕೊಂಡಿದ್ದಾರೆ. ಏನೇ ಆದರೂ ಜನರಿಗೆ ಮೋಸವಾಗಬಾರದು. ಜನರ ಸಹನೆ ಕೈಮೀರಿ ಹೋಗುವ ಪರಿಸ್ಥಿತಿ ಸೃಷ್ಟಿಯಾಗಬಾರದು. ಕ್ಯಾನ್ಸರ್ ಔಷಧ ದರ ಮಾತ್ರ ಯಾಕೆ ಕಡಿಮೆ ಮಾಡಿದ್ರಿ ಎಂದು ನ್ಯಾಯಾಲಯ ಕೇಳಿದೆ. ಹೀಗಾಗಿ ಕಿಡ್ನಿ, ಹೃದಯದ ಔಷಧ ದರ ಕಡಿಮೆ ಮಾಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ದರ ಪಟ್ಟಿ ಪ್ರದರ್ಶನ, ಏಕರೂಪ ಚಿಕಿತ್ಸಾ ದರದ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಸಮಯವಕಾಶ ಕೇಳಿವೆ.
ಏಕಾಏಕಿ ದರ ಪಟ್ಟಿ ಪ್ರದರ್ಶಿಸಲು ಸಾಧ್ಯವಿಲ್ಲ. ನಮಗೆ ಕಂಪ್ಯೂಟರ್ ಅಪ್ ಡೇಟ್ ಮಾಡಬೇಕು, ಇದಕ್ಕೆ ಕನಿಷ್ಠ 6 ತಿಂಗಳು ಬೇಕು ಎಂದಿವೆ. ನಾವು ಎಷ್ಟು ಸಮಯ ಕೊಡಬಹುದು ಎಂದು ಯೋಚಿಸಿ ತಿಳಿಸುತ್ತೇವೆ ಎಂದು ಹೇಳಿದರು.

ವಿಮೆ ಕಂಪನಿಗಳಗೂ ಮೂಗುದಾರ

ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ನಡುವಿನ ವ್ಯವಹಾರಗಳ ಬಗ್ಗೆಯೂ ಮಾತನಾಡಿದ ಖಾದರ್, ಒಂದು ಲಕ್ಷ ರೂಪಾಯಿ ಆಗುವ ಸರ್ಜರಿಗೆ ಮೂರು ಲಕ್ಷ ರೂಪಾಯಿ ಬಿಲ್ ಕಳುಹಿಸಲಾಗುತ್ತದೆ. ಅಂತಿಮವಾಗಿ 50 ಸಾವಿರ ರೂಪಾಯಿಯನ್ನು ರೋಗಿಯ ಕಡೆಯವರೇ ಭರಿಸಬೇಕೆಂದು ಹೇಳುತ್ತಾರೆ. ವಿಮಾ ಕಂಪನಿಗಳು ಎಲ್ಲೋ ದೂರದಲ್ಲಿ ಕುಳಿತು ಸರಿಯಾಗಿ ಸ್ಪಂದಿಸುವುದಿಲ್ಲ. ಈ ಅನ್ಯಾಯವನ್ನು ಯಾರಲ್ಲಿ ಕೇಳುವುದು? ಹಾಗಾಗಿ ಶೀಘ್ರದಲ್ಲೇ ಇನ್ಶೂರೆನ್ಸ್ ಕಂಪನಿಗಳ ಜೊತೆಗೂ ಪ್ರತ್ಯೇಕ ಸಭೆ ನಡೆಸಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು

ವಿದೇಶಿ ಫಂಡಿಂಗ್ ಆಕ್ಷೇಪ

ವೈದ್ಯಕೀಯ ಕ್ಷೇತ್ರದ ಕಾರ್ಪೊರೇಟೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ವೈದ್ಯರೇ ಆಸ್ಪತ್ರೆಗಳನ್ನು ಮುನ್ನಡೆಸಿದಾಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ವಿದೇಶಿ ಕಂಪನಿಗಳು ದೊಡ್ಡ ಮಟ್ಟದ ಹಣ ಹೂಡಿಕೆ (ಫಂಡಿಂಗ್) ಮಾಡಿ ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿವೆ. ವೈದ್ಯರಿಗೆ ಟಾರ್ಗೆಟ್ ನೀಡಿ ಚಿಕಿತ್ಸಾ ದರವನ್ನು ವಿಪರೀತ ಹೆಚ್ಚಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ದರಗಳು ಗಗನಕ್ಕೇರಿವೆ. ಇವರು ಆರೋಗ್ಯ ಸೇವೆಯನ್ನು ಕೇವಲ ಬ್ಯುಸಿನೆಸ್ ಮಾಡಿಕೊಂಡಿದ್ದಾರೆಯೇ? ಆಸ್ಪತ್ರೆಗಳಿಗೆ ನಷ್ಟವಾಗಬಾರದು ನಿಜ, ಆದರೆ ಅದೇ ನೆಪದಲ್ಲಿ ಜನರ ಜೇಬು ಲೂಟಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸಲು ಇವರಿಗೆ ಇರುವ ತೊಂದರೆಯಾದರೂ ಏನು? ಔಷಧಿಗಳಿಗೆ ದುಪ್ಪಟ್ಟು ದರ ವಸೂಲಿ ಮಾಡುವುದು, ಕಮಿಷನ್ ದಂಧೆ, ವೈದ್ಯರಿಗೆ ಟೂರ್ ಆಯೋಜಿಸುವುದು ಹಾಗೂ ಕೇವಲ ಅತಿಯಾದ ಲಾಭ ತರುವ ಔಷಧಿಗಳನ್ನು ಮಾತ್ರ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿಯೂ ಮಿತಿಮೀರಿದೆ. ಇಂತಹ ದಂಧೆಗಳಿಗೆಲ್ಲಾ ಸರ್ಕಾರ ಶೀಘ್ರವೇ ಕಡಿವಾಣ ಹಾಕಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Thu, 22 October 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us