ಶೇ. 40ರಷ್ಟು ಕಮಿಷನ್ ಸಾಕ್ಷ್ಯಾಧಾರ ಬಿಡುಗಡೆಯು ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮರಣಶಾಸನ ಸಾಬೀತುಪಡಿಸುತ್ತದೆ: ಡಿ. ಕೆಂಪಣ್ಣ
ಕೊವಿಡ್ -19 ಪರಿಸ್ಥಿತಿಯಿಂದಾಗಿ ಬೆಂಗಳೂರಿನಲ್ಲಿ ಯೋಜಿಸಿದ್ದ ಸಾರ್ವಜನಿಕ ರ್ಯಾಲಿಯನ್ನು ಮುಂದೂಡಬೇಕಾಗಿ ಬಂತು. ಮುಂದಿನ ವಾರ ರಾಜ್ಯದ ಗುತ್ತಿಗೆದಾರರು ಮುಖ್ಯಮಂತ್ರಿಗೆ ಪತ್ರ ಚಳುವಳಿ ಹಮ್ಮಿಕೊಳ್ಳಲಿದ್ದಾರೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದ್ದಾರೆ.
ತುಮಕೂರು: ಸಾರ್ವಜನಿಕ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಕಮಿಷನ್(40 Percent commission) ಪಡೆದಿರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರದ ಮರಣಶಾಸನವನ್ನು ಸಾಬೀತುಪಡಿಸುತ್ತದೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘ (Karnataka Contractors Association) ಎಚ್ಚರಿಕೆ ನೀಡಿದೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ (Kempanna) ಅವರು ಈ ಕುರಿತು ಮಾತನಾಡಿದ್ದು, ಈ ದಾಖಲೆಗಳಿಂದ ‘ಪಿಡಬ್ಲ್ಯುಡಿ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ನಾಲ್ವರು ಮುಖ್ಯ ಎಂಜಿನಿಯರ್‌ಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಭಾಗಿಯಾಗಿರುವ 25ಕ್ಕೂ ಹೆಚ್ಚು ಶಾಸಕರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊವಿಡ್ -19 ಪರಿಸ್ಥಿತಿಯಿಂದಾಗಿ ಬೆಂಗಳೂರಿನಲ್ಲಿ ಯೋಜಿಸಿದ್ದ ಸಾರ್ವಜನಿಕ ರ್ಯಾಲಿಯನ್ನು ಮುಂದೂಡಬೇಕಾಗಿ ಬಂತು. ಮುಂದಿನ ವಾರ ರಾಜ್ಯದ ಗುತ್ತಿಗೆದಾರರು ಮುಖ್ಯಮಂತ್ರಿಗೆ ಪತ್ರ ಚಳುವಳಿ ಹಮ್ಮಿಕೊಳ್ಳಲಿದ್ದಾರೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದ್ದಾರೆ.
ಇದೇ ವೇಳೆ ದಾಖಲೆಗಳನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕೆಂಪಣ್ಣ ಅವರು, ರಾಜ್ಯದಲ್ಲಿ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಮಾರ್ಚ್ 10ರ ನಂತರ ಸಮಯಾವಕಾಶ ದೊರೆತರೆ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಭೇಟಿಗಾಗಿ ಹಲವು ಸಲ ಮನವಿ ಸಲ್ಲಿಸಿದರೂ ಅವರು ಅನುಮತಿ ನೀಡಿಲ್ಲ. ನಮ್ಮ ಎಲ್ಲ ಸಮಸ್ಯೆಗಳ ಕಡೆ ಗಮನಹರಿಸಿ ಮಾತುಕತೆಗೆ ಕರೆಯಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ಸರಕಾರದಿಂದ ಬರಬೇಕಿರುವ 26 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದು ಮತ್ತು ಗುತ್ತಿಗೆಯ ಪ್ಯಾಕೇಜ್ ವ್ಯವಸ್ಥೆಯನ್ನು ರದ್ದುಗೊಳಿಸುವುದು ನಮ್ಮ ಬೇಡಿಕೆಯಾಗಿದೆ. ಕರ್ನಾಟಕದಲ್ಲಿ ಸುಮಾರು 17,000 ಗುತ್ತಿಗೆದಾರರಿದ್ದಾರೆ. ಆದರೆ ಹೊರಗಿನ 296 ಗುತ್ತಿಗೆದಾರರು ಪ್ಯಾಕೇಜ್ ಪದ್ಧತಿಯಡಿ ಶೇಕಡಾ 90 ರಷ್ಟು ಕೆಲಸವನ್ನು ಪಡೆಯುತ್ತಿದ್ದಾರೆ. ಇದು ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅಸಮಾಧಾನ ಹೊರಹಾಕಿದರು.
ತನಿಖೆಗೆ ಆದೇಶ
ಟೆಂಡರ್ ಪ್ರಕ್ರಿಯೆಯಲ್ಲಿ ಶೇ.40ರಷ್ಟು ಕಮಿಷನ್ ಬೇಡಿಕೆ ವಿಚಾರವಾಗಿ ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ವಿಷಯವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ.
ಈ ಕುರಿತು ಮಾತನಾಡಿದ ಬಸವರಾಜ್ ಬೊಮ್ಮಾಯಿ, ಪ್ರಧಾನಿಗೆ ಗುತ್ತಿಗೆದಾರರು ಬರೆದಿರುವ ಪತ್ರದಲ್ಲಿನ ಅಂಶಗಳ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಪತ್ರದಲ್ಲಿನ ಅಂಶಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಂದ ಮಾಹಿತಿ ಪಡೆದು ಅವುಗಳನ್ನು ಪರಿಶೀಲನೆ ನಡೆಸಬೇಕು. ಆ ಕುರಿತು ತನಿಖೆ ಮಾಡಿ ತಪ್ಪಿತಸ್ಥರು ಇದ್ದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರಿಗೆ ಕಾಂಗ್ರೆಸ್ ದೂರು
ರಾಜ್ಯದಲ್ಲಿ ಆಡಳಿತ ಹದಗೆಟ್ಟಿದೆ. ಸಂವಿಧಾನ, ಕಾನೂನು ಕುಸಿದುಬಿದ್ದಿದೆ. ಸರ್ಕಾರ ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವುದಾಗಿ ಪ್ರಧಾನಿಗೆ ಗುತ್ತಿಗೆದಾರರು ದೂರು ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗವು ರಾಜ್ಯಪಾಲರಿಗೆ ದೂರು ಸಲ್ಲಿಸಿದನ್ನು ಇಲ್ಲಿ ಸ್ಮರಿಸಬಹುದು.
ಕಮಿಷನ್ ದಂಧೆಯ ಬಗ್ಗೆ ಗುತ್ತಿಗೆದಾರರ ಆರೋಪ: ತನಿಖೆಗೆ ಮುಖ್ಯ ಕಾರ್ಯದರ್ಶಿ ಸೂಚನೆ