ತುಮಕೂರು: ಬೆಟ್ಟದಲ್ಲಿ ಅಡಗಿ ಕುಳಿತಿದ್ದ ನಕಲಿ ನಕ್ಸಲ್ ವೆಂಕಟೇಶ್ ಕೊನೆಗೂ ಅರೆಸ್ಟ್!

ಪೊಲೀಸರ ನಿದ್ದೆಗೆಡಿಸಿದ್ದ ನಕಲಿ ನಕ್ಸಲ್ ವೆಂಕಟೇಶ್​​​ ಬಂಧನವಾಗಿದೆ.​​​ ಕಚ್ಚಾ ಬಾಂಬ್ ಸ್ಫೋಟ ಹಾಗೂ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಪತ್ರ ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ ಈತ, ಒಂದು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಇತ್ತೀಚೆಗೆ ಪೊಲೀಸರು ಕಾರ್ಯಾಚರಣೆ ಕೂಡ ಮಾಡಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ.

ತುಮಕೂರು: ಬೆಟ್ಟದಲ್ಲಿ ಅಡಗಿ ಕುಳಿತಿದ್ದ ನಕಲಿ ನಕ್ಸಲ್ ವೆಂಕಟೇಶ್ ಕೊನೆಗೂ ಅರೆಸ್ಟ್!
ಬಂಧಿತ ನಕಲಿ ನಕ್ಸಲ್​​ ವೆಂಕಟೇಶ್
Image Credit source: tv9 kannada
Edited By:

Updated on: Sep 16, 2026 | 4:49 PM

ತುಮಕೂರು, ಸೆಪ್ಟೆಂಬರ್​​ 16: ಪೊಲೀಸರ ನಿದ್ದೆಗೆಡಿಸಿದ್ದ ನಕಲಿ ನಕ್ಸಲ್ ಕೊನೆಗೂ ಅರೆಸ್ಟ್ ಆಗಿದ್ದಾನೆ. ಪಾವಗಡದ ಬೆಟ್ಟದಲ್ಲಿ ಕಳೆದೊಂದು ತಿಂಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಕನಿಕಲಬಂಡೆ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಚ್ಚಾ ಬಾಂಬ್ ಸ್ಫೋಟ, ನಕ್ಸಲ್ ಪಾರ್ಟಿ ಹೆಸರಲ್ಲಿ ಬೆದರಿಕೆ ಪತ್ರ ಸೇರಿ ಮೂರು ಪ್ರಕರಣಗಳಲ್ಲಿ ವೆಂಕಟೇಶ್ ವಾಂಟೆಡ್ ಆಗಿದ್ದ. ಬರೋಬ್ಬರಿ 250ಕ್ಕೂ ಹೆಚ್ಚು ಪೊಲೀಸರ ಕಾರ್ಯಾಚರಣೆ ಬಳಿಕ ನಕಲಿ ನಕ್ಸಲ್ ಅರೆಸ್ಟ್ ಆಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ಕೈಗೆ ಸಿಗದೇ ಬೆಟ್ಟದಲ್ಲಿ ಅಡಗಿದ್ದ ವೆಂಕಟೇಶ್

ಪಾವಗಡ ಪಟ್ಟಣ ಸಮೀಪದ ಕಡಮಲಕುಂಟೆ ಬೆಟ್ಟದಲ್ಲಿ ವೆಂಕಟೇಶ್​ ಅಡಗಿ ಕುಳಿತಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಆಧರಿಸಿ 250ಕ್ಕೂ ಹೆಚ್ಚು ಪೊಲೀಸರ ತಂಡ ಕೊಂಬಿಂಗ್ ಕಾರ್ಯಾಚರಣೆ ಮಾಡಿದೆ. ಕೊನೆಗೂ ನಿನ್ನೆ ರಾತ್ರಿ ಬೆಟ್ಟದಲ್ಲೇ ವೆಂಕಟೇಶ್‌ನನ್ನು ಬಂಧಿಸಿ ಠಾಣೆಗೆ ಕರೆತರಲಾಗಿದೆ. ಬಳಿಕ ವೈದ್ಯಕೀಯ ತಪಾಸಣೆ ಮಾಡಿಸಿ ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ದೇವಣ್ಣ ದಳಂ ಹೆಸರಿನಲ್ಲಿ ಬೆದರಿಕೆ ಪತ್ರ: ಪಾವಗಡದಲ್ಲಿ ನಕಲಿ ನಕ್ಸಲ್ ವೆಂಕಟೇಶ್‌ಗಾಗಿ ಪೊಲೀಸರ ಶೋಧ

ಅಷ್ಟಕ್ಕೂ ವೆಂಕಟೇಶ್‌ಗಾಗಿ ಇಷ್ಟೊಂದು ದೊಡ್ಡ ಕಾರ್ಯಾಚರಣೆ ನಡೆದಿದ್ದು ಏಕೆ ಎಂದು ನೋಡುವುದಾದರೆ, ಆಗಸ್ಟ್​ನಲ್ಲಿ ನಡೆದಿದ್ದ ಅದೊಂದು ಘಟನೆ. ಕನಿಕಲಬಂಡೆ ಗ್ರಾಮದ ರೈತರ ಪಂಪ್‌ಸೆಟ್ ಬಳಿ ಕಚ್ಚಾ ಬಾಂಬ್ ಇಟ್ಟು ಸ್ಫೋಟಿಸಲು ಯತ್ನಿಸಿದ್ದ. ಈತನ ಕೃತ್ಯಕ್ಕೆ ಇಡೀ ತಾಲೂಕು ಬೆಚ್ಚಿಬಿದಿತ್ತು. ಆ ಘಟನೆ ಬಳಿಕ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮೂಡಿತ್ತು. ಈ ಪ್ರಕರಣದಲ್ಲಿ ವೆಂಕಟೇಶ್ ಪತ್ನಿ ಸಾವಿತ್ರಮ್ಮ, ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು. ಆದರೆ ವೆಂಕಟೇಶ್ ಮಾತ್ರ ಪೊಲೀಸರ ಕೈಗೆ ಸಿಗದೇ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ.

5 ಲಕ್ಷ ರೂಪಾಯಿಗೆ ಬೇಡಿಕೆ

ಇದೊಂದೇ ಅಲ್ಲ, ವೆಂಕಟೇಶ್ ವಿರುದ್ಧ ಪಾವಗಡ ನಗರ ಠಾಣೆಯಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿವೆ. ದಾರಿಯಲ್ಲಿ ಅಡ್ಡಗಟ್ಟಿ ಹಣ ಕೇಳಿದ ಆರೋಪದ ಜೊತೆಗೆ, ಗಂಗಾಸಾಗರದ ನಾಗಭೂಷಣ ಎಂಬುವರ ಜಮೀನು ಬಳಿ ನಕ್ಸಲ್ ಪಾರ್ಟಿ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ಬೆದರಿಕೆ ಪತ್ರ ಬರೆದು 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟದ್ದ ಆರೋಪ ಇದೆ. ಸಿಪಿಐ ಪೀಪಲ್ಸ್ ವಾರ್ ಜನಶಕ್ತಿ ದೇವಣ್ಣ ದಳಂ ಪಾರ್ಟಿ ಹೆಸರಿನಲ್ಲಿ ಬೆದರಿಕೆ ಪತ್ರ ಬರೆದಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಒಂದರ ನಂತರ ಮತ್ತೊಂದರಂತೆ ಸರಣಿಯಾಗಿ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ವೆಂಕಟೇಶ್ ಪೊಲೀಸರಿಗೆ ತಲೆನೋವಾಗಿದ್ದ.

ವೆಂಕಟೇಶ್ ವಿರುದ್ಧ 10 ಪ್ರಕರಣಗಳು ದಾಖಲು

ಅಸಲಿಗೆ ವೆಂಕಟೇಶ್ ವಿರುದ್ಧ 2026ರಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಆದರೆ ಇದಕ್ಕೂ ಮೊದಲು ಅಂದರೆ 2012 ರಿಂದ 2019 ರವರೆಗೆ ಪಾವಗಡ ಹಾಗೂ ಸುತ್ತಮುತ್ತಲಿನ ಠಾಣೆಗಳಲ್ಲಿ ಕಳ್ಳತನ, ರಾಬರಿ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಆಂಧ್ರ ಪ್ರದೇಶದಲ್ಲಿ ಕೊಲೆ ಹಾಗೂ ಕೊಲೆ ಯತ್ನದ ಎರಡು ಪ್ರಕರಣಗಳು ಈತನ ಮೇಲೆ ದಾಖಲಾದ ಪ್ರಮುಖ ಕೇಸ್​​ಗಳಾಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ ನಕ್ಸಲ್​​ ನಿಗ್ರಹ ಪಡೆ ಮತ್ತೆ ರೀ ಆ್ಯಕ್ಟೀವ್? ಚಾಮರಾಜನಗರ ಬಾಂಬ್ ಬ್ಲಾಸ್ಟ್ ಪ್ರಕರಣ ಎಎನ್​​ಎಫ್​​ನಿಂದ ತನಿಖೆ?

ಸದ್ಯ ಆರೋಪಿಯನ್ನ ಬಂಧಿಸಿರುವ ಪಾವಗಡ ನಗರ ಪೊಲೀಸರು, ವೆಂಕಟೇಶ್‌ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ತನಿಖೆ ಆರಂಭವಾದ ಬಳಿಕವಷ್ಟೇ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us