
ತುಮಕೂರು, ಫೆಬ್ರವರಿ 11: ಹೊಸದಾಗಿ ಖರೀದಿಸಿದ ಹಿಟಾಚಿ ಯಂತ್ರವು ಮೂರೇ ತಿಂಗಳಲ್ಲಿ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಹಕ ಶೋರೂಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಇಷ್ಟಾದರೂ ಕಂಪನಿ ಸ್ಪಂದಿಸದ ಕಾರಣ ಅಂತರಸನಹಳ್ಳಿ ಬಳಿಯಿರುವ ಟಾಟಾ ಹಿಟಾಚಿ (Tata Hitachi) ಶೋರೂಂ ಮುಂದೆ ಗ್ರಾಹಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಶೋರೂಂ ಮುಂದೆ ಶಾಮಿಯಾನ ಹಾಕಿ ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ತುಮಕೂರಿನ ಗಿರೀಶ್ ಎಂಬ ಗ್ರಾಹಕ ಸುಮಾರು ಐದು ತಿಂಗಳ ಹಿಂದೆ 52 ಲಕ್ಷ ರೂಪಾಯಿ ನೀಡಿ ಹೊಸ ಹಿಟಾಚಿ ಯಂತ್ರವನ್ನು ಖರೀದಿಸಿದ್ದರು. ಆದರೆ ಖರೀದಿಸಿದ ಮೂರೇ ತಿಂಗಳಲ್ಲಿ ಯಂತ್ರ ದೋಷಗೊಂಡು ಕಾರ್ಯನಿರ್ವಹಿಸದೇ ನಿಂತಿದ್ದು, ಅದನ್ನು ಸರಿಪಡಿಸುವಂತೆ ಕಂಪನಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕಂಪನಿ ನಡೆಗೆ ಬೇಸತ್ತ ಗಿರೀಶ್ ಶೋರೂಂ ಬಾಗಿಲಿಗೆ ಬೀಗ ಹಾಕಿ, ಹಿಟಾಚಿ ಯಂತ್ರವನ್ನೇ ಶೋರೂಂ ಪ್ರವೇಶದ್ವಾರಕ್ಕೆ ಅಡ್ಡವಾಗಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಶೋರೂಂ ಸಿಬ್ಬಂದಿ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ಹೊರಗಡೆಯೇ ಕಾಯುವಂತಾಗಿದೆ.
ಬುಧವಾರ ಶೋರೂಂ ಮುಂದೆ ಶಾಮಿಯಾನ ಹಾಕಿ ಧರಣಿ ಕುಳಿತಿರುವ ಗಿರೀಶ್, ಸಮಸ್ಯೆ ಬಗೆಹರಿಸಿ ಯಂತ್ರವನ್ನು ದುರಸ್ತಿ ಮಾಡಿಕೊಡುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಟಾಟಾ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸದಾಗಿ ಖರೀದಿಸಿದ ಹಿಟಾಚಿ ಕೆಟ್ಟುಹೋಯ್ತೆಂದು ಶೋರೂಮ್ಗೇ ಬೀಗ ಹಾಕಿದ ಗ್ರಾಹಕ!
ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಗ್ರಾಹಕ ಹಾಗೂ ಕಂಪನಿ ನಡುವೆ ಸಮಸ್ಯೆ ಹೇಗೆ ಬಗೆಹರಿಯಲಿದೆ ಎಂಬುದೇ ಸ್ಥಳೀಯರ ಕುತೂಹಲವಾಗಿದೆ.