ಕುಣಿಗಲ್ ಪಟ್ಟಣದಾದ್ಯಂತ ‘ಡಿಕೆಶಿ ಸಿಎಂ ಆಗಲಿ’ ಎಂಬ ಪ್ಲೆಕ್ಸ್‌: ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಹೋಮ

ತುಮಕೂರು ಜಿಲ್ಲೆಯ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಭಿಮಾನಿಗಳು ಚಂಡಿಕಾ ಹೋಮ ನಡೆಸಿದರು. ತಮ್ಮ ನಾಯಕರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಸಿಎಂ ಬದಲಾವಣೆ ಚರ್ಚೆಗಳ ನಡುವೆ ಈ ಹೋಮ ರಾಜಕೀಯ ಮಹತ್ವ ಪಡೆದಿದೆ. ಆದರೆ, ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಶಾಸಕ ರಂಗನಾಥ್ ನಿರಾಕರಿಸಿದ್ದಾರೆ.

ಕುಣಿಗಲ್  ಪಟ್ಟಣದಾದ್ಯಂತ ‘ಡಿಕೆಶಿ ಸಿಎಂ ಆಗಲಿ’ ಎಂಬ ಪ್ಲೆಕ್ಸ್‌: ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಹೋಮ
ಶಾಸಕ ರಂಗನಾಥ್ ನೇತೃತ್ವದಲ್ಲಿ ನವಚಂಡಿಕಾ ಹೋಮ
Updated By: Ganapathi Sharma

Updated on: Nov 12, 2025 | 5:03 PM

ತುಮಕೂರು, ನವೆಂಬರ್ 12: ತುಮಕೂರು ಜಿಲ್ಲೆಯ ಕುಣಿಗಲ್  (Kunigal) ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚಂಡಿಕಾ ಹೋಮ ಆಯೋಜಿಸಿದ್ದು, ತಮ್ಮ ನಾಯಕರು ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಹುಲಿಯೂರಮ್ಮ ದೇವಸ್ಥಾನದಲ್ಲಿ ನಡೆದ ಈ ಚಂಡಿಕಾ ಹೋಮ ಬೆಳಗ್ಗಿನಿಂದಲೇ ಭಕ್ತಿಭಾವದಿಂದ ನಡೆಯಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಹುಲಿಯೂರುದುರ್ಗ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ದಂಪತಿ, ವಿ.ಎಸ್.ಎಸ್.ಎನ್. ಅಧ್ಯಕ್ಷ ಮಧು ದಂಪತಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ದಂಪತಿ, ಪಂಚಾಯಿತಿ ಸದಸ್ಯ ನಾಗೇಶ್ ದಂಪತಿ ಸೇರಿದಂತೆ ಹಲವು ನಾಯಕರು ಹೋಮ ಹವನದಲ್ಲಿ ಪಾಲ್ಗೊಂಡಿದ್ದಾರೆ. ಪಟ್ಟಣದಾದ್ಯಂತ ಡಿಕೆಶಿ ಸಿಎಂ ಆಗಲಿ ಎಂಬ ಆಶಯದೊಂದಿಗೆ ಪ್ಲೆಕ್ಸ್‌ಗಳು ಅಲಂಕರಿಸಲ್ಪಟ್ಟಿವೆ.

ಕುಣಿಗಲ್ ಶಾಸಕ ರಂಗನಾಥ್ ಹೋಮ ಹವನದಲ್ಲಿ ಭಾಗಿಯಾಗಿ ಮಾತನಾಡಿ, ಹುಲಿಯೂರಮ್ಮ ದೇವಾಲಯ ಬಹುಶಕ್ತಿಯ ಸ್ಥಳ. ಹಿಂದೆಯೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಹಳೆಊರಮ್ಮ ದೇವಾಲಯಕ್ಕೆ ಬಂದು ಆಶೀರ್ವಾದ ಪಡೆದಿದ್ದರು. ಇದೇ ರೀತಿಯಾಗಿ ಈ ಬಾರಿ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸ್ ಪಕ್ಷದ ಎಲ್ಲ ನಾಯಕರಿಗೂ ಒಳ್ಳೆಯದು ಆಗಲಿ ಎಂಬ ಸಂಕಲ್ಪದ ಪೂಜೆ ನಡೆಸಲಾಗಿದೆ ಎಂದು ಹೇಳಿದರು.

ನವಚಂಡಿ ಯಾಗ ಎಂದರೆ 9 ದೇವತೆಗಳ ಶಕ್ತಿ ಆಹ್ವಾನಿಸುವ ಶಕ್ತಿಪೂಜೆ. ಪಕ್ಷಕ್ಕೆ ಶಕ್ತಿಯೂ, ಏಕತೆಯೂ ಬರಲಿ ಎಂಬ ಉದ್ದೇಶದಿಂದ ಈ ಹೋಮ ಹವನ ಆಯೋಜಿಸಲಾಗಿದೆ ಎಂದು ವಿವರಿಸಿದರು. ಹೋಮದಿಂದ ಡಿಕೆಶಿಗೆ ರಾಜಕೀಯ ಲಾಭವಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನನಗೆ ಈ ವಿಷಯದ ಬಗ್ಗೆ ಮಾತನಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಡಿಕೆಶಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಎಲ್ಲರಿಗೂ ಒಳ್ಳೆಯದು ಆಗಲಿ ಅಷ್ಟೇ ನಾನು ಹೇಳಬಲ್ಲೆ ಎಂದರು.

ಇದನ್ನೂ ಓದಿ: ಕುಣಿಗಲ್ ಶಾಸಕ ಡಾ.ರಂಗನಾಥ್​ಗೂ ತಟ್ಟಿದ ಲೋಡ್​ಶೆಡ್ಡಿಂಗ್ ಬಿಸಿ; ಟಾರ್ಚ್​ ಬೆಳಕಿನಲ್ಲಿ ಶಾಸಕರ ಸಭೆ

ತಿಂಗಳ ಹಿಂದಷ್ಟೇ ‘ಡಿಕೆ ಶಿವಕುಮಾರ್ ಸಿಎಂ ಆಗಬೇಕು’ ಎಂದು ಹೇಳಿದ್ದ ವಿಚಾರವಾಗಿ ಶಾಸಕ ರಂಗನಾಥ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲೇ ಮಾಜಿ ಸಂಸದ ಎಲ್​ಆರ್​ ಶಿವರಾಮೇಗೌಡ ಹಾಗೂ ಕುಣಿಗಲ್ ರಂಗನಾಥ್ ಹೇಳಿಕೆ ನೀಡಿದ್ದರು. ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಕೆಪಿಸಿಸಿ ಹೇಳಿದ್ದು, ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ನೋಟಿಸ್ ನೀಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ