ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ 8ನೇ ತರಗತಿ ಓದುತ್ತಿರುವ ತೇಜಸ್ ಹೆಸರು ಘೋಷಣೆ
ವಿವಿಧ ಮಠಾಧೀಶರ ಸಮ್ಮುಖದಲ್ಲಿ ಎಡೆಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ ಯತೀಶ್ವರ ಶಿವಾಚಾರ್ಯ ಶ್ರೀಗಳ ಸಹೋದರನ ಮಗ ತೇಜಸ್ ಹೆಸರನ್ನು ಘೋಷಿಸಿದ್ದಾರೆ.
ತುಮಕೂರು: ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯಶ್ರೀ ಲಿಂಗೈಕ್ಯ ಹಿನ್ನೆಲೆಯಲ್ಲಿ ಕುಪ್ಪೂರು ಗದ್ದುಗೆ ಮಠದ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ ಎಡೆಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ತೇಜಸ್ ಹೆಸರು ಘೋಷಿಸಿದ್ದಾರೆ.
ವಿವಿಧ ಮಠಾಧೀಶರ ಸಮ್ಮುಖದಲ್ಲಿ ಎಡೆಯೂರಿನ ರೇಣುಕಾ ಶಿವಾಚಾರ್ಯ ಶ್ರೀಗಳು ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ ಯತೀಶ್ವರ ಶಿವಾಚಾರ್ಯ ಶ್ರೀಗಳ ಸಹೋದರನ ಮಗ ತೇಜಸ್ ಹೆಸರನ್ನು ಘೋಷಿಸಿದ್ದಾರೆ.
ಕುಪ್ಪೂರು ಮಠದ ಮುಂದಿನ ಉತ್ತರಾಧಿಕಾರಿಯಾಗಿ ತೇಜಸ್ ಹೆಸರು ಘೋಷಣೆಯಾಗುತ್ತಿದ್ದಂತೆ ತೇಜಸ್ ಪೋಷಕರು ಮಗನನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ತಾಯಿ ಕಾಂತಾಮಣಿ, ತಂದೆ ಮಹೇಶ್ ಮತ್ತು ಕುಟುಂಬಸ್ಥರು ಯತೀಶ್ವರ ಶಿವಾಚಾರ್ಯಶ್ರೀಯವರನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾರೆ.
ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿ ತೇಜಸ್, 8 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಹೆಚ್ಚಿನ ಅಧ್ಯಯನಕ್ಕೆ ಸುತ್ತೂರುಗೆ ಕಳಿಸಲು ಕುಟುಂಬ ಹಾಗೂ ಸ್ವಾಮೀಜಿಗಳು ನಿರ್ಧಾರ ಮಾಡಿದ್ದಾರೆ. ಕುಪ್ಪೂರು ಗದ್ದುಗೆ ಮಠಕ್ಕೆ ವಂಶಪಾರಂಪರ್ಯವಾಗಿ ಉತ್ತರಾಧಿಕಾರಿಗಳ ನೇಮಕ ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಲಿಂಗೈಕ್ಯರಾದ ಯತೀಶ್ವರ ಶಿವಾಚಾರ್ಯಶ್ರೀಗಳ ಸಹೋದರನ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಉತ್ತರಾಧಿಕಾರಿ ಘೋಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರ ನೆರೆದಿದ್ದರು.
ಇನ್ನು ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಲಿಂಗೈಕ್ಯ ಶ್ರೀಗಳ ಇಚ್ಛೆಯಂತೆ ಅವರ ಪೂರ್ವಾಶ್ರಮದ ಸಹೋದರನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಣೆ ಮಾಡಲಾಗಿದೆ. ಗುರುಹಿರಿಯರು ಅವರ ಕುಟುಂಬದವರು ನಿನ್ನೆ ರಾತ್ರಿ ಚರ್ಚೆ ಮಾಡಿ ತೇಜಸ್ರನ್ನೂ ಒಪ್ಪಿಸಿ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ. ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಲು ಉತ್ತರಾಧಿಕಾರಿಯ ಅವಶ್ಯಕತೆ ಇದೆ. ಹಾಗಾಗಿ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಮುಂದೆ ಶಾಸ್ತ್ರಬದ್ದವಾಗಿ ಕಾರ್ಯಕ್ರಮ ಮಾಡಿ ಪೀಠಾರೋಹಣ ಮಾಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ತುಮಕೂರು: ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ; ಇಂದು ಮಧ್ಯಾಹ್ನ 12 ಗಂಟೆಗೆ ಅಂತಿಮ ವಿಧಿವಿಧಾನ
Published On - 1:30 pm, Sun, 26 September 21