AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗಬಹುದು: ಕೆಎನ್ ರಾಜಣ್ಣ ಅಚ್ಚರಿಯ ಹೇಳಿಕೆ

ಕರ್ನಾಟಕ ಕಾಂಗ್ರೆಸ್​​ನಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆಎನ್​ ರಾಜಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೆರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್​​ ಮತ್ತೆ ವೈಟ್​​ವಾಶ್ ಆಗಬಹುದು ಎಂದಿದ್ದಾರೆ!

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್​​ ಮತ್ತೆ ವೈಟ್‌ವಾಶ್ ಆಗಬಹುದು: ಕೆಎನ್ ರಾಜಣ್ಣ ಅಚ್ಚರಿಯ ಹೇಳಿಕೆ
ಕೆಎನ್ ರಾಜಣ್ಣ
Jagadisha B
| Updated By: Ganapathi Sharma|

Updated on: Nov 13, 2025 | 9:56 AM

Share

ತುಮಕೂರು, ನವೆಂಬರ್ 13: ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ, ಶಾಸಕ ಕೆಎನ್ ರಾಜಣ್ಣ (KN Rajanna), ತುಮಕೂರು ಜಿಲ್ಲೆಯ ರಾಜಕಾರಣ ಮತ್ತು ಕಾಂಗ್ರೆಸ್ (Congress) ಪಕ್ಷದ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. 2004ರಲ್ಲಿ ತಾವು ದೊಡ್ಡೇರಿ ಹೋಬಳಿಯಿಂದ ಶಾಸಕರಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡ ರಾಜಣ್ಣ, ಆಗ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಗೌರವ ಸಿಗದ ಕಾರಣ ಜನತಾದಳಕ್ಕೆ ಸೇರಿ ಸ್ಪರ್ಧಿಸಿದ್ದೆ. ಆಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವೈಟ್​ವಾಶ್ ಆಗಿತ್ತು ಎಂದ ಅವರು, ಇದೇ ಪರಿಸ್ಥಿತಿ ಈಗ ಮತ್ತೆ ಬರುತ್ತದೆಯೋ ಏನೋ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದರಿಂದ ಹಿಂದೆ ಆದಂಥ ಪರಿಸ್ಥಿತಿ ಮತ್ತೆ ಬರುವುದಿಲ್ಲ. ಆದರೆ ಪರಿಸ್ಥಿತಿ ಏನಾಗುತ್ತದೆ ಎಂದು ಹೇಳಲಾಗದು ಎಂದು ನಗುತ್ತಾ ಹೇಳಿದರು. ಮುಂದುವರಿದು ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂದರು. ಮುಂದಿನ ತೀರ್ಮಾನಗಳನ್ನು ಜನರು ಮಾಡಬೇಕು, ತಾವು ಚುನಾವಣೆಗೆ ನಿಲ್ಲದಿರುವುದರಿಂದ ತಮಗೆ ಪ್ರಶ್ನೆ ಇಲ್ಲ ಎಂದರು.

ಕೆಎನ್ ರಾಜಣ್ಣ ಮಾತಿನ ವಿಡಿಯೋ

ಬಡವರ ಪರವಾಗಿ ಕೆಲಸ ಮಾಡುವ ಮಹತ್ವವನ್ನು ರಾಜಣ್ಣ ಒತ್ತಿ ಹೇಳಿದರು. ಜಾತಿ ರಹಿತವಾಗಿ, ಪಕ್ಷ ರಹಿತವಾಗಿ ಎಲ್ಲ ಬಡವರ ಪರ ಕೆಲಸ ಮಾಡಿದಾಗ ಅವರ ಆಶೀರ್ವಾದವೇ ದೇವರ ಆಶೀರ್ವಾದ ಮತ್ತು ಅವರ ಬೆಂಬಲವೇ ಆನೆ ಬಲ ಎಂದು ತಿಳಿಸಿದರು. ಜನರ ನಂಬಿಕೆ ಮತ್ತು ಆಶೀರ್ವಾದದಿಂದ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.

ನನಗೂ ಮಧುಗಿರಿ ತಾಲೂಕಿಗೂ ಏನು ಸಂಬಂಧ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. ನಾನು ತುಮಕೂರು ನಗರ ಅಥವಾ ತುಮಕೂರು ಗ್ರಾಮಾಂತರದಲ್ಲಿ ಶಾಸಕನಾಗಬೇಕಿತ್ತು, ಏಕೆಂದರೆ ತುಮಕೂರು ತಮ್ಮ ಸ್ವಂತ ತಾಲೂಕು. ಆದರೆ, ಬೆಳ್ಳಾವಿ ಕ್ಷೇತ್ರದಿಂದ ಬಂದು 2004ರಲ್ಲಿ ದೊಡ್ಡೇರಿ ಹೋಬಳಿಗೆ ಬಂದೆ. 1998ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದಾಗ ಮಧುಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಅತಿ ಹೆಚ್ಚು ಬಹುಮತ ಲಭಿಸಿತ್ತು ಎಂದು ರಾಜಣ್ಣ ನೆನಪಿಸಿಕೊಂಡರು. 1967 ರಿಂದ 1971ರವರೆಗೆ ಕಾಲೇಜು ವಿದ್ಯಾರ್ಥಿ ನಾಯಕರಾಗಿದ್ದ ತಮ್ಮ ರಾಜಕೀಯ ಹಿನ್ನೆಲೆಯನ್ನು ರಾಜಣ್ಣ ಈ ಸಂದರ್ಭದಲ್ಲಿ ಹಂಚಿಕೊಂಡರು.

ಇದನ್ನೂ ಓದಿ: ಸಿದ್ದರಾಮಯ್ಯನವರ ಬಗ್ಗೆಯೇ ಕೆಎನ್ ರಾಜಣ್ಣ ಅಚ್ಚರಿ ಮಾತು: ಕಾಂಗ್ರೆಸ್​​​​ನಲ್ಲಿ ಸಂಚಲನ

ಕಾಂಗ್ರೆಸ್​​ನಲ್ಲಿ ಸಂಪುಟ ಪುನಾರಚನೆ, ನವೆಂಬರ್ ಕ್ರಾಂತಿ ಇತ್ಯಾದಿ ವಿಚಾರಗಳ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ ರಾಜಣ್ಣ ಈ ಹೇಳಿಕೆ ನೀಡಿದ್ದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ